Sunday, November 22, 2026

ಪ್ರಾಯೋಗಿಕ ಆವೃತ್ತಿ

ವಯನಾಡ್ ಭೂಕುಸಿತ| ಕೆ.ಆರ್.ಪೇಟೆಯ ಸಂತ್ರಸ್ಥ ಕುಟುಂಬಕ್ಕೆ ನಿಖಿಲ್ ಕುಮಾರಸ್ವಾಮಿ ಸಾಂತ್ವನ

ಕೇರಳ ರಾಜ್ಯದ ವಯನಾಡ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ‌ತಾಲ್ಲೂಕಿನ ಕಸಬಾ ಹೋಬಳಿ ಕತ್ತರಘಟ್ಟ ಗ್ರಾಮದ ನಿವಾಸಿಗಳಾದ ಲೀಲಾವತಿ ಹಾಗೂ ಚಿಕ್ಕ ಮಗು ನಿಹಾಲ್ ಮರಣ ಹೊಂದಿದ್ದ ಸುದ್ದಿ ತಿಳಿದ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಕ್ಷೇತ್ರದ ಶಾಸಕರು ಹೆಚ್ ಟಿ ಮಂಜು ಅವರ ಜೊತೆಗೆ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಜೊತೆಗೆ ಎರಡು ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.

ದುರಂತದಲ್ಲಿ ಮೃತರಾದ ಲೀಲಾವತಿ ಹಾಗೂ ಪುಟ್ಟ ಕಂದ ನಿಹಾಲ್ ಅವರ ಪಾರ್ಥಿವ ಶರೀರವನ್ನು ನಮ್ಮ ಕುಟುಂಬಕ್ಕೆ ಹಸ್ತಾಂತರ ಮಾಡಿಕೊಡಲು ಸಹಾಯ ಮಾಡುವಂತೆ ಕುಟುಂಬಸ್ಥರು ನಿಖಿಲ್ ಹತ್ತಿರ ಮನವಿ ಮಾಡಿದರು.

ಇಂದು ಬೆಳಿಗ್ಗೆ ಕತ್ತರಘಟ್ಟ ಗ್ರಾಮಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮರಣ ಹೊಂದಿದ ಎರಡೂ ಕುಟುಂಬದ ಸದಸ್ಯರ ಜೊತೆಗೆ ‌ಸ್ವಲ್ಪ ಹೊತ್ತು ಮಾತನಾಡಿದ ಅವರು, ನಮ್ಮ ತಂದೆಯವರಾದ ಕುಮಾರಣ್ಣ ಅವರು ಡಿ‌ಸಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದರು.

ಇಂತಹ ಪ್ರಕರಣಗಳು ಸಂಭವಿಸಬಾರದಿತ್ತು. ಪ್ರಕೃತಿ ವಿಕೋಪದಿಂದ ಸಾವು ನೋವುಗಳು ಆಗಿವೆ. ಹೋದ ಜೀವವನ್ನು ತಂದು ಕೊಡಲು‌ ಯಾರಿಂದಲೂ ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಬದುಕುಳಿದ ವ್ಯಕ್ತಿಗಳ ಕುಟುಂಬಕ್ಕೆ ನಾವೆಲ್ಲರೂ ಕೈ ಜೋಡಿಸಿದಾಗ ಮಾತ್ರ ಜೀವನ ಸಾರ್ಥಕತೆ ಆಗುತ್ತದೆ. ಇಂತಹ ಸಮಯದಲ್ಲಿ ಇಂತಹ ಕುಟುಂಬಗಳ ಜೊತೆಗೆ ಶಕ್ತಿಯಾಗಿ ನಿಲ್ಲಬೇಕು ಎಂದರು.

ಶಾಸಕ ಹೆಚ್ ಟಿ ಮಂಜು ಮಾತನಾಡಿ, ಇಂತಹ ಸಂದರ್ಭ ಯಾರಿಗೂ ಬರಬಾರದು. ಟಿ ವಿ ಹಾಗೂ ‌ಪತ್ರಿಕೆಯಲ್ಲಿ ವಿಷಯವನ್ನು ತಿಳಿದು ಮನಸ್ಸಿಗೆ ಬಹಳ ನೋವುಂಟಾಯಿತು. ಮರಣ ಹೊಂದಿದ ಮೃತದೇಹಗಳನ್ನು ಕತ್ತರಘಟ್ಟ ಗ್ರಾಮಕ್ಕೆ ತರಲು‌ ವ್ಯವಸ್ಥೆ ಮಾಡಲು ಕುಮಾರಣ್ಣ ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಶಾಸಕನಾಗಿ ನಿಮ್ಮ ನೋವಿನಲ್ಲಿ ನಾನು‌ ಭಾಗಿಯಾಗುತ್ತೇನೆ. ಧೈರ್ಯವಾಗಿರಿ ನಿಮ್ಮ ಜೊತೆಗೆ ಶಕ್ತಿಯಾಗಿ ನಿಲ್ಲುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅದ್ಯಕ್ಷ ಜಾನಕೀರಾಂ, ಹೆಚ್.ಟಿ ಲೋಕೇಶ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಮನ್ಮುಲ್ ಮಾಜಿ‌ಅಧ್ಯಕ್ಷ ಎಂ ಬಿ ಹರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಮೋಹನ್, ತಾ.ಪಂ. ಮಾಜಿ‌ ಸದಸ್ಯ ಮೋಹನ್, ಕುರುಬಹಳ್ಳಿ ನಾಗೇಶ್, ನಾಗೇಶ್, ಸಾಮಿಲ್ ರವಿಕುಮಾರ್, ಶಾಸಕರ ಆಪ್ತ ಸಹಾಯಕ ಪ್ರತಾಪ್ ಅರಳಕುಪ್ಪೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ