ಮಂಡ್ಯ ನಗರದ ಜಿಲ್ಲಾಸ್ಪತ್ರೆಯ ಮಮತೆಯ ಮಡಿಲು ದಾಸೋಹ ಕೇಂದ್ರದಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ತಮ್ಮ ತಂದೆ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಚಿಕ್ಕಣ್ಣ ಅವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅನ್ನ ದಾಸೋಹ ನಡೆಸುವ ಮೂಲಕ ಮಾದರಿ ಕಾರ್ಯ ಮಾಡಿದರು.
ಇದೇ ವೇಳೆ ಬೇಬಿ ಬೆಟ್ಟದ ಶ್ರೀ ಶಿವಬಸವಸ್ವಾಮೀಜಿ ಅವರಿಗೆ ಚಿಕ್ಕಣ್ಣ ಸ್ಮರಣಾರ್ಥ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಂಜುನಾಥ್, ತಾಯಿ ತಂದೆಯರು ಇರುವಾಗ ಅವರ ಮಹತ್ವ ಮಕ್ಕಳಿಗೆ ತಿಳಿಯುವುದಿಲ್ಲ. ಆದರೆ, ಅವರು ಕಾಲವಾದ ಬಳಿಕ ಅವರ ಮಹತ್ವ ನಮಗೆ ಅರಿವಾಗುತ್ತದೆ. ಆದ್ದರಿಂದ ತಂದೆ ತಾಯಿಯರು ಇರುವಾಗಲೇ ಅವರನ್ನು ಪ್ರೀತಿ,ಗೌರವದಿಂದ ಕಾಣಬೇಕು. ನಮ್ಮ ಕನ್ನಡ ಸೇನೆಯ ಯಾವೊಬ್ಬ ಸದಸ್ಯರೂ ಕೂಡ ತಂದೆ ತಾಯಿಯರನ್ನು ಅನಾಥಾಶ್ರಮಕ್ಕೆ ಸೇರಿಸುವುದರ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.
ದಾಸೋಹ ಕೈಂಕರ್ಯದಲ್ಲಿ ಹೆಸರಾಗಿದ್ದ ಸಿದ್ದಗಂಗಾಶ್ರೀ ಡಾ.ಶಿವಕುಮಾರಸ್ವಾಮೀಜಿಯವರ ಮೇಲ್ಪಂಕ್ತಿಯಲ್ಲಿ ಸಾಗುತ್ತಿರುವ, ಅವರ ಶಿಷ್ಯರೂ ಆದ ಬೇಬಿಬೆಟ್ಟದ ಶಿವಬಸವಸ್ವಾಮೀಜಿ ಅವರ ಸಾಮಾಜಿಕ ಕಳಕಳಿಯು ನಮಗೆಲ್ಲ ಸ್ಫೂರ್ತಿಯಾಗಿದ್ದು, ಈ ಹಿನ್ನಲೆಯಲ್ಲಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಮತೆಯ ಮಡಿಲು ನಡೆಸುತ್ತಿರುವ ಮಂಗಲ ಯೋಗೇಶ್ ಮತ್ತು ಅವರ ಶ್ರೀಮತಿ ಅರುಣಕುಮಾರಿ ಅವರ ಈ ನಿತ್ಯ ದಾಸೋಹ ಕಾರ್ಯ ಮಾದರಿಯಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಶೀರ್ವಚನ ನೀಡಿದ ಶ್ರೀಶಿವಬಸವಸ್ವಾಮೀಜಿ, ನಾವ್ಯಾರೂ ದೇವರನ್ನು ಪ್ರತ್ಯಕ್ಷವಾಗಿ ಕಂಡವರಲ್ಲ. ಆದರೆ, ಹಸಿದವರಿಗೆ ಅನ್ನ ನೀಡುವಾತನ ಮೂಲಕ ನಾವು ದೇವರನ್ನು ಕಾಣಬಹುದು. ಅನ್ನವಿಕ್ಕುವಾತನೇ ನಿಜವಾದ ದೇವರು ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಮಂಗಲ ಯೋಗೇಶ್ ದಂಪತಿ ನಡೆಸುತ್ತಿರುವ ಈ ದಾಸೋಹ ಕಾರ್ಯ ಅತ್ಯಂತ ಮಹತ್ವದ್ದಾಗಿದೆ, ಯುವನಾಯಕರು ಅನುಕರಿಸುವಂತಹ ಸೇವಾ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಬಳಿಕ ಆಸ್ಪತ್ರೆಯಲ್ಲಿರುವ ಬಾಣಂತಿಯರು, ಅವರ ಕಡೆಯವರಿಗೆ ಶ್ರೀ ಶಿವಬಸವ ಸ್ವಾಮೀಜಿ ಊಟ ವಿತರಿಸಿದರು. ಈ ವೇಳೆ ರೈತನಾಯಕಿ ಸುನಂದಾ ಜಯರಾಂ, ಮುಖಂಡರಾದ ಮಹಾಂತಪ್ಪ, ಮಂಡಿಬೆಟ್ಟಹಳ್ಳಿ ಮಂಜುನಾಥ್, ಮಂಜುನಾಥ್ ಅವರ ತಾಯಿ ಜಯಮ್ಮ, ವೀರಣ್ಣ, ಗುತ್ತಲು ಚಂದ್ರು, ಫಯಾಜ್, ಶ್ರೀನಿವಾಸ್, ಮಂಗಲ ಯೋಗೇಶ್, ಬಸವೇಗೌಡ, ಪವಿತ್ರ ನಾಗರಾಜ್, ಪ್ರದೀಪ್ ಮತ್ತಿತರರಿದ್ದರು.




