Friday, September 13, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ : ಭಿನ್ನಮತಕ್ಕೆ ಅವಕಾಶವಿಲ್ಲದಂತೆ ‘ಕೈ’ ಟಿಕೆಟ್ ಹಂಚಿಕೆ

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಭಿನ್ನಮತ, ಬಂಡಾಯಕ್ಕೆ ಅವಕಾಶವಿಲ್ಲದಂತೆ ಕಾಂಗ್ರೆಸ್ ವರಿಷ್ಠರು ಕೈ ಟಿಕೆಟ್ ಹಂಚಿಕೆ ಪೂರ್ಣಗೊಳಿಸಿ, ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮದ್ದೂರು ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಮಂಡ್ಯ, ಮಳವಳ್ಳಿ, ನಾಗಮಂಗಲ, ಶ್ರೀರಂಗಪಟ್ಟಣ, ಕೆ‌.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ‌. ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಬಗ್ಗೆ ಟಿಕೆಟ್ ಬಯಸಿದ್ದ ಇತರೆ ಆಕಾಂಕ್ಷಿಗಳಿಂದ ಅಂತಹ ದೊಡ್ಡ ಮಟ್ಟದ ವಿರೋಧ ಕೇಳಿ ಬಂದಿಲ್ಲ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಾಣ್ಮೆ

ಜಿಲ್ಲೆಯಲ್ಲಿ ಭಿನ್ನಮತ, ಬಂಡಾಯಕ್ಕೆ ಅವಕಾಶ ನೀಡದೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವುದರಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಾಣ್ಮೆ ಮೆರೆದಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷರಾದ ಎನ್. ಚಲುವರಾಯಸ್ವಾಮಿ, ಪಿ.ಎಂ‌.ನರೇಂದ್ರಸ್ವಾಮಿ ಅವರನ್ನು ವಿಶ್ವಾಸಕ್ಕೆ ಪಡೆದು ಕಾಂಗ್ರೆಸ್ ವರಿಷ್ಠರು ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಮಂಡ್ಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ 16 ಮಂದಿ ಇದ್ದರೂ ಸಹ ಗಣಿಗ ರವಿಕುಮಾರ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಗಣಿಗ ರವಿಕುಮಾರ್ ಅವರು ಕಳೆದ ಚುನಾವಣೆಯಲ್ಲಿ ಪರಾಭವ ಗೊಂಡಿರುವ ಬಗ್ಗೆ ಕ್ಷೇತ್ರದಲ್ಲಿರುವ ಅನುಕಂಪ ಹಾಗೂ ಕಳೆದ ಐದು ವರ್ಷಗಳಲ್ಲಿ ಜನರ ಮಧ್ಯೆ ನಿಂತು ಪಕ್ಷ ಸಂಘಟಿಸಿರುವುದು, ಕೊರೊನಾ ಕಾಲದಲ್ಲಿ ಜನರೊಂದಿಗೆ ನಿಂತು ಕೈಲಾದ ಸೇವೆ ಮಾಡಿದ್ದು ಕೂಡಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲು ಕಾರಣವಾಗಿದೆ‌.

ಆದರೆ ಮಂಡ್ಯ ವಿಧಾನಸಭೆಯ ಟಿಕೆಟ್ ಗಣಿಗ ರವಿಕುಮಾರ್ ಗೆ ಘೋಷಣೆಯಾಗುತ್ತಿದ್ದಂತೆಯೇ ಮತ್ತೊಬ್ಬ ಆಕಾಂಕ್ಷಿ ಕೀಲಾರ ರಾಧಾಕೃಷ್ಣ ಬೆಂಬಲಿಗರು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಿನ್ನಮತವನ್ನು ಪಕ್ಷದ ನಾಯಕರು ಹೇಗೆ ಸರಿಪಡಿಸುತ್ತಾರೆಂದು ಕಾದು ನೋಡಬೇಕಿದೆ.

ಬಿ.ಎಲ್.ದೇವರಾಜು ಅವರಿಗೆ ಮಣೆ

ಇನ್ನು ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ ಆರು ಮಂದಿ ಇದ್ದರೂ ಸಹ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಪಕ್ಷದಿಂದ ಕೆಲ ದಿನಗಳ ಹಿಂದಷ್ಟೇ ಸೇರ್ಪಡೆಯಾದ ಬಿ.ಎಲ್.ದೇವರಾಜು ಅವರಿಗೆ ಟಿಕೆಟ್ ನೀಡಿದೆ‌. ಈ ಕ್ಷೇತ್ರದಿಂದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಸಮಾಜ ಸೇವಕ, ಉದ್ಯಮಿ ವಿಜಯ್ ರಾಮೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದರು. ಅದರಲ್ಲೂ ಉದ್ಯಮಿ ವಿಜಯ್ ರಾಮೇಗೌಡ ಹೆಸರು ಅಂತಿಮ ಪಟ್ಟಿಯಲ್ಲಿದ್ದು, ಅವರೇ ಅಭ್ಯರ್ಥಿ ಆಗಬಹುದೆನ್ನುವ ಮಾತುಗಳು ಕೇಳಿ ಬರುತ್ತಿತ್ತು. ಯಾವಾಗ ಬಿ.ಎಲ್.ದೇವರಾಜು ಅವರಿಗೆ ಜೆಡಿಎಸ್ ಟಿಕೆಟ್ ಸಿಗುವುದೇ ಇಲ್ಲವೆಂಬುದು ಖಾತ್ರಿಯಾಯಿತೋ, ಅವರು ಕಾಂಗ್ರೆಸ್ ಪಕ್ಷ ಸೇರಿದರು.

ಹಿರಿಯ ಮುಖಂಡ ಬಿ.ಎಲ್.ದೇವರಾಜು ಅವರನ್ನು ಜೆಡಿಎಸ್ ವರಿಷ್ಠರು ನಿರ್ಲಕ್ಷ್ಯ ಮಾಡಿದ್ದು, ಸೇವಾ ಹಿರಿತನ, ಕ್ಷೇತ್ರದಲ್ಲಿರುವ ಅವರ ಪರ ಅನುಕಂಪ ಅಂತಿಮವಾಗಿ ಮೇಲುಗೈ ಸಾಧಿಸಿ ಟಿಕೆಟ್ ಕೊಡಿಸಲು ಕಾರಣವಾಗಿದೆ‌.
ಆದರೆ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಮಾಜಿ ಶಾಸಕರಾದ ಚಂದ್ರಶೇಖರ್, ಬಿ.ಪ್ರಕಾಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಅವರ ನಡೆ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ

ಹಾಗೆಯೇ ಮೇಲುಕೋಟೆ ಕ್ಷೇತ್ರದಲ್ಲಿ ಶೇ.90ರಷ್ಟು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸುವ ಬದಲು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುವಂತೆ ತಿಳಿಸಿದ್ದರಿಂದ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಹಾಕಲಿಲ್ಲ. ಇಲ್ಲಿ ಜಿ.ಪಂ.ಮಾಜಿ ಸದಸ್ಯ ಎಚ್. ತ್ಯಾಗರಾಜು ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಎದುರಿಸಲು ದರ್ಶನ್ ಪುಟ್ಟಣ್ಣಯ್ಯ ಅವರಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಪಕ್ಷ ಮಾಡಿಸಿದ್ದ ಆಂತರಿಕ ಸರ್ವೆ ವರದಿ ನೀಡಿದ್ದರಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿ ನಿಲ್ಲಿಸದೆ, ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಘೋಷಿಸಿದೆ.

ಮದ್ದೂರಿನಲ್ಲಿ ಉದಯ್ ಗೆ ಟಿಕೆಟ್ ?

ಇನ್ನು ನಾಗಮಂಗಲದಿಂದ ಚಲುವರಾಯಸ್ವಾಮಿ, ಮಳವಳ್ಳಿಯಿಂದ ಪಿ.ಎಂ. ನರೇಂದ್ರಸ್ವಾಮಿ, ಶ್ರೀರಂಗಪಟ್ಟಣದಿಂದ ರಮೇಶ್ ಬಾಬು ಬಂಡಿಸಿದ್ದೇಗೌಡರಿಗೆ ಅರ್ಹವಾಗಿಯೇ ಕಾಂಗ್ರೆಸ್ ಟಿಕೆಟ್ ದೊರೆತಿದೆ. ಇವರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಆಯ್ಕೆಯೇ ಇರಲಿಲ್ಲ. ಇನ್ನು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಕದಲೂರು ಉದಯ್ ಹಾಗೂ ಮಾಜಿ ಸಿಎಂ‌ ಎಸ್.ಎಂ.ಕೃಷ್ಣ ಕುಟುಂಬದ ಕುಡಿ ಗುರುಚರಣ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಗಾಗಿ ಕಾಂಗ್ರೆಸ್ ವರಿಷ್ಠರು ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ‌. ಕಾಂಗ್ರೆಸ್ ಆಂತರಿಕ ಸರ್ವೆ ಪ್ರಕಾರ ಶಾಸಕ ಡಿ.ಸಿ.ತಮ್ಮಣ್ಣ ಎದುರಿಸಲು ಕದಲೂರು ಉದಯ್ ಸಮರ್ಥ ಎನ್ನುವ ಅಭಿಪ್ರಾಯ ಇರುವುದರಿಂದ ಕಾಂಗ್ರೆಸ್ ವರಿಷ್ಠರು ಅಂತಿಮ ಪಟ್ಟಿಯಲ್ಲಿ ಘೋಷಣೆ ಮಾಡಬಹುದೆಂಬ ಮಾತು ಕೇಳಿ ಬರುತ್ತಿದೆ‌.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನಂಬಿಕೊಂಡಿರುವ ಗುರುಚರಣ್ ಹಾಗೂ ಕದಲೂರು ಉದಯ್ ಇಬ್ಬರ ಸಾಮರ್ಥ್ಯ ಒರಗೆ ಹಚ್ಚಿ ನೋಡುವುದಾದರೆ ಕದಲೂರು ಉದಯ್ ಮೊದಲ ಸ್ಥಾನ ಪಡೆಯುತ್ತಾರೆ. ಅಂತಿಮವಾಗಿ ಡಿ.ಸಿ.ತಮ್ಮಣ್ಣ ಅವರನ್ನು ಎದುರಿಸಲು ಉದಯ್ ಅವರಿಗೆ ಟಿಕೆಟ್ ನೀಡಬಹುದು ಎನ್ನುವ ಚರ್ಚೆಗಳೂ ಕ್ಷೇತ್ರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ.

ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಯ್ಕೆಯಲ್ಲಿ ಅಂತಹ ದೊಡ್ಡ ಮಟ್ಟದಲ್ಲಿ ಭಿನ್ನಮತ, ಬಂಡಾಯ ಯಾವುದೂ ಕೂಡ ಕಂಡು ಬಂದಿಲ್ಲದಿರುವುದು ಕಾಂಗ್ರೆಸ್ ವರಿಷ್ಠರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!