Saturday, November 21, 2026

ಪ್ರಾಯೋಗಿಕ ಆವೃತ್ತಿ

ಚನ್ನಪಟ್ಟಣ | ನಾಳೆ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆ ; ಚಲುವರಾಯಸ್ವಾಮಿ

ನಾಳೆ (ನ.11) ಚನ್ನಪಟ್ಟಣ ಉಪಚುನಾವಣೆ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅನೇಕ ಮಂತ್ರಿಗಳು, ಶಾಸಕರು ಸೇರಿದಂತೆ ಬಹಿರಂಗ ಸಭೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಮತದಾರರು ಭಾಗವಹಿಸುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ಚನ್ನಪಟ್ಟಣ ಕಾಂಗ್ರೆಸ್ ಕ್ಯಾಂಪ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಮೂರು ದಿನಗಳಲ್ಲಿ ಮತದಾನ ನಡೆಯಲಿದೆ. ಕ್ಷೇತ್ರದ ಎಲ್ಲಾ ಸ್ಥಳೀಯ ಕಾರ್ಯಕರ್ತರು ಮುಖಂಡರು ಮನೆ ಮನೆಗೆ ತೆರಳಿ ಮಾತಯಾಚನೆ ಮಾಡಿ, ನಾಳೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಲವು ವಿಷಯ ಹಂಚಿಕೊಳ್ಳಲಿದ್ದು ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕೋರಿದರು.

ಆಮಿಷವೊಡ್ಡಿ ಚುನಾವಣೆ ಮಾಡುತ್ತಿದ್ದಾರೆ

ಚನ್ನಪಟ್ಟಣ ಚುನಾವಣೆಯ ಸಲುವಾಗಿ ಜೆಡಿಎಸ್ ಪಕ್ಷದವರು ಭಾವನಾತ್ಮಕ ಮಾತುಗಳನ್ನಡಿ, ಆಮಿಷವೊಡ್ಡಿ ಚುನಾವಣೆ ಮಾಡುತ್ತಿದ್ದಾರೆ. ಹಣ, ಆಮಿಷ ಭಾವನಾತ್ಮಕ ಮಾತುಗಳು ಕೆಲಸ ಮಾಡೋದಿಲ್ಲ ಎಂದು ಹೇಳಿದರು.

ಈಗ ನಡೆಯಲಿರುವ ಉಪಚುನಾವಣೆಯಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಇದರ ಫಲಿತಾಂಶದಿಂದ ಯಾವ ಪಕ್ಷದ ಮೇಲು ಯಾವುದೇ ಪರಿಣಾಮ ಬೀರಲ್ಲಾ, ರಾಜ್ಯದ ಅಥವಾ ಕೇಂದ್ರದ ಅಧಿಕಾರದಲ್ಲಿ ಬದಲಾವಣೆಯೂ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಯೋಗೇಶ್ವರ್ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜೊತೆಗೂಡಿ ಅವರು ಆರಂಭಿಸಿದ ಕೆರೆ ತುಂಬಿಸುವ ಕೆಲಸವನ್ನು ಸಂಪೂರ್ಣ ಯಶಸ್ವಿಯಾಗಲಿದೆ, ಚನ್ನಪಟ್ಟಣದ ನೀರಾವರಿ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.

ಚನ್ನಪಟ್ಟಣದ ಜನ ಭಾವನಾತ್ಮಕ ಮಾತುಗಳಿಗೆ ಮತ್ತು ಭಾವನಾತ್ಮಕ ಕಾರಣಕ್ಕೆ ಮತ ಹಾಕಬೇಡಿ ಚನ್ನಪಟ್ಟಣದ ಅಭಿವೃದ್ಧಿಗಾಗಿ ಮತ ನೀಡಿ ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದಾಗಿನಿಂದಲೂ ಇಲ್ಲಿಯವರೆಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 500 ಕೋಟಿಯಷ್ಟು ಕೆಲಸಕ್ಕೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ರಾಮನಗರ, ಚನ್ನಪಟ್ಟಣ ಶಾಸಕರಾಗಿ ಮುಖ್ಯರಸ್ತೆ ಮಾಡಿದ್ದು ಬಿಟ್ಟರೇ ಬೇರಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಆದ್ದರಿಂದ ಈ ಬಾರಿ ಯೋಗೇಶ್ವರ್ ಕೈ ಹಿಡಿದರೆ ಚನ್ನಪಟ್ಟಣ ಅಭಿವೃದ್ಧಿ ವಿಷಯವಾಗಿ ನಮಗೂ ಜವಾಬ್ದಾರಿ ಇರಲಿದೆ ಎಂದರು.

ಚುನಾವಣೆಯಲ್ಲಿ ಮಾಡುವ ಆರೋಪ, ಪ್ರತ್ಯಾರೋಪ, ಗಾಸಿಪ್ ಚುನಾವಣೆ ಮುಗಿಯುವವರೆಗೂ ಮಾತ್ರ, ಚುನಾವಣೆ ಆದ ಮೇಲೆ ಆರೋಪ, ಪ್ರತ್ಯಾರೋಪಗಳು ಇರೋದಿಲ್ಲ, ಅವರವರ ಸಮಸ್ಯೆ ಅವರೇ ನೋಡಿಕೊಳ್ಳುತ್ತಾರೆ ಎಂದರು.

ನಮ್ಮ ಸರ್ಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ಜನರಿಗೆ ಅತ್ಯವಶ್ಯಕ ಸವಲತ್ತು ನೀಡುತ್ತಿದೆ. ಆರ್ಥಿಕವಾಗಿ ಸದೃಢ ಮಾಡುತ್ತಿವೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಬಗೆಹರಿಸಿಕೊಡಲಾಗಿದೆ, ಕೃಷಿ ಇಲಾಖೆಯಿಂದ 2100 ಕೋಟಿ ರೂ ಪರಿಹಾರ, 1000 ಕೋಟಿ ರೂ ಸಹಾಯಧನ, ಕೇಂದ್ರದಿಂದ ಬೆಳೆ ಹಾನಿಗೆ ಸಂಬಂಧ ನ್ಯಾಯಾಲದ ಮೊರೆಹೋಗಿ ಸುಪ್ರೀಂ ಕೋರ್ಟ್ ನಿಂದ 3600 ಕೋಟಿ ರೂ ಹಣ ಪಡೆದು ಬೆಳೆ ಪರಿಹಾರ ನೀಡಿದ್ದೇವೆ. ಎಲ್ಲಾ ಪರಿಹಾರಗಳು ನೇರವಾಗಿ ಫಲನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಿದ್ದೇವೆ ಎಂದರು.

ಅವರದ್ದೇ ಪಕ್ಷ ಅಧಿಕಾರಕ್ಕೆ ಬಂದರು ಸಹಿಸದ ದೇವೇಗೌಡರು

ದೇವೇಗೌಡರು ಅವರದ್ದೇ ಪಕ್ಷದ ಸರ್ಕಾರ ಇದ್ದರು ಅದು 5 ವರ್ಷ ಇರುತ್ತೆ ಎಂದು ಹೇಳೋದಿಲ್ಲ. ಇದು ಯಾವಾಗ ಬಿದ್ದೋಗುತೋ ಅಂತಾನೆ ಹೇಳ್ತಾರೆ. ಪ್ರಧಾನಿಯಾಗಿ 11 ತಿಂಗಳು, ಸಿಎಂ ಆಗಿ 17 ತಿಂಗಳು, ಅವರ ಮಗ ಸಿಎಂ ಆಗಿ 20 ತಿಂಗಳು ಅಧಿಕಾರ ನೋಡಿದ್ದಾರೆ. ಅದ್ಯಾಕೋ ಅವರಿಗೆ ಸರ್ಕಾರಗಳನ್ನು ಪೂರ್ಣವಾಧಿ ನಡೆಸಲು ಅವಕಾಶ ಸಿಗದ ಕಾರಣ ಹಾಗೆ ಹೇಳುತ್ತಾರೆ ಎಂದು ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂದು ಹೇಳಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದರು.

ದೇವೇಗೌಡರು ಹಿರಿಯರಿದ್ದಾರೆ. ಅವರು ಮಾತನಾಡುವಾಗ ಗಮನ ಹರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರವನ್ನು, ಸರ್ಕಾರದ ಜನಪ್ರತಿನಿಧಿಗಳನ್ನು ತೆಗೆಯುತ್ತೇವೆ ಎನ್ನುವುದು ಅಪರಾಧ. ಈ ವಿಷಯವಾಗಿ ನಾವು ನ್ಯಾಯಾಲಯಕ್ಕೂ ಹೋಗುವ ಅವಕಾಶವಿದೆ. ಅವರ ಮೇಲಿನ ಗೌರವದಿಂದ ಹೋಗುತಿಲ್ಲ ಎಂದು ಹೇಳಿದರು.

ಮೇಕೆದಾಟು ವಿಚಾರವಾಗಿ ಮೋದಿ ಹತ್ರ ಮಾತಾಡಲಿ

ಜೆಡಿಎಸ್ ಪಕ್ಷದ ಅಭಿವೃದ್ಧಿ ಕೆಲಸಕ್ಕೆ ನಾವು ಅಡ್ಡಗಲು ಹಾಕಿಲ್ಲ, ಲೋಕಸಭ ಸದಸ್ಯನಾದ ಒಂದು ತಿಂಗಳಲ್ಲಿ ಮೇಕೆದಾಟು ಮಾಡುತ್ತೇನೆ ಎಂದರು. ಈಗ ಆಗಲ್ಲ ಅನ್ನುತಿದ್ದಾರೆ. ಮೇಕೆದಾಟು ವಿಚಾರವಾಗಿ ಮೋದಿ ಹತ್ರ ಮಾತಾಡಲಿ ಎಂದು ಸವಾಲು ಹಾಕಿದರು.

ಗೋವಾ ಮತ್ತು ಕರ್ನಾಟಕದಲ್ಲಿ ಬಿಜೆಪಿಯಡ್ದೆ ಸರ್ಕಾರ ಇದ್ದಾಗ ಮಹಾದಾಯಿ ಸಮಸ್ಯೆ ಯಾಕೆ ಪರಿಹಾರಿಸಲಿಲ್ಲ, ರಾಜ್ಯದಲ್ಲಿ 27 ಮಂದಿ ಬಿಜೆಪಿ ಲೋಕಸಭಾ ಸದಸ್ಯರಿದ್ದರು. ಅನುಮತಿ ಪಡೆದು ಯಾಕೆ ಮೇಕೆದಾಟು ಯೋಜನೆಗೆ ಅನುಮತಿ ತರಲಿಲ್ಲ. ರಾಜಕೀಯವಾಗಿ ತಮಿಳುನಾಡು ವಿರುದ್ಧ ಇದ್ದೇವೆ, ಆದರೆ ತಮಿಳುನಾಡಿ ಸರ್ಕಾರ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುತ್ತಾರೆ ಎಂದು ಮಿತ್ರಪಕ್ಷದ ಬಳಿ ಮಾತನಾಡುವಂತೆ ಜೆಡಿಎಸ್ ನಾಯಕರ ಮಾತಿಗೆ ಪ್ರತಿಕ್ರಿಯೆ ನೀಡಿದರು.

ದೇವೇಗೌಡರು ತಮ್ಮನ್ನು ಆಕಾಶದಲ್ಲಿದ್ದೇವೆ ಎನ್ನುತ್ತಾರೆ. ಕಾಂಗ್ರೆಸ್ ನವರು ಭೂಮಿ ಎನ್ನುತ್ತಾರೆ, ಹೌದು ನಾವು ಭೂಮಿಮೇಲೆಯೇ ಇರುತ್ತೆವೆ. ನಾವು ಮನುಷ್ಯರು, ಮನುಷ್ಯರ ನಡುವೆ ಇದ್ದು ಕೆಲಸ ಮಾಡುತ್ತೇವೆ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ಸರ್ಕಾರ ಕಿತ್ತುಹೋಗೆಯಲು ಹೋರಾಟ ಮಾಡುತ್ತೇನೆ ಎನ್ನುತ್ತಾರೆ. ದೇವೇಗೌಡರು ಮೊದಲು ಹಾಸನದಲ್ಲಿ ಏನಾಯ್ತು, 3 ತಿಂಗಳು ಮನೇಲಿ ಯಾಕಿದ್ದರು ಎಂಬುದು ಹೇಳಲಿ, ಹಾಸನದಲ್ಲಿ ನಡೆದ ವಿಷಯವಾಗಿ ದೇವೇಗೌಡರು ಹೋರಾಟ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ನಂಬಿ ಗೆಲ್ಲಿಸಿದ ಚನ್ನಪಟ್ಟಣದ ಜನರ ಕೈಬಿಟ್ಟ ಕುಮಾರಸ್ವಾಮಿ

ಕುಮಾರಸ್ವಾಮಿ ಯಾರ ನಂಬಿಕೆಗೂ ಅರ್ಹ ವ್ಯಕ್ತಿ ಅಲ್ಲ, ಕೇಂದ್ರದಲ್ಲಿ ಮಂತ್ರಿಯಾಗಲು ಮಂಡ್ಯದಲ್ಲಿ ಮಗನಿಗೂ ಟಿಕೆಟ್ ತಪಿಸಿದ್ರೂ, ಅವರನ್ನು ನಂಬಿ ಗೆಲ್ಲಿಸಿದ ಚನ್ನಪಟ್ಟಣದ ಜನರ ಕೈಯನ್ನೂ ಬಿಟ್ಟರು. ಇಂತವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನೆಯನ್ನಿತ್ತರು.

ನಾನು ಈ ಹಿಂದೆ ಕುಮಾರಸ್ವಾಮಿ ಜೊತೆ ಇದ್ದೆ, ಅವರು ಚುನಾವಣೆ ಅಂದ್ರೆ ಹೇಗೆ ಕಲೆಕ್ಷನ್ ಮಾಡ್ತಾರೆ ಅನ್ನೋದು ಗೊತ್ತು, ಅವರ ಹಾಗೆ ರಾಜಕಾರಣಿಗಳ ಬಗ್ಗೆ ಲಘುವಾಗಿ ಮಾತನಾಡುವುದು ನನಗೆ ಗೊತ್ತಿಲ್ಲ, ಅವರಂತೆ ಪೆನ್ಡ್ರೈವ್ ಇಟ್ಟಿಲ್ಲ, ಆದರೆ ಅವರ ಬಗ್ಗೆ ಮಾಹಿತಿ ಇದೇ ಬೇಕಾದರೆ ಕೊಡ್ತಿನಿ ಎಂದು ಇದೆ ವೇಳೆ ತಿಳಿಸಿದರು.

ಎದುರಾಳಿ ಪಕ್ಷದ ಕುಮಾರಸ್ವಾಮಿಯಾಗಲಿ, ದೇವೇಗೌಡರಾಗಲಿ ಯಾರ ಬಗ್ಗೆಯೂ ಬಗ್ಗೆ ದ್ವೇಷ ಇಲ್ಲ, ಇನ್ನು ನಿಖಿಲ್ ಮೇಲೆ ಯಾವುದೇ ರೀತಿಯ ಕಲ್ಮಶ, ಕೋಪವಂತೂ ಇಲ್ಲವೇ ಇಲ್ಲ. ಇದು ಚುನಾವಣೆ ಮಾತ್ರ ಚನ್ನಪಟ್ಟಣದ ಅಭಿವೃದ್ಧಿ ಕೆಲಸ ಮಾಡುವವರು ಬೇಕಿದ್ದಾರೆ. ಅಭಿವೃದ್ಧಿಗಾಗಿ ಯೋಗೇಶ್ವರ್ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ