Thursday, November 19, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ನೆನೆಗುದಿಗೆ ಬಿದ್ದ ಹೆಚ್.ಡಿ.ಕೆ ಗ್ರಾಮ ವಾಸ್ತವ್ಯ ನೆನಪಿನ ಸಮುದಾಯ ಭವನದ ಕಾಮಗಾರಿ 

ವಿಶೇಷ ವರದಿ: ಶ್ರೀನಿವಾಸ್, ಕೆ.ಆರ್.ಪೇಟೆ

ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮಕ್ಕೆ 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮಕ್ಕೆ ಬಂದು ಗ್ರಾಮ ವಾಸ್ತವ್ಯ ಮಾಡಿದ ಸವಿ ನೆನಪಿಗಾಗಿ ಗ್ರಾಮಸ್ಥರ ಕೋರಿಕೆಯ ಮೇರೆಗೆ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಿಸಿ ಆರಂಭಿಸಿದ ಸಮುದಾಯ ಭವನದ ಕಾಮಗಾರಿಯು ಬರೋಬ್ಬರಿ 15ವರ್ಷಗಳು ಕಳೆದರೂ ಇಂದಿಗೂ ಪೂರ್ಣವಾಗದೇ ಅರ್ಧಕ್ಕೇ ನಿಂತಿದ್ದು, ಗಿಡಗೆಂಟೆಗಳಿಂದ ಬೆಳೆದು  ಹಾವು-ಹಲ್ಲಿಗಳ ವಾಸ ಸ್ಥಾನವಾಗಿದೆಯಲ್ಲದೇ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.

ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮವು ಜಾನಪದ ಸಾಹಿತಿ, ಅರ್ಚಕ ರಂಗಸ್ವಾಮಿಭಟ್ಟ ಅವರ ಹುಟ್ಟೂರು ಆಗಿರುವ ಕಾರಣ ಸಾಂಸ್ಕೃತಿಕ ಗ್ರಾಮವಾಗಿದ್ದು ಹೇಮಾವತಿ ನದಿಯ ತಪ್ಪಲಿನಲ್ಲಿರುವ ಈ ಗ್ರಾಮವು ಸುಮಾರು 2ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಅತೀ ದೊಡ್ಡ ಗ್ರಾಮವಾಗಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 2006ರಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ರಚಿಸಿ ಮುಖ್ಯಮಂತ್ರಿಗಳಾಗಿದ್ದಾಗ ಬಂಡಿಹೊಳೆ ಗ್ರಾಮಕ್ಕೆ ಬಂದು ಕೃಷಿ ಪತ್ತಿನ ಸಹಕಾರ ಸಂಘದ ಅಟೆಂಡರ್ ಆಗಿದ್ದ ಕುಂಬಾರ ಸಮುದಾಯಕ್ಕೆ ಸೇರಿದ ಮೊಗಣ್ಣ ಅವರ ಜನತಾ ಕಾಲೋನಿಯ ಪುಟ್ಟ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗ್ರಾಮದ ಜನರ ಕುಂದು ಕೊರತೆಗಳನ್ನು ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ದೊರಕಿಸಿಕೊಟ್ಟಿದ್ದರು. ಮುಖ್ಯಮಂತ್ರಿಗಳು ಗ್ರಾಮಕ್ಕೆ ಬಂದು ಗ್ರಾಮ ವಾಸ್ತವ್ಯ ಮಾಡಿದ ಸವಿ ನೆನಪಿಗಾಗಿ  ಗ್ರಾಮದ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮುಖ್ಯಸ್ತೆಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿಸಿ ಕಾಮಗಾರಿ ಆರಂಭಿಸಲಾಗಿತ್ತು.

ನಂತರ ವಿವಿಧ ಅನುದಾನದಿಂದ ಶೇ.50ರಷ್ಟು ಕಾಮಗಾರಿ ಮುಗಿದಿದೆ. ಅನುಧಾನದ ಕೊರತೆಯಿಂದ  ಕಾಮಗಾರಿಯು ಮಾತ್ರ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿದೆ. ಇದರ ಪರಿಣಾಮವಾಗಿ ಕಟ್ಟಡವು ಸಾರ್ವಜನಿಕ ಸೇವೆಗೆ ಲಭ್ಯವಾಗದೇ ಗಿಡಗೆಂಟೆಗಳು ಬೆಳೆದುಕೊಂಡಿದೆ.  ಹಾವು-ಹಲ್ಲಿಗಳ ಆವಾಸ ಸ್ಥಾನವಾಗಿದೆ. ಜೊತೆಗೆ ಭೂತ ಬಂಗಲೆಯಂತಿರುವ ಕಟ್ಟಡವು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮದ ಅನುದಾನವನ್ನು ಬಳಸಿಕೊಂಡು ನಿರ್ಮಿಸಲು ಉದ್ಧೇಶಿಸಿದ್ದ ಸಮುದಾಯ ಭವನದ ಕಾಮಗಾರಿಯು ನೆಲ ಅಂತಸ್ತಿನ ಕಟ್ಟಡವು ಆರ್.ಸಿ.ಸಿ ಮೇಲ್ಛಾವಣಿಯ ಭಾಗ್ಯವನ್ನು ಕಂಡಿದ್ದು, ಭವನದ ಕಾಮಗಾರಿಯು ಅಲ್ಲಿಗೇ ನಿಂತಿದೆ.

ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು ಸಾರಥ್ಯದಲ್ಲಿ ಗ್ರಾಮಸ್ಥರು ನಿರ್ಮಾಣ ಮಾಡಲು ಹೊರಟಿದ್ದ ಸಮುದಾಯ ಭವನದ ನಿರ್ಮಾಣ ಕಾಮಗಾರಿ ಕೆಲಸವು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

ಪ್ರಸ್ತುತ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು ಜೆಡಿಎಸ್ ಪಕ್ಷದಲ್ಲಿ ಪಕ್ಷದ ಬಿ’ಫಾರಂ ದೊರೆಯದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಹೋರಾಟ ನೀಡಿ ಸೋಲೊಪ್ಪಿಕೊಂಡ ಗ್ರಾಮದ ಸುಪುತ್ರ ಬಿ.ಎಲ್.ದೇವರಾಜು ಅತ್ಯಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರೂ ಸಹ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿರುವುದರಿಂದ ಗ್ರಾಮದ ಜನತೆ ದೇವರಾಜು ಅವರ ಮೇಲೆ ಅಪಾರವಾದ ಭರವಸೆ ಹಾಗೂ ನಿರೀಕ್ಷೆಯನ್ನು ಹೊಂದಿದ್ದಾರೆ. ಅರ್ಧಕ್ಕೇ ನಿಂತಿರುವ ಗ್ರಾಮದ ಸಮುದಾಯ ಭವನದ ಕಾಮಗಾರಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಬಂದು  ಸಮುದಾಯ ಭವನದ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಜನತೆಯ ಸೇವೆಗೆ ದೊರೆಯುವಂತೆ ಮಾಡುವರೇ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಜೆಡಿಎಸ್, ಬಿಜೆಪಿ ಪಕ್ಷಗಳಿಂದ ಆಗದ ಗ್ರಾಮದ ಮುಖ್ಯ ಕೆಲಸವಾಗಿರುವ ಸಮುದಾಯ ಭವನದ ಕಾಮಗಾರಿಯನ್ನು ದೇವರಾಜು ಅವರು ಸವಾಲಾಗಿ ಸ್ವೀಕರಿಸಿ ಸಂಪೂರ್ಣಗೊಳಿಸಿದರೆ ಜನ್ಮಭೂಮಿಯ ಋಣವನ್ನು ತೀರಿಸಿದಂತಾಗುತ್ತದೆ ಎಂದು ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್‌ಕುಮಾರ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ದರ್ಶನ್ ಅಭಿಮಾನದಿಂದ ಹೇಳುತ್ತಾರೆ.

ಈ ಬಗ್ಗೆ ಬಿ.ಎಲ್.ದೇವರಾಜು ಅವರನ್ನು ಮಾತನಾಡಿಸಿದಾಗ ಹೌದು ಸಮುದಾಯ ಭವನದ ಕಾಮಗಾರಿಯು 15ವರ್ಷಗಳಿಂದ ಅರ್ಧಕ್ಕೇ ನಿಂತಿದೆ. ಸಮುದಾಯ ಭವನ ನಿರ್ಮಾಣ ಟ್ರಸ್ಟ್ ಸ್ಥಾಪಿಸಿ ಸಮುದಾಯ ಭವನದ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ದಿಕ್ಕಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿ ತಂದು, ಭವನದ ಕೆಲಸವನ್ನು ಸಂಪೂರ್ಣ ಮಾಡಿಸಿ ಜನ್ಮಭೂಮಿಯ ಸೇವೆ ಮಾಡಲು ದೊರಕಿರುವ ಅವಕಾಶವನ್ನು ಬಳಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಬಂಡಿಹೊಳೆ ಗ್ರಾಮದ ಹಿರಿಯ ಮುಖಂಡರಾದ ವಿಶ್ವನಾಥ, ರಾಜಶೇಖರ್, ರಾಮೇಗೌಡ, ರಂಗನಾಥೇಗೌಡ, ನಾಗೇಶ್ ಹಾಗೂ ಮಂಜುನಾಥ ಮಾತನಾಡಿ, ದೇವರಾಜು ಅವರು ಗ್ರಾಮದ ಮಗನೆಂಬ ಅಭಿಮಾನದಿಂದ ಬಂಡಿಹೊಳೆ ಸೇರಿದಂತೆ ನಮ್ಮ ಪಂಚಾಯಿತಿಯಲ್ಲಿ ಅತೀ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಆಡಳಿತದಲ್ಲಿರುವುದರಿಂದ ಗ್ರಾಮದ ಸೇವೆ ಮಾಡಲು ದೇವರಾಜು ಅವರಿಗೆ ಈಗ ಸದವಕಾಶ ಸಿಕ್ಕಿದೆ. ಅವರು ನಮ್ಮ ಗ್ರಾಮದ ಸಮುದಾಯ ಭವನದ ಕೆಲಸವನ್ನು ಸಂಪೂರ್ಣ ಮಾಡಿಸಿ ಉದ್ಘಾಟನೆ ಮಾಡಿ ಜನತೆಯ ಸೇವೆಗೆ ಸಮರ್ಪಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ