ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ ಷಡ್ಯಂತ್ರ ರೂಪಿಸಿ ರಾಜ್ಯಪಾಲರಿಗೆ ಸುಳ್ಳು ದೂರು ನೀಡಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ಶಾಸಕ ರವಿ ಕುಮಾರ್ ಗಣಿಗ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಗರದ ಸಂಜಯ ವೃತ್ತದಲ್ಲಿ ಜಮಾಯಿಸಿ, ಅಲ್ಲಿಂದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ದ್ವೇಷ ರಾಜಕಾರಣ
ಜೆಡಿಎಸ್ ನಾಯಕರು ಸಚಿವ ಚಲುವರಾಯಸ್ವಾಮಿ ಅಧಿಕಾರದಲ್ಲಿರುವುದನ್ನು ಸಹಿಸದೇ ಅಪಪ್ರಚಾರ ಮಾಡುತ್ತಿದ್ದಾರೆ, ಈ ಮೂಲಕ ಮಂಡ್ಯ ಜಿಲ್ಲೆಯ ಜನರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಧಿಕ್ಕಾರದ ಘೋಷಣೆ ಕೂಗಿದರು
ಮಂಡ್ಯ ಜಿಲ್ಲೆಯ ಏಳು ತಾಲೂಕಿನ ಕೃಷಿ ಇಲಾಖೆಯ ಕೃಷಿ ಸಹಾಯಕ ಉಪ ನಿರ್ದೇಶಕರ ಹೆಸರಿನಲ್ಲಿ ನಕಲಿ ಸಹಿ ಬಳಸಿ, ಇಲ್ಲಸಲ್ಲದ ಆರೋಪಗಳನ್ನು ಸೃಷ್ಟಿಸಿ ರಾಜ್ಯಪಾಲರಿಗೆ ದೂರು ನೀಡಿರುವುದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಸಚಿವರಿಗೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಮತ್ತು ಕಳಂಕ ತರಲು ಕಿಡಿಗೇಡಿಗಳು ಸೃಷ್ಟಿಸಿರುವ ನಕಲಿ ಪತ್ರವಾಗಿದೆ ಎಂದು ದೂರಿದರು. ದೂರು ಪತ್ರದಲ್ಲಿ ಹೆಸರಿಸಿರುವಂತೆ ಮಂಡ್ಯ ಜಿಲ್ಲೆಯಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿಲ್ಲ ಇದರ ಹಿಂದೆ ರಾಜಕೀಯ ದ್ವೇಷ ಹೊಗೆಯಾಡುತ್ತಿದೆ ಎಂದು ಖಂಡಿಸಿದರು.
ನಕಲಿ ದೂರು ಸಲ್ಲಿಸಿ ಬ್ಲಾಕ್ ಮೇಲ್ ತಂತ್ರ ಬಳಸುವ ಮೂಲಕ ಜನಪ್ರತಿನಿಧಿಗಳನ್ನು ಬೆದರಿಸುವ ಬಹುದೊಡ್ಡ ಹುನ್ನಾರ ನಡೆದಿದೆ. ಇದರ ಹಿಂದೆದೊಡ್ಡ ಜಾಲವೇ ಅಡಗಿದೆ. ಇಂತಹವರನ್ನು ಪತ್ತೆಹಚ್ಚಿಬಗ್ಗು ಬಡಿಯದಿದ್ದರೆ ಜನಪ್ರತಿನಿಧಿ ಮತ್ತು ದಕ್ಷ ಅಧಿಕಾರಿಗಳಿಗೆ ನಿರ್ಭೀತಿಯಿಂದ ಸಾರ್ವಜನಿಕರ ಸೇವೆ ಮಾಡಲು ಸಾಧ್ಯವಾಗುವುದಿಲ್ಲ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಎಚ್.ಪಿ ರಾಮು, ಕೆ.ಬಿ ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿ ಗೌಡ, ಉಪಾಧ್ಯಕ್ಷ ಹಾಲಹಳ್ಳಿ ಅಶೋಕ್, ಮುಖಂಡರಾದ ಕೀಲಾರ ರಾಧಾಕೃಷ್ಣ, ಟಿ.ಎಸ್. ಸತ್ಯಾನಂದ, ಸಿ.ಎಂ. ದ್ಯಾವಪ್ಪ, ತ್ಯಾಗರಾಜ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಕಾಂಗ್ರೆಸ್ ಮುಖಂಡರಾದ ಮುನಾವರ್ ಖಾನ್, ಡಾ. ಕೃಷ್ಣ, ರೇವಣ್ಣ, ಸುರೇಶ್ ಕಂಠಿ, ದೀಪಕ್, ಆನಂದ್ ಚಿಕ್ಕ ಮಂಡ್ಯ, ಅಂಜನಾ ಶ್ರೀಕಾಂತ್, ಶುಭದಾಯಿನಿ ತಗಹಳ್ಳಿ ಯಶೋಧ, ಅನುರಾಧ, ನಗರಸಭೆ ಸದಸ್ಯರಾದ ನಹಿಮ್, ಶ್ರೀಧರ್, ಎಂ.ಸಿ. ಶಿವಪ್ರಕಾಶ್ ಪವಿತ್ರ ಬೋರೇಗೌಡ, ಯುವ ಮುಖಂಡರಾದ ವಿಜಯ್ ಕುಮಾರ್, ಸುಂಡಹಳ್ಳಿ ಮಂಜುನಾಥ್, ನವೀನ್ ಕುಮಾತ್ ಮತ್ತಿತರರು ಭಾಗವಹಿಸಿದ್ದರು.




