Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಡಿ.10ಕ್ಕೆ ಮೈಷುಗರ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ : ಡಾ.ಶಿವಕುಮಾರ್


  • ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಅಂದಿನ ಮುಖ್ಯೋಪಾಧ್ಯಾಯ ಶ್ರೀ ಕೆ.ಮರೀಗೌಡ
  • ದೇಶ ವಿದೇಶದಲ್ಲಿ ನೆಲೆ ಕಂಡು ಕೊಂಡ ಹಿರಿಯ ವಿದ್ಯಾರ್ಥಿಗಳು 
  • 1949ರಲ್ಲಿ ಮೈಷುಗರ್ ಕಲ್ಯಾಣ ಮಂಟಪದಲ್ಲಿ ಪ್ರಾರಂಭವಾದ ಶಾಲೆ

ಮಂಡ್ಯನಗರದ ಮೈಷುಗರ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಡಿ.10 ರಂದು ಬೆಳಿಗ್ಗೆ 11 ಗಂಟೆಗೆ ಮೈಷುಗರ್ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅದ್ದರಿಂದ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮೈಷುಗರ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವ ಕಾರ್ಯದರ್ಶಿ ಡಾ.ಕೆ.ಎಂ.ಶಿವಕುಮಾರ್ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1949ರಲ್ಲಿ ಪ್ರಾರಂಭವಾದ ಈ ಶಾಲೆ ಮೊದಲು ಮೈಷುಗರ್ ಕಂಪನಿಯ ಕಲ್ಯಾಣ ಮಂಟಪದಲ್ಲಿ ಪ್ರಾರಂಭವಾಯಿತು. ನಂತರ 1964 ರಲ್ಲಿ, ಎಂ.ಸಿ. ರಸ್ತೆಯ ಹೊಸ ಕಟ್ಟಡಕ್ಕೆ ಸ್ಥಳಾಂತರವಾಯಿತು. ವಿದ್ಯಾರ್ಥಿಗಳಿಗೆ ಅಂದಿನ ಕಾಲದಲ್ಲಿ ಮಧ್ಯಾಹ್ನದ ಊಟೋಪಚಾರದ ವ್ಯವಸ್ಥೆಯಿತ್ತು. ಇದಕ್ಕೆ ಕಾರಣ ಅಂದಿನ ಮೈಷುಗರ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಬಿ.ಜಿ.ದಾಸೇಗೌಡರು ಎಂದು ಸ್ಮರಿಸಿದರು. ಪ್ರಸ್ತುತ  ಶಾಲೆಯಲ್ಲಿ ಪ್ರೌಢಶಾಲೆಯ ಜೊತೆಗೆ ಪ್ರಾಥಮಿಕ ಹಾಗೂ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ.

ಈ ಶಾಲೆ ಜಿಲ್ಲೆಯ ಜನರು ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸಲಾಗುವುದು. ಈ ಕಾರ್ಯಕ್ಕೆ ಹಿರಿಯ ವಿದ್ಯಾರ್ಥಿಗಳು ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಶಿಕ್ಷಕರಾಗಿದ್ದ ಕೆ.ಮರೀಗೌಡರ ಹೆಸರಿನಲ್ಲಿ ಬಡಾವಣೆ 

ಮೈಷುಗರ್ ಪ್ರೌಢಶಾಲೆಯ ಶಿಕ್ಷಕರಾಗಿದ್ದ ಕೆ.ಮರೀಗೌಡರ ಹೆಸರಿನಲ್ಲಿ ಒಂದು ಬಡಾವಣೆ ಇರುವುದು ರಾಜ್ಯದಲ್ಲಿಯೇ ಪ್ರಥಮವಾಗಿದೆ. ಅಷ್ಟರ ಮಟ್ಟಿಗೆ ಮರೀಗೌಡರು ಶಿಕ್ಷಕರಾಗಿ ಪ್ರಸಿದ್ದರಾಗಿದ್ದರು ಎಂದು ತಿಳಿಸಿದ ಅವರು, 1972 ರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಕೆ.ಮರೀಗೌಡರಿಗೆ ಕೆಂಗಲ್ ಹನುಮಂತರಾಯರು ಮತ್ತು ಕೆ.ವಿ.ಶಂಕರೇಗೌಡ ಅವರ ನೇತೃತ್ವದಲ್ಲಿ ರಾಷ್ಟ್ರ ಪ್ರಶಸ್ತಿ ದೊರೆತು, ಸನ್ಮಾನ ಸಭೆ ನಡೆಯಿತು ಎಂದರು.

ದೇಶ ವಿದೇಶದಲ್ಲಿ ಹಿರಿಯ ವಿದ್ಯಾರ್ಥಿಗಳು

ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶವಿದೇಶದಲ್ಲಿ ನಾನಾ ವಿಭಾಗದಲ್ಲಿ ಉತ್ತಮ ಹುದ್ದೆಯಲ್ಲಿ ಯಶಸ್ಸು ಹೊಂದಿ ಶಾಲೆಗೆ ‘ಕೀರ್ತಿ’ ತಂದಿದ್ದಾರೆ. ಈ ಶಾಲೆಯಲ್ಲಿ ಇದುವರೆಗೆ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, ಶಾಲೆಯ ಅಭಿವೃದ್ಧಿ ದೃಷ್ಠಿಯಿಂದ ಮೈಷುಗರ್ ಪ್ರೌಢಶಾಲೆ ಶ್ರೇಯೋಭಿವೃದ್ಧಿ ವಿದ್ಯಾರ್ಥಿಗಳ ಸಂಘ (ರಿ) ಸ್ಥಾಪಿಸಲಾಗಿದೆ. ಈ ಹಿಂದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದವರೆಗಲ್ಲರೂ ಸಂಘದಲ್ಲಿ ತಪ್ಪದೇ ನೊಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.

76 ಲಕ್ಷ ರೂ. ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಿಸಿಕೊಟ್ಟ ಹಿರಿಯ ವಿದ್ಯಾರ್ಥಿ ಆರ್.ಎಸ್.ರವಿ

ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿ ಆರ್.ಎಸ್.ರವಿ ಎಂಬುವರು 76 ಲಕ್ಷ ರೂ.ವೆಚ್ಚದಲ್ಲಿ 6 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೇ ಶಿಥಿಲಗೊಂಡಿದ್ದ ಶಾಲೆಯನ್ನು  ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದಲೇ 40 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗಿದೆ. ಅಲ್ಲದೇ ಶಾಲೆಯಲ್ಲಿ ಹೊಸದಾಗಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಶಾಲೆಯಲ್ಲಿ 280 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಧನ ಸಹಾಯಕ್ಕೆ ಮನವಿ 

ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು, ದಾನಿಗಳು ತಮ್ಮ ಕೈಲಾದಷ್ಟು ಧನ ಸಹಾಯವನ್ನು ಪ್ರತಿ ತಿಂಗಳು ಅಥವಾ ತಮಗೆ ಸಾಧ್ಯವಾದಾಗ, ದೇಣಿಗೆ ನೀಡುವ ಮೂಲಕ ಸಹಕರಿಸುವಂತೆ ಕೋರಲಾಗಿದೆ.

 ಧನ ಸಹಾಯ ಮಾಡವವರು :  A/c No.520141001679055, Union Bank, Mandya Branch IFSC: UBIN0901393, Name: Mysugar High School Welfare Old Students Association ಇಲ್ಲಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಹೆಚ್.ಹೊನ್ನಪ್ಪ, ಟಿ.ಆರ್.ರಮೇಶ್, ಶಿವಲಿಂಗಯ್ಯ ಹಾಗೂ ಸತ್ಯನಾರಾಯಣ್ ದೇವ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ