ಮಂಡ್ಯ : ದೇಶದಲ್ಲಿ ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಆರೋಪ ಹೊತ್ತಿರುವ ಭಾರತದ ಚುನಾವಣಾ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಸರ್.ಎಂ.ವಿ. ಪ್ರತಿಮೆ ಮುಂಭಾಗ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹನ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಧರ್ಭದಲ್ಲಿ ಮಹಿಳಾ ಪೋಲಿಸ್ ಅಧಿಕಾರಿ ಳಗೆ ಬಿದ್ದರು, ಕಾರ್ಯಕರ್ತರಿಂದ ಪ್ರತಿಕೃತಿಯನ್ನು ಕಿತ್ತುಕೊಳ್ಳಲು ಪೊಲೀಸರು ಹರಸಾಹಸ ಪಟ್ಟರು. ನಂತರ ಪ್ರತಿಭಟನಕಾರರನ್ನು ಮನವೊಲಿಸಲಾಯಿತು. ನಂತರ ಎಸ್ ಪಿ ಆಫೀಸ್ ರಸ್ತೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಎಸ್ಐಆರ್ ರದ್ಧಾಗಬೇಕು ಎಂಬ ಘೋಷಣೆಯನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಕುಮಾರ್ ಕೊಪ್ಪ ಮಾತನಾಡಿ ಚುನಾವಣಾ ಆಯೋಗವು ಒಂದು ಪಕ್ಷಾತೀತ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಂತಹ ಸಂಸ್ಥೆಯಾಗಿದೆ. ಆದರೆ ಇಂದು ಆಯೋಗವು ಒಂದು ಪಕ್ಷದ ಜೀತದಾಳಿನಂತೆ ಕೆಲಸ ಮಾಡುತ್ತಿದೆ ಎಂದು ಖಂಡಿಸಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಯು ಪ್ರಮುಖ ಸ್ತಂಭವಾಗಿದೆ, ಆದರೆ ಜ್ಞಾನೇಶ್ ಕುಮಾರ್ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣ ಅಧಿಕಾರಿಯಾಗಿ ಆರ್ ಎಸ್ ಎಸ್ ಏಜೆಂಟಾಗಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಪ್ರಜಾಪ್ರಭುತ ವ್ಯವಸ್ಥೆಗೆ ಕಂಟಕವಾಗಿದೆ. ಆದ್ದರಿಂದ ಜ್ಞಾನೇಶ್ ಕುಮಾರ್ ರವರನ್ನು ಹುದ್ದೆಗೆ ರಾಜೀನಾಮೆ ನೀಡಬೇಕು. ಪತ್ರಕರ್ತೆ ರಿತಿಕಾ ಚೋಪ್ರಾ ಅವರ ತನಿಖಾ ವರದಿಯನ್ನು ನ್ಯಾಯಾಲಯ ಮತ್ತು ರಾಷ್ಟ್ರ ಪತಿಗಳು ಮಾನ್ಯ ಮಾಡಬೇಕು. ಸರ್ವೋಚ್ಚ ನ್ಯಾಯಾಲಯದ ಸಂವಿಧಾನದ 142ನೇ ವಿಧಿಯನ್ನು ಬಳಸಿ ಮುಖ್ಯ ಚುನಾವಣಾ ಅಧಿಕಾರಿಯನ್ನು ದೇಶದ್ರೋಹದ ಮೊಕದ್ದಮೆ ಆಧಾರದ ಮೇಲೆ ಬಂಧಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ ಪ್ರಕಾಶ್ ಮಾಜಿ ನಗರಸಭಾ ಸದಸ್ಯ ಎಂ ಎನ್ ಶ್ರೀಧರ್.ಎಂಎಸ್ ಅಭಿಲಾಶ್, ಸುಜಾತಮಣಿ, ನಾಗಮಣಿ.ರುದ್ರಪ್ಪ ತಗ್ಗಹಳ್ಳಿ ಯಶೋಧ, ವಿಜಯಲಕ್ಷ್ಮಿ ರಘುನಂದನ್ ನಾಗೇಂದ್ರ ಐಶ್ವರ್ಯ ಶಶಿಕಲಾ, ನಾಗಮಣಿ ಆಶಿಫ್ ಪಾಷ ಮತ್ತಿತರರು ಭಾಗವಹಿಸಿದ್ದರು.




