Sunday, November 22, 2026

ಪ್ರಾಯೋಗಿಕ ಆವೃತ್ತಿ

ನಾಳೆ ಮತ ಎಣಿಕೆ | ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 120 ಅಧಿಕಾರಿಗಳು – ಸಿಬ್ಬಂದಿ ನೇಮಕ

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮೇ 13ರಂದು ನಡೆಯಲಿದ್ದು, ಪ್ರತಿ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ ತಲಾ 120 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃ‍ಷ್ಣ ತಿಳಿಸಿದರು.

nudikarnataka.com

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ಮುಕ್ತಾಯದ ನಂತರ ಎಲ್ಲ ವಿಧಾನಸಭಾ ಕ್ಷೇತ್ರಗಳ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಮಂಡ್ಯ ವಿಶ್ವ ವಿದ್ಯಾಲಯದ ಸ್ಟ್ರಾಂಗ್ ರೂಂಗಳಲ್ಲಿ ಇಡಲಾಗಿದೆ ಎಂದರು.

ಮಂಡ್ಯ ಜಿಲ್ಲೆ 7 ಕ್ಷೇತ್ರಗಳಲ್ಲಿ ಶೇಕಡವಾರು ಮತದಾನ 

  • ಮಳವಳ್ಳಿ – ಶೇ.78.90
  • ಮದ್ದೂರು – 84.99
  • ಮೇಲುಕೋಟೆ – 91.01
  • ಮಂಡ್ಯ – 77.14
  • ಶ್ರೀರಂಗಪಟ್ಟಣ – 86.27
  • ನಾಗಮಂಗಲ – 89.00
  • ಕೆ.ಆರ್.ಪೇಟೆ – 85.45
  • ಒಟ್ಟು – 84.45

ಜಿಲ್ಲೆ 7 ವಿಧಾನಸಭಾ ಕ್ಷೇತ್ರಗಳಲ್ಲೂ ಅಂಚೆ ಮತದಾನದ ಎಣಿಕೆ ಪೂರ್ಣಗೊಂಡಿಲ್ಲದಿರುವುದರಿಂದ ನಿಖರವಾದ ಶೇಕಡವಾರು ಫಲಿತಾಂಶ ಲಭ್ಯವಾಗಿಲ್ಲ, ಅಂಚೆ ಮತದಾನದ ಏಣಿಕೆ ಪೂರ್ಣಗೊಂಡ ನಂತರ ಶೇಕಡವಾರು ಮತದಾನದ ಪ್ರಮಾಣ ಕೊಂಚ ಏರಿಕೆಯಾಗುವ ಸಂಭವವಿದೆ ಎಂದು ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2 ಕೊಠಡಿಗಳು, 14 ಟೇಬಲ್ ಗಳನ್ನು ಮತ ಎಣಿಕೆಗಾಗಿ ವ್ಯವಸ್ಥೆಗೊಳಿಸಲಾಗಿದೆ. ಚುನಾವಣಾ ಆಯೋಗದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಒಟ್ಟು 7 ಎಣಿಕೆ ವೀಕ್ಷಕರನ್ನು ನೇಮಿಸಲಾಗಿದೆ. ಎಣಿಕೆ ಕಾರ್ಯಕ್ಕೆ ಪ್ರತಿ ಟೇಬಲ್‌ಗೆ ತಲಾ ಒಬ್ಬ ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಮತ್ತು ಮೈಕ್ರೋ ಅಬ್ಸರ್‍ವರ್ ಗಳನ್ನು ನೇಮಿಸಲಾಗಿದೆ. ರಾಂಡಮೈಜೆಷನ್ ಪ್ರಕ್ರಿಯೆ ಮುಖಾಂತರ ವಿಧಾನಸಭಾ ಕ್ಷೇತ್ರ ಹಾಗೂ ಟೇಬಲ್ ಸಂಖ್ಯೆಯನ್ನು ಹಂಚಿಕೆ ಮಾಡಲಾಗುವುದು, ಪ್ರತಿ ಟೇಬಲ್‌ಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ವಿವರಿಸಿದರು.

ಮೇ 13ರಂದು ಬೆಳಿಗ್ಗೆ 7.15 ಗಂಟೆಗೆ ಭದ್ರತಾ ಕೊಠಡಿಯನ್ನು ಎಣಿಕೆ ವೀಕ್ಷಕರ ಸಮಕ್ಷಮದಲ್ಲಿ ತೆರೆದು ಸರಿಯಾಗಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆಯನ್ನು ಪ್ರಾರಂಭಿಸಲಾಗುವುದು. ಬೆಳಿಗ್ಗೆ 8.15 ಗಂಟೆಗೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ, ಎಣಿಕೆ ಕೇಂದ್ರದೊಳಗೆ ಮೊಬೈಲ್ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಪೋಟಕ ಸಾಮಗ್ರಿಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತ ಎಣಿಕೆ ನಂತರ ಏಣಿಕೆ ವೀಕ್ಷಕರ ಅಭ್ಯರ್ಥಿಗಳ, ಏಜೆಂಟರುಗಳ ಸಮಕ್ಷಮದಲ್ಲಿ ಲಾಟರಿ ಚೀಟಿ ಎತ್ತುವುದರ ಮೂಲಕ ಐದು ವಿವಿಪ್ಯಾಟ್‌ಗಳನ್ನು ಆಯ್ಕೆ ಮಾಡಿ ವಿವಿಪ್ಯಾಟ್‌ನಲ್ಲಿರುವ ಸ್ಲಿಪ್‌ಗಳನ್ನು ಇವಿಎಂ ಯಂತ್ರಗಳಲ್ಲಿ ಚಲಾವಣೆಯಾಗಿರುವ ಮತಗಳೊಂದಿಗೆ ತಾಳೆ ಮಾಡಲಾಗುವುದು. ಎಣಿಕೆ ಕೇಂದ್ರದಲ್ಲಿ ಎಲ್ಲಾ ಮಾಧ್ಯಮದವರಿಗೆ ಮಾಧ್ಯಮ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದೆ.ಪ್ರತಿ ಸುತ್ತಿನ ಏಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಮಾಧ್ಯಮದವರಿಗೆ ಮಾಹಿತಿಯನ್ನು ನೀಡಲಾಗುವುದು ಎಂದು ವಿವರಿಸಿದರು.

ಎಣಿಕೆ ಕೇಂದ್ರಗಳ ಬಳಿ ಬಿಗಿ ಭದ್ರತೆ

ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳ ಎಣಿಕೆ ಕಾರ್ಯ ನಡೆಯುವ ಮಂಡ್ಯ ವಿಶ್ವವಿದ್ಯಾಲಯದ ಬಳಿ ಭದ್ರತೆಗಾಗಿ 300 ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ತಿಳಿಸಿದರು.

ಬೆಟ್ಟಿಂಗ್ ಕಟ್ಟುವುದು ಕಾನೂನು ಬಾಹಿರವಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಎಣಿಕೆ ಕೇಂದ್ರದ ಆವರಣದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್ ಗೆ  ಅವಕಾಶವಿಲ್ಲ, ಅಲ್ಲದೇ ಯಾರೂ ಕೂಡ ವಿಜಯೋತ್ಸವ ಆಚರಿಸಲು ಅವಕಾಶವಿಲ್ಲ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ