Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| 2 ದಿನಗಳ ಸಂವಿಧಾನ ಓದು – ಅಧ್ಯಯನ ಶಿಬಿರ

ಸಂವಿಧಾನ ಓದು ಅಭಿಯಾನ- ಕರ್ನಾಟಕದ ವತಿಯಿಂದ ಜನವರಿ 18, 19ರಂದು ಎರಡು ದಿನಗಳ ಸಂವಿಧಾನ ಓದು ಅಧ್ಯಯನ ಶಿಬಿರ ಕಾರ್ಯಕ್ರಮವನ್ನು ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ರಾಜ್ಯ ಕೇಂದ್ರ ಸಂಯೋಜಕ ಬಿ.ರಾಜಶೇಖರಮೂರ್ತಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ವ್ಯವಸ್ಥೆಯಲ್ಲಿ ಸಂವಿಧಾನ ಓದುವವರು ಸಂಖ್ಯೆ ಇಮ್ಮಡಿಗೊಳಿಸುವ ಉದ್ದೇಶದಿಂದ ಹಾಗೂ 10 ಲಕ್ಷ ಸಂವಿಧಾನ ಓದು ಪರಿಷ್ಕೃತ ಕೃತಿಯನ್ನು ಜನರಿಗೆ ತಲುಪಿಸುವುದು ಕಾರ್ಯಕ್ರಮದ ಗುರಿಯಾಗಿದೆ ಎಂದರು.

ಜನವರಿ 18ರ ಬೆಳಿಗ್ಗೆ 10 ಗಂಟೆಗೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಜಿ.ಪಂ ಸಿಇಓ ಶೇಖ್ ತನ್ವೀರ್ ಆಸಿಫ್, ಹಿರಿಯ ದಲಿತ ಮುಖಂಡ ಅಂದಾನಿ ಸೋಮನಹಳ್ಳಿ, ರೈತ ಮುಖಂಡೆ ಸುನಂದ ಜಯರಾಂ ಭಾಗವಹಿಸಲಿದ್ದು, ಭಾರತ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಟಿ.ಎ.ಪ್ರಶಾಂತ್ ಬಾಬು, ಪರಿವರ್ತನಾ ಸಂಸ್ಥೆಯ ಟಿ.ಡಿ.ನಾಗರಾಜ್, ರಾಮೇನಹಳ್ಳಿಯ ಮೂರ್ತಿ ಆರ್ ಉಪಸ್ಥಿತರಿರಲಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು ಪ್ರಾಸ್ತವಿಕವಾಗಿ ನುಡಿವರು, ಕಾರ್ಮಿಕ ಮುಖಂಡರಾದ ಸಿ.ಕುಮಾರಿ ಸ್ವಾಗತಿಸುವರು, ದಲಿತ ಹಕ್ಕುಗಳ ಸಮಿತಿಯ ಮುಖಂಡ ಕೃಷ್ಣ.ಆರ್. ವಂದನಾರ್ಪಣೆ ಮಾಡುವರು ಎಂದು ಹೇಳಿದರು.

ಬೆಳಿಗ್ಗೆ 11.30ಕ್ಕೆ ‘ಸಂವಿಧಾನದ ರಚನೆ ಮತ್ತು ಮೂಲ ತತ್ವಗಳು’ ವಿಷಯ ಕುರಿತು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಸಂವಿಧಾನ: ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆ ಕುರಿತು ಕಿಗ್ಗ ರಾಜಶೇಖರ ವಿಷಯ ಮಂಡಿಸುವರು, ಮಧ್ಯಾಹ್ನ 3.30ಕ್ಕೆ ಸಂವಿಧಾನ ಮತ್ತು ಮಹಿಳೆ ಕುರಿತು ಶಾಮತಿ ನಾಗಲಾಪುರ ವಿಷಯ ಮಂಡಿಸಲಿದ್ದಾರೆ ಎಂದರು.

ಜನವರಿ19ರ ಬೆಳಿಗ್ಗೆ 10ಕ್ಕೆ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಕುರಿತು ಡಾ.ಕರಿಯಣ್ಣ ನಿಷಾದ ವಿಷಯ ಮಂಡಿಸಲಿದ್ದು, ಬೆಳಿಗ್ಗೆ 11ಕ್ಕೆ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ಬಿ.ರಾಜಶೇಖರಮೂರ್ತಿ ವಿಷಯ ಮಂಡಿಸುವರು. ಸಂವಿಧಾನ ಓದು ಅಭಿಯಾನ- ಕರ್ನಾಟಕದ ರಾಜು ಗೊರೂರು ಅವರು ಶಿಬಿರಾರ್ಥಿಗಳ ಮುಂದಿನ ಜವಾಬ್ದಾರಿ ಕುರಿತು ಮಾತನಾಡುವರು. ಮಧ್ಯಾಹ್ನ 2ಕ್ಕೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅಧ್ಯಕ್ಷತೆಯಲ್ಲಿ ಸಮಾರೋಪ ಹಾಗೂ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಾಬೀರ ಅಹ್ಮದ್ ಮುಲ್ಲಾ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಎಸ್.ಬಿ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಶಿವಲಿಂಗಯ್ಯ ಭಾಗವಹಿಸಲಿದ್ದು, ದಲಿತ ಮುಖಂಡರಾದ ಗಂಗರಾಜು ಹನಕೆರೆ, ಎಂ.ವಿ.ಕೃಷ್ಣ ನಿವೃತ್ತ ಪ್ರಾಂಶುಪಾಲ ಇಲಿಯಾಸ್ ಅಹ್ಮದ್ ಉಪಸ್ಥಿತರಿರಲಿದ್ದಾರೆ. ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣ ಕಾರ್ಯಕ್ರಮವನ್ನು ನಿರೂಪಿಸಲಿದ್ದು, ಕರ್ನಾಟಕ ಪ್ರಾಂತ ರೈತ ಸಂಘದ ಎನ್.ಎಲ್.ಭರತ್‌ರಾಜ್ ಹಾಗೂ ದಸಂಸ ಸಂಘಟಕ ಟಿ.ಎನ್.ಗೋವಿಂದಪ್ಪ ಸ್ವಾಗತಿಸುವರು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂವಿಧಾನ ಓದು ಅಭಿಯಾನ- ಕರ್ನಾಟಕದ ರಾಜ್ಯ ಕೇಂದ್ರ ಸಂಯೋಜಕ ಹೆಚ್.ಎನ್.ಹರಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು, ಎಂ.ವಿ.ಕೃಷ್ಣ, ಸಿ.ಕುಮಾರಿ, ಲಕ್ಷ್ಮಣ್ ಚೀರನಹಳ್ಳಿ, ಟಿ.ಎಲ್.ಕೃಷ್ಣೇಗೌಡ, ಎಚ್.ಎನ್.ನರಸಿಂಹಮೂರ್ತಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ