Friday, October 18, 2024

ಪ್ರಾಯೋಗಿಕ ಆವೃತ್ತಿ

ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಮೆರವಣಿಗೆಗೆ ಕ್ಷಣಗಣನೆ

ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಶನಿವಾರ ವಿಜಯದಶಮಿಯಂದು ನಡೆಯುವ ಅದ್ಧೂರಿ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಅಕ್ಟೋಬರ್ 3 ರಂದು ದಸರಾ ಉದ್ಘಾಟನೆಯಾದಾಗಿನಿಂದ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಮೈಸೂರಿನ ಜಂಬೂಸವಾರಿಯಲ್ಲಿ 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗಲಿದ್ದಾನೆ.

ಇಂದು ಬೆಳಗ್ಗೆಯೇ ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಅರಮನೆಗೆ ಆಗಮಿಸಿದೆ.  ನಂತರ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉತ್ತರ ಪೂಜೆ ನೆರವೇರಿಸಿದ್ದಾರೆ. ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಸವಾರಿ ತೊಟ್ಟಿಗೆ ಆಗಮಿಸಿದ್ದು, ಬಳಿಕ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಜಟ್ಟಿ ಕಾಳಗವು ನಡೆದಿದೆ.

ಅರಮನೆ ಆವರಣದ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ ಹೊರಡಲಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿಪೂಜೆ ನೆರವೇರಿಸಿದ್ದಾರೆ. ನಂತರ ಅರಮನೆಗೆ ಆಗಮಿಸಿ ಕಂಕಣ ವಿಸರ್ಜನೆ ಮಾಡಿದ ಬಳಿಕ, ಮಧ್ಯಾಹ್ನ ಶುಭ ಮಕರ‌ ಲಗ್ನದಲ್ಲಿ 1.41ರಿಂದ 2.10ರ ನಡುವೆ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ.

ಸಂಜೆ ಕುಂಭ ಲಗ್ನದಲ್ಲಿ 4 ರಿಂದ 4.30ರ ನಡುವೆ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಂಬಾರಿ ಒಳಗಿನ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಇತರ ಸಚಿವರು ಜಂಬೂಸವಾರಿಗೆ ಆಗಮಿಸಲಿದ್ದಾರೆ. ಸಂಜೆ 4.30ಕ್ಕೆ ಅರಮನೆಯಿಂದ ಹೊರಡುವ ಜಂಬೂ ಸವಾರಿ ಬನ್ನಿಮಂಟಪ ಮೈದಾನದವರೆಗೆ ನಡೆಯಲಿದೆ. ಜಂಬೂ ಸವಾರಿ ಸುಗಮವಾಗಿ ನಡೆಯಲು ನಗರದಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು. ಮೆರವಣಿಗೆ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ ಗಾಗಿ ನಿಯೋಜಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!