Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಮನ್ಮುಲ್ ನಿರ್ದೇಶಕರ ಚುನಾವಣೆಗೆ ಇಬ್ಬರು ಕಣಕ್ಕೆ ; ಡಿ.ಸಿ.ತಮ್ಮಣ್ಣ

ವರದಿ : ಪ್ರಭು ವಿ ಎಸ್

ಫೆ.೨ ರಂದು ನಡೆಯುವ ಮನ್ ಮುಲ್ ನಿರ್ದೇಶಕರ ಚುನಾವಣೆಗೆ ಜೆಡಿಎಸ್ ನಿಂದ ಎಸ್.ಮಹೇಶ್, ಬಿಜೆಪಿಯಿಂದ ರೂಪ ಅವರನ್ನ ಪಕ್ಷದ ವರಿಷ್ಠರು ಅಂತಿಮಗೊಳಿಸಿದ್ದಾರೆಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಭೆಯ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಕೂಟದ ಅಭ್ಯರ್ಥಿಗಳಾದ ಎಸ್.ಮಹೇಶ್ ಹಾಗೂ ರೂಪ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಇಂದಿನಿಂದಲೆ ಕಾರ್ಯತಂತ್ರ ರೂಪಿಸಬೇಕು ಎಂದರು.

೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ನಾನೇ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದ ಅವರು, ಕೆಲವರು ಈಗಾಗಲೇ ಮದ್ದೂರು ಕ್ಷೇತ್ರದಲ್ಲಿ ಹಲವಾರು ಕಡೆ ಡಿ. ಸಿ ತಮ್ಮಣ್ಣ ಅವರಿಗೆ ವಯಸ್ಸಾಗಿದೆ, ಆದ್ದರಿಂದ ನಾನೇ ಎನ್ ಡಿ ಎ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿರುವುದು ನನಗೆ ಬೇಸರ ತಂದಿದೆ ಎಂದು ಬಿಜೆಪಿ ಮುಖಂಡ ಎಸ್. ಪಿ ಸ್ವಾಮಿ ರವರ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

ನಮ್ಮ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ 94 ವರ್ಷ ವಯಸ್ಸಾಗಿದ್ದರೂ ಮುಂದೆ ನಡೆಯುವ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ, ಹೀಗಿರುವಾಗ ನಾನು ಏಕೆ ಮತ್ತೆ ಸ್ಪರ್ಧಿಸಬಾರದು. ಇಷ್ಟಕ್ಕೂ ಮೀರಿ ನನ್ನ ಕುಟುಂಬದಲ್ಲೇ ಸ್ಪರ್ಧಿಸಲು ಇಬ್ಬರಿದ್ದಾರೆ ಎಂದರು.

ಎನ್. ಡಿ. ಎ ಮೈತ್ರಿ ಧರ್ಮದಂತೆ ಜೆಡಿಎಸ್ ನಿಂದ ಒಬ್ಬರು ಹಾಗೂ ಬಿಜೆಪಿ ಯಿಂದ ಒಬ್ಬರು ಮನ್ ಮುಲ್ ಚುನಾವಣೆಗೆ ಸ್ಪರ್ದಿಸುವುದು ಎಂದಿತ್ತು, ಅದರಂತೆ ನಾವು ಮಹೇಶ್ ಅವರನ್ನು ಆಯ್ಕೆಗೊಳಿಸಿದ್ದೆವು, ಈಗ ಬಿಜೆಪಿಯಿಂದ ಕುಮಾರಿ ರೂಪಾ ಅವರನ್ನು ಆಯ್ಕೆಮಾಡಿರುವುದರಿಂದ ಅವರೇ ಎನ್. ಡಿ. ಎ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದು ಇವರಿಬ್ಬರ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಶ್ರಮಿಸಲಿದ್ದಾರೆ ಎಂದರು.

ಶಾಸಕ ಕೆ. ಎಂ ಉದಯ್ ರವರ ವಿರುದ್ದ ಹರಿಹಾಯ್ದ ತಮ್ಮಣ್ಣ, ಇತ್ತೀಚೆಗೆ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿರವರು ಚಾಕನಕೆರೆಯಲ್ಲಿ ಬಾಗಿನ ಅರ್ಪಿಸಿದ ಬಗ್ಗೆ ಶಾಸಕರು ಲಘುವಾಗಿ ಮಾತನಾಡಿರುವುದು ಸರಿಯಲ್ಲ, 10 ವರ್ಷದ ಹಿಂದೆ ದುಸ್ಥಿತಿಯಲ್ಲಿದ್ದ ಕೆರೆಗೆ ಪೈಪ್ ಲೈನ್ ಮಾಡಿಸಿ ನೀರು ತುಂಬಿಸಲು ಯೋಜನೆ ರೂಪಿಸಿದವನು ನಾನು. ಆದರೆ ಶಾಸಕರು ಮಾತನಾಡಿರುವುದು ಏನೋ ಹಳ್ಳಿ ಕಡೆಗಳಲ್ಲಿ ಗಾದೆಯೊಂದನ್ನು ಹೇಳಿದಂತಿದೆ ಎಂದರು.

ಕುಮಾರಸ್ವಾಮಿರವರು ಜಿಲ್ಲೆಯ ಅಭಿವೃದ್ಧಿಗೆ ಇನ್ನೂ ಬಿಡಿಗಾಸನ್ನು ನೀಡಿಲ್ಲ ಎಂದು ವೇದಿಕೆಯೊಂದರಲ್ಲಿ ಮಾತನಾಡಿದ್ದಾರೆ. ಹೆಚ್. ಡಿ ಕೆ ಹಾಗೂ ನಾನು ಕ್ಷೇತ್ರಕ್ಕೆ ಏನು ಮಾಡಿದ್ದೇವೆ ಎಂದು ಜನರಿಗೆ ತಿಳಿದಿದೆ.
ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿ, ಕಾಂಗ್ರೆಸ್ ನಲ್ಲಿ ಇಷ್ಟು ಮಂದಿ ಶಾಸಕರಿದ್ದರೂ ಏಕೋ ಏನೋ ಅನಿಶ್ಚಿತತೆ ಕಾಡುತ್ತಿರಬಹುದೇನೋ, ಆದರೆ ನಮ್ಮ ಪಕ್ಷದ ಶಾಸಕರು ಪ್ರಾಮಾಣಿಕರಿದ್ದಾರೆ ಎಂದರು.

ಈ ವೇಳೆ ಮನ್ ಮುಲ್ ಚುನಾವಣಾ ಅಭ್ಯರ್ಥಿಗಳಾದ ಎಸ್ ಮಹೇಶ್, ರೂಪ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ, ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೆಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್, ಮುಖಂಡರಾದ ಕೂಳಗೆರೆ ಶೇಖರ್, ಕೆ.ಟಿ ರಾಜಣ್ಣ, ಜಿ. ಸಿ.ಮಹೇಂದ್ರ, ಹನುಮಂತು, ಮ.ನ ಪ್ರಸನ್ನ ಕುಮಾರ್, ಶಿವಮಲ್ಲಪ್ಪ ಕದಲೂರು ಸುರೇಶ್ ಕೆಂಪಬೋರಯ್ಯ,ಬಾಬು, ಗುರುಮಲ್ಲೇಶ್ ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ