ನಮ್ಮ ನೀರು ನಮ್ಮ ಹಕ್ಕು ಎಂದು ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನ ಪಾದಯಾತ್ರೆ ಮಾಡಿದ್ದರು. ಆದರೀಗ ಹಕ್ಕು ಹಾಗೂ ನೀರು ಎರಡನ್ನು ತಮಿಳುನಾಡಿಗೆ ಬಿಟ್ಟು ಕೊಟ್ಟಿದ್ದಾರೆ. ಹಾಗಿದ್ದರೆ ನಮ್ಮ ರೈತರ ಗತಿ ಏನು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಮಂಡ್ಯ ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರು ಬ್ಯುಸಿಯಾಗಿದ್ದಾರೆ. ಸೆಟ್ಲುಮೆಂಟ್ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಅಧಿಕಾರಕ್ಕಾಗಿ ಪಾದಯಾತ್ರೆ ಮಾಡಿ ರೈತರಿಗೆ ಚಿಪ್ಪು ಕೊಟ್ಟಿದ್ದಾರೆ. ನಂಬಿ ಮತ ಹಾಕಿದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕುಡಿಯುವ ನೀರಿಲ್ಲವೆಂದು ಹೇಳಿ, ನೀರು ಬಿಟ್ಟು ಸರ್ವಪಕ್ಷ ಸಭೆ ಕರೆಯುತ್ತೀರಿ ಎಂದು ಟೀಕಾ ಪ್ರಹಾರ ನಡೆಸಿದರು.
ಆಡಳಿತ ನಡೆಸುವ ಪಕ್ಷಗಳು ಬದಲಾಗಿವೆ. ಆದರೆ ರೈತ ಹಿತರಕ್ಷಣಾ ಸಮಿತಿ ನಿಲುವುಗಳು ಎಂದಿಗೂ ಬದಲಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾವೇರಿ ಉಪನದಿ ಹೇಮಾವತಿ ಉಗಮವಾಗುತ್ತದೆ. ರೈತ ಚಳವಳಿ ಮೂಲಕ ನನ್ನ ಸಾರ್ವಜನಿಕ ಜೀವನ ಪ್ರಾರಂಭವಾಯಿತು. ನನಗೂ ರೈತ ಕುಟುಂಬದ ಹಿನ್ನೆಲೆ ಇದೆ. ಅನ್ನದಾತರ ನೋವು- ನಲಿವು ನನಗೆ ಗೊತ್ತಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಇದ್ದರೆ ಬದುಕಿದ್ದು ಸತ್ತಂತೆ. ಆ ಕಾರಣಕ್ಕೆ ಪ್ರತಿಭಟನೆಗೆ ಬಂದಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಪಾದಯಾತ್ರೆ ಮಾಡಿದಾಗ ಜನರಲ್ಲಿ ವಿಶ್ವಾಸವಿತ್ತು. ಹಾಗಾಗಿ ಅವರನ್ನು ದೊಡ್ಡಮಟ್ಟದಲ್ಲಿ ಕಾವೇರಿ ಹೋರಾಟ ಮಂಡ್ಯದವರಿಗೆ ಮಾತ್ರ ಅಲ್ಲ, ಬೆಂಗಳೂರಿನವರು ಮಾಡಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರನ್ನು ಎಲ್ಲಿಂದ ತರ್ತೀರಿ. ಕಬಿನಿ, ಕೆಆರ್‌ಎಸ್ ಡ್ಯಾಂ ಕಟ್ಟಿದ್ದು ತಮಿಳುನಾಡಿಗೆ ಬೇಕಾದಾಗ ನೀರು ಬಿಡೋದಕ್ಕಾ?. ಮಳೆಯಾದಾಗ ನಾವ್ಯಾರು ನೀರು ಏಕೆ ಬಿಟ್ರಿ ಎಂದು ಕೇಳಿಲ್ಲ. ಆದರೆ ಸಂಕಷ್ಟ ಇದ್ದ ಕಾಲದಲ್ಲಿ ನೀರು ಬಿಡಬಾರದು. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದವರು ಈಗ ಎಲ್ಲಿಗೋಯ್ತು ನಿಮ್ಮ ಘೋಷಣೆ ಎಂದು ವ್ಯಂಗ್ಯವಾಡಿದರು.




