Saturday, October 26, 2024

ಪ್ರಾಯೋಗಿಕ ಆವೃತ್ತಿ

ರೈತರ ಪಕ್ಷ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ : ಹೆಚ್.ಡಿ.ಕುಮಾರಸ್ವಾಮಿ

ಬಿಜೆಪಿ ಪಕ್ಷಕ್ಕೆ ಹೋಗಿರುವ ಘಟಾನುಘಟಿ ನಾಯಕರೊಬ್ಬರು ನನ್ನ ವಿರುದ್ಧ ಸ್ಪರ್ಧಿಸಲು ಅರ್ಜಿ ಹಾಕಲು ಹೊರಟಿದ್ದಾರೆ. ಜನರ ಸೇವೆ ಮಾಡುವ ಪಕ್ಷವಾದ ಜೆಡಿಎಸ್ ಮುಗಿಸುವ ಮಾತುಗಳನ್ನಾಡಿರುವ ಅವರಿಗೆ ನಮ್ಮ ಪಕ್ಷದ ಮೇಲೆ ಅಷ್ಟೊಂದು ದ್ವೇಷವೇಕೆ? ರೈತರ ಪಕ್ಷ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಸದೆ ಸುಮಲತಾ ಅಂಬರೀಶ್ ಅವರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.

ಪಾಂಡವಪುರ ಪಟ್ಟಣದಲ್ಲಿಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ನಾಮಪತ್ರ ಸಲ್ಲಿಸಿದ ನಂತರ ನಡೆದ ಜೆಡಿಎಸ್ ಕಾರ್ಯಕರ್ತರ ಬಥಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಭಿಮಾನದ ಹೆಸರಿನಲ್ಲಿ ಮಂಡ್ಯ ಜಿಲ್ಲೆಯ ಹೆಸರನ್ನು ಹಾಳು ಮಾಡಿದವರೊಬ್ಬರು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸುತ್ತೇನೆಂದು ಪಣತೊಟ್ಟಿದ್ದಾರೆ.ನನ್ನ ಸ್ನೇಹಿತ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಬೆಂಗಳೂರಿನಿಂದ ಅವರ ಪಾರ್ಥಿವ ಶರೀರ ಮಂಡ್ಯಕ್ಕೆ ತೆಗೆದುಕೊಂಡು ಬರಲು ಸೇನಾ ಹೆಲಿಕಾಪ್ಟರ್ ಸಾಕಷ್ಟು ಪ್ರಯತ್ನ ಮಾಡಿ ತರಿಸಿಕೊಟ್ಟೆ.ಕಾರ್ಯಕರ್ತರು ಮಂಡ್ಯದಿಂದ ಸ್ಪರ್ಧೆ ಮಾಡಿ ಎಂದರೆ,ನನ್ನ ವಿರುದ್ಧ ಸ್ಪರ್ಧೆ ಮಾಡಲು ಆ ನಾಯಕರು ಸವಾಲು ಹಾಕಿದ್ದಾರೆ.ಆ ಕುಟುಂಬಕ್ಕೆ ನನ್ನ ಮೇಲೆ ಯಾಕೆ ದ್ವೇಷ,ರೈತರು ಆತ್ಮಹತ್ಯೆ ಮಾಡಿಕೊಂಡಾಗ ಬರದ ಅವರು ಏಕೆ ಬರಲಿಲ್ಲ.ರೈತರು ಆತ್ಮಹತ್ಯೆಗೆ ಶರಣಾದ ಸಂದರ್ಭದಲ್ಲಿ ಅವರ ಕುಟುಂಬದ ಬಳಿಗೆ ತೆರಳಿ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದ್ದು ಜೆಡಿಎಸ್ ಪಕ್ಷ.ಇದು ನಮ್ಮ ಪಕ್ಷದ ದಾರಿ ಎಂದರು.

ಎಚ್.ಡಿ.ಕುಮಾರಸ್ವಾಮಿ ಮಂಡ್ಯಕ್ಕೆ ಅಭ್ಯರ್ಥಿಯಾಗುತ್ತಾರೆ ಎನ್ನುವ ವಿಷಯ ಮಾಧ್ಯಮದಲ್ಲಿ ಬರುತ್ತಿದ್ದಂತೆಯೇ ಅಲ್ಲೊಬ್ಬರು ಕುತಂತ್ರ ರಾಜಕಾರಣ ಮಾಡಲು ಹೊರಟಿದ್ದಾರೆ. ನಾನು ಸಣ್ಣ ಪಕ್ಷದ ನಾಯಕ.ಅವರ ವಿರುದ್ಧ ಸವಾಲು ಹಾಕಲು ಸಾಧ್ಯವಾ? ಬಿಜೆಪಿ ಸೇರ್ಪಡೆಯಾಗುವ ಮೂಲಕ ಮಂಡ್ಯ ಜಿಲ್ಲೆಯ ಜನರ ಸ್ವಾಭಿಮಾನವನ್ನು ಹಾಳು ಮಾಡಿದ ಅವರಂತೆ ನಾನು ದುರಂಹಕಾರದಿಂದ ಮಾತನಾಡಲ್ಲ. ಮಂಡ್ಯ ದಿಂದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೇ ಚುನಾವಣೆಗೆ ಅಭ್ಯರ್ಥಿ ಮಾಡುವೆ. ನಾನು ಚನ್ನಪಟ್ಟಣದಿಂದಲೇ ಕಣಕ್ಕಿಳಿಯುವೆ ಎಂದು ಗುಡುಗಿದರು.

7 ಕ್ಷೇತ್ರದಲ್ಲಿ ಗೆಲ್ಲಿಸಿ
ಕಳೆದ ಬಾರಿ ಜಿಲ್ಲೆಯ ಜನತೆ ಏಳು ಸ್ಥಾನ ಗೆಲ್ಲಿಸಿಕೊಟ್ಟಿದ್ದೀರಿ. ಈ ಬಾರಿಯೂ ಸಹ ಏಳು ಸ್ಥಾನ ಗೆಲ್ಲಿಸಿಕೊಡಿ, ಜಿಲ್ಲೆಯ ಜನರ ಋಣ ತೀರಿಸದೆ ಈ ದೇಹ ಮಣ್ಣಿಗೆ ಹೋಗೋದಿಲ್ಲ. ಜಿಲ್ಲೆಯ ಜನತೆ ನನ್ನ ಕೈಬಿಡುವುದಿಲ್ಲ ಎನ್ನುವ ನಂಬಿಕೆ ಇದೆ.

ಸಿ.ಎಸ್.ಪುಟ್ಟರಾಜು ಮನೆ ಮಗನ ರೀತಿ ಜನರ ಸೇವೆ ಮಾಡಿ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿದ್ದಾರೆ. ಇವರನ್ನು ಗೆಲ್ಲಿಸುವುದು ಕ್ಷೇತ್ರದ ಜನರ ಕರ್ತವ್ಯ. ಐದು ವರ್ಷ ಅಮೆರಿಕದಲ್ಲಿದ್ದು, ಇದೀಗ ಚುನಾವಣೆಗೆ ಬಂದಿರುವ ವ್ಯಕ್ತಿಗಳಿಗೆ ಮಣೆಹಾಕಬೇಡಿ ಎಂದರು.

ಏಕಾಂಗಿ ಹೋರಾಟ
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಘಟಾನುಘಟಿ ನಾಯಕರೊಂದಿಗೆ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದೇನೆ. ಉತ್ತರ ಕರ್ನಾಟಕದ ಬಿಜಾಪುರ, ಬೆಳಗಾವಿ, ರಾಯಚೂರು ಜಿಲ್ಲೆಗಳಲ್ಲಿ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಹಳ್ಳಿಯ ಜನರು, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವೆ ಎಂದು ಹೇಳಿದರು.

ಶಾಸಕ ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.ಇವರ ಕ್ಷೇತ್ರದಲ್ಲಿ ಬಸ್ ಕಾಲುವೆಗೆ ಉರುಳಿದಾಗ ಮನೆಬಮಗನಂತೆ ಅವರ ಜೊತೆ ಇದ್ದವರು ಪುಟ್ಟರಾಜು ಹೊರತು ಬೇರ್ಯಾರೂ ಅಲ್ಲ.ರೈತಸಂಘದ ಹೋರಾಟದ ಬಗ್ಗೆ ಗೌರವವಿದೆ.ಈ ಕ್ಷೇತ್ರದ ರೈತರು,ಮತದಾರರು ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಅವರಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿ, ಶಾಸಕ ಪುಟ್ಟರಾಜು ಮಾತನಾಡಿ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು. ಕ್ಷೇತ್ರದ ಮಹಾಜನತೆ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ,ವಿರೋಧಿಗಳಿಗೆ ತಕ್ಕಪಾಠ ಕಲಿಸಿ ಚುನಾವಣೆಯಲ್ಲಿ ಅಧಿಕ ಬಹುಮತದಿಂದ ನನ್ನನ್ನು ಆಯ್ಕೆಮಾಡಿಕೊಡಬೇಕು ಎಂದರು.

ದುದ್ದ ಹೋಬಳಿಯ ಜನತೆ ಎಂದಿಗೂ ಸ್ವಾಭಿಮಾನವನ್ನು ಮಾರಿಕೊಂಡವರಲ್ಲ. ವಿರೋಧಿಗಳು ಆ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ದುದ್ದ ಹೋಬಳಿ ಜನತೆಯೇ ಅವರಿಗೆ ಸೂಕ್ತ ಉತ್ತರ ನೀಡಲಿದ್ದಾರೆ. ಐದು ವರ್ಷದ ಅಮೇರಿಕದಲ್ಲಿದ್ದು ಕಂಪನಿ ಮಾರಾಟ ಮಾಡಿ ಆ ಹಣದಲ್ಲಿ ಜನರ ಖರೀದಿ ಮಾಡಿ ಶಾಸಕರಾಗಲು ಹೊರಟಿದ್ದಾರೆ ಎಂದು ದರ್ಶನ್‌ ಪುಟ್ಟಣ್ಣಯ್ಯ ವಿರುದ್ದ ಗುಡುಗಿದರು.

ವೇದಿಕೆಯಲ್ಲಿ ಬೆಳ್ಳಾಳೆ ಗ್ರಾಮದ ತಿಬ್ಬೇಗೌಡರ ಪುತ್ರಿ ಎಂಜಿನಿಯರ್ ಸಹನ ಅವರು ತಾವು ದುಡಿದ ಹಣದಲ್ಲಿ ಕೂಡಿಟ್ಟ 50 ಸಾವಿರ ಹಣವನ್ನು ಎಚ್.ಡಿ.ಕುಮಾರಸ್ವಾಮಿ ಅವರ ಚುನಾವಣೆಯ ಖರ್ಚಿಗಾಗಿ ನೀಡಿದರು. ಮಂಗಳ ಮುಖಿಯರು ಸಹ ಎಚ್‌ಡಿಕೆಗೆ 25 ಸಾವಿರ ಹಣ ದೇಣಿಗೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮಾಜಿ ಎಂಎಲ್‌ಸಿಗಳಾ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಮಲ್ಲೇಶ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಶೇಖ್ ಅಹಮದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಯಶ್ವಂತ್‌ಕುಮಾರ್, ಅರವಿಂದ್ ರಾಘವನ್, ಪುರಸಭೆ ಅಧ್ಯಕ್ಷೆ ಅರ್ಚನಚಂದ್ರ, ಉಪಾಧ್ಯಕ್ಷೆ ಶ್ವೇತ, ಕೆ.ಪುಟ್ಟೇಗೌಡ, ಶ್ಯಾಮ್, ಶಿವಣ್ಣ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!