Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಚಿವ ಚಲುವರಾಯಸ್ವಾಮಿ ವಿರುದ್ದ ಆರೋಪಕ್ಕೆ ಖಂಡನೆ

ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ವಿರುದ್ದ ಸುಳ್ಳು ಆರೋಪ ಮಾಡುತ್ತಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರ ವರ್ತನೆಯನ್ನು ಕಾಂಗ್ರೆಸ್ ಮುಖಂಡ ಶಿವನಂಜು ತೀವ್ರವಾಗಿ ಖಂಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಇಡೀ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ನಾಗಮಂಗಲದಲ್ಲಿಯೂ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಇದನ್ನು ಸಹಿಸದೇ  ಮಾಜಿ ಶಾಸಕ ಸುರೇಶ್ ಗೌಡ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸಚಿವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿರುವುದು ಇದು ಸರಿಯಲ್ಲ. ನಮಗೂ ಕೂಡ ಮಾತನಾಡಲು ಗೊತ್ತಿದೆ. ಆದರೆ ಅದು ನಮ್ಮ ಸಂಸ್ಕೃತಿಯಲ್ಲ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಅಶೋಕ್ ಜಯರಾಂ, ವಿವೇಕಾನಂದ ಹಾಗೂ ಸಿದ್ದರಾಜು ಅವರಿಗೆ ಎರಡು ಬಿ ಫಾರಂ ಮತ್ತು ಕಲ್ಪನಾ ಸಿದ್ದರಾಜು, ಕೆಎನ್ ನಾಗೇಗೌಡರು ಸೇರಿದಂತೆ ಹಲವರಿಗೆ ಬಿ ಫಾರಂ ನೀಡಿ ಬಲಿ ಪಶು ಮಾಡಿದ್ದಾರೆ. ಇದು ಜೆಡಿಎಸ್ ವರಿಷ್ಠರ ಸಂಸ್ಕೃತಿಯಾಗಿದೆ ಎಂದು ತಿರುಗೇಟು ನೀಡಿದರು.

ಹೆಚ್ಎಎಲ್ ಹೌಸ್ ಬಿಲ್ಡಿಂಗ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಮಾಡಿರುವ ಹಗರಣವು ನಾಗಮಂಗಲ ಜನತೆಗೆ ಗೊತ್ತಿದೆ. ಇನ್ನು ಮುಂದೆ ಇದೇ ರೀತಿ ವರ್ತಿಸಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು .

2018ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿ ಎಂಬ ಆಶಯದಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಜಿಲ್ಲೆಯ ಜನತೆ ಗೆಲ್ಲಿಸಿಕೊಟ್ಟಿದ್ದರು. ಆದರೆ ಕ್ಷೇತ್ರದ ಜನರ ಆಶಯದಂತೆ ಮುಖ್ಯಮಂತ್ರಿ ಆದ ಕುಮಾರಸ್ವಾಮಿ ಅವರು ಕೆಲಸ ಮಾಡಲಿಲ್ಲ .ಅವರಿಂದ ಜಿಲ್ಲೆಗೆ ಆದ ಪ್ರಯೋಜನವೇನು ಎಂದು ಪ್ರಶ್ನಿಸಿದರು .

ಕುಮಾರಸ್ವಾಮಿ ಅವರ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವ ಉದ್ಯಮ, ಕಾರ್ಖಾನೆಯಾಗಲಿ ಬರಲಿಲ್ಲ. ಬದಲಿಗೆ ಮೈಶುಗರ್ ಕಾರ್ಖಾನೆಯು ಮುಚ್ಚಿ ಹೋಗಿತ್ತು. ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ 8,600 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ಆದರೆ ಆ ಹಣ ಬಿಡುಗಡೆಯಾಗಿದೆಯೇ ಎಂದು ಪ್ರಶ್ನಿಸಿದರು .

ಹಾಸನ ಜಿಲ್ಲೆಯಂತೆ ಮಂಡ್ಯ ಜಿಲ್ಲೆ ಯಾವುದೇ ಅಭಿವೃದ್ಧಿ ಕಾಣಲಿಲ್ಲ ಎಂದು ದೂರಿದ ಅವರು, ಎಚ್.ಡಿ ಕುಮಾರಸ್ವಾಮಿ ಅವರು ಬಿ ಫಾರಂ ಗಾಗಿ ದೆಹಲಿಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಒಮ್ಮೆಯಾದರೂ ಬರ ಪರಿಹಾರದ ಹಣ ಬಿಡುಗಡೆ, ಮೇಕೆದಾಟು ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೀಲಾರಕೃಷ್ಣ, ಶ್ರೀಧರ್, ಶಿವಲಿಂಗು, ಸೋಮಶೇಖರ್ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ