-
ಸಾವಿರ ಸಾವಿರ ಸಾಹಿತ್ಯಾಸಕ್ತ ಎಳೆಯರ ಪ್ರೇರಕ ಶಕ್ತಿ ‘ಅಕ್ಕಾಜಿ’
- ಪಕ್ಷಿಗಳ ಚಿತ್ರ ತೆಗೆಯಲು ಹಲವಾರು ರಾಜ್ಯಗಳನ್ನು ಅಲೆದ ‘ಛಾಯಾಗ್ರಾಹಕಿ‘
ಮಂಡ್ಯ ತಾಲ್ಲೂಕಿನ ದುದ್ದ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಯೋಜಿಸಿರುವ 17ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ನಿವೃತ್ತ ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿ ಅವರ ಬಗ್ಗೆ ನುಡಿ ಕರ್ನಾಟಕ.ಕಾಮ್ ಮಾಡಿರುವ ವಿಶೇಷ ವರದಿ.
ಆದರ್ಶ ಗುರುವು ಎಳೆಯ ಹರೆಯದ ಮಕ್ಕಳನ್ನು ಭವ್ಯನಾಡು ಕಟ್ಟುವ ನಾಯಕರನ್ನಾಗಿಸುತ್ತಾರೆ. ಅದರಲ್ಲೇ ಬದುಕ ಧನ್ಯತೆ ಕಾಣುತ್ತಾರೆ. ಇಂತಹ ಧನ್ಯತಾ ಭಾವದಿಂದ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿ ತಮ್ಮ ಬದುಕಾನಂದವನ್ನು ಕಾಣುತ್ತಿರುವವರೇ ನಮ್ಮೆಲ್ಲರಭಿಮಾನದ ಅಪ್ಪಟ ಮಾತೃ ಹೃದಯಿ ಗುರು ಡಾ.ಲೀಲಾ ಅಪ್ಪಾಜಿಯವರು ಖ್ಯಾತ ದಂತವೈದ್ಯ ಡಾ. ಅಪ್ಪಾಜಿ ಅವರ ಸಹಧರ್ಮಿಣಿ ಡಾ.ಲೀಲಾ ಅವರು ಎಲ್ಲರೊಲವಿನ “ಅಕ್ಕಾಜಿ ಆಗಿಯೇ ಮಂಡ್ಯದ ಹಿರಿಮೆ ಬೆಳಗಿದ್ದಾರೆ, ಬೆಳಗುತ್ತಿದ್ದಾರೆ.

ಜಯಮ್ಮ ಮತ್ತು ಪ್ರೊ.ಬಿ.ಕೆ.ಗದ್ದಲಿಂಗಯ್ಯ ದಂಪತಿಗಳ ಸುಪುತ್ರಿಯಾಗಿ ದಿನಾಂಕ 03-10-1955ರಲ್ಲಿ ಜನಿಸಿದ ಲೀಲಾ ಅವರು, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯ ನಂತರ ಬಿಳಿಗಿರಿ ರಂಗನ ಬೆಟ್ಟ ಒಂದು ಸಾಂಸ್ಕೃತಿಕ ಅಧ್ಯಯನ’ ವಿಷಯದಲ್ಲಿ ಪಿ ಹೆಚ್ ಡಿ ಪಡೆದರು. ಮಂಡ್ಯದ ಖ್ಯಾತ ದಂತವೈದ್ಯ ಡಾ.ಅಪ್ಪಾಜಿ ಅವರನ್ನು ಮದುವೆಯಾಗಿ ಆದರ್ಶ ಗೃಹಿಣಿ ಎನಿಸಿದರು. ಡಾ.ತಾರಾ ಹಾಗೂ ಡಾ.ರಶ್ಮಿ ಅವರ ತಾಯಿಯಾಗಿ ಆದರ್ಶ ಮಾತೆಯಾದರು. ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ತಿದ್ದಿ ತೀಡಿದ ಆದರ್ಶಗುರು ಎನಿಸಿದರು. ಎಲ್ಲರೊಲವಿಗೆ ಪಾತ್ರರಾದ ಅದರ್ಶ ಮಹಿಳೆಯಾದರು.

1980 ರಿಂದ ಕನ್ನಡ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ ಇವರು ವೃತ್ತಿಬದುಕಿನ ಮೊದಲ ಇಪ್ಪತ್ತೆಂಟು ವರ್ಷಗಳಲ್ಲಿ ಸರ್ಕಾರಿ ಬಾಲಕರ ಕಾಲೇಜು ಮಂಡ್ಯ, ಮಹಿಳಾ ಸರ್ಕಾರಿ ಕಾಲೇಜು ಮಂಡ್ಯ, ಕುವೆಂಪು ಅಧ್ಯಯನ ಸಂಸ್ಥೆ ಮೈಸೂರು, ಮಹಾರಾಣಿ ಕಲಾ ಕಾಲೇಜು ಮೈಸೂರು, ಮಹಿಳಾ ಸರ್ಕಾರಿ ಕಾಲೇಜು ಮಂಡ್ಯ ಗಳಲ್ಲಿ ಸೇವೆ ಸಲ್ಲಿಸಿ, ಮುಂದೆ 2008 ರಿಂದ 2015 ರವರಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ, ಮಹಿಳಾ ಕಾಲೇಜು ಮದ್ದೂರು ಮತ್ತು ಮಹಿಳಾ ಕಾಲೇಜು ಮಂಡ್ಯ ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಕಳೆದ ಏಳು ವರ್ಷಗಳಿಂದ ಪಕ್ಷಿ ಪ್ರಿಯರಾಗಿ, ಪಕ್ಷಿ ಭಾಯಾಚಿತ್ರಗಾರರಾಗಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಬದುಕಿನ ಸಾರ್ಥಕತೆಯನ್ನು ಕಂಡಿದ್ದಾರೆ.

ಡಾ.ಲೀಲಾ ಅಪ್ಪಾಜಿ ಅವರ ಪ್ರವೃತ್ತಿ, ಹವ್ಯಾಸ ಹಾಗೂ ಆಸಕ್ತಿ ಬಹುಮುಖವಾದುದು. 2004ರಲ್ಲಿ ಕುವೆಂಪು ಚಿತ್ರ ಸಂಯೋಜನೆ, 2005ರಲ್ಲಿ ಗಾಂಧೀಜಿ ಚಿತ್ರ ಸಂಯೋಜನೆ, 2008ರಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕವಿಕಾವ್ಯ, 2010 ರಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕವಿ ಕಂಡ ಕನ್ನಡನಾಡು’, 2011ರಲ್ಲಿ ರವೀಂದ್ರನಾಥ ಟಾಗೂರ್ ಚಿತ್ರ ಸಂಗ್ರಹ ಸಂಯೋಜನೆ ಪ್ರದರ್ಶನಗಳನ್ನು ನೀಡಿ ಜನಮನ ಗೆದ್ದಿದ್ದಾರೆ.

ಸಾಹಿತ್ಯಿಕವಾಗಿಯೂ ಡಾ.ಲೀಲಾ ಅಪ್ಪಾಜಿ ಅವರು ಅನುಪಮ ಸಾಧಕರು, ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ 2019ರ ಪ್ರಬಂಧಗಳು, ಮಂಡ್ಯ ಜಿಲ್ಲಾ ಅಮೃತ ಮಹೋತ್ಸವದ ಅಂಗವಾಗಿ “ಅಮೃತ ಮಂಡ್ಯ ‘ ಸ್ಮರಣ ಸಂಚಿಕೆ ಬೃಹದ್ಗಂಥವನ್ನು ಸಂಪಾದಿಸಿದ್ದಾರೆ. ‘ ಹಕ್ಕಿಯಾನ ಅಂಕಣವಾಗಿ ” ಅವಧಿ ” ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ.” ಹಕ್ಕಿ ಹಾಜರಾತಿ ಹಾಗೂ ” ಕವನ ಸಂಕಲನ” ಪುಸ್ತಕ ಪ್ರಕಟಣೆಗೆ ಸಿದ್ಧವಾಗುತ್ತಿದೆ. ಹಲವಾರು ಕವನ, ಲೇಖನಗಳು ಪ್ರಕಟವಾಗಿವೆ.

ಸಂಕಿರಣಗಳಲ್ಲಿ ಕಾರ್ಯಕ್ರಮ, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಉಪನ್ಯಾಸ ನೀಡಿದ್ದಾರೆ. ಮುಖ್ಯವಾಗಿ ಸಾವಿರ ಸಾವಿರ ಸಾಹಿತ್ಯಾಸಕ್ತ ಎಳೆಯರ ಪ್ರೇರಕ ಶಕ್ತಿಯಾಗಿದ್ದಾರೆ. ಕುವೆಂಪು ಚಿತ್ರದರ್ಶನ ಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಬದುಕು’ ಆನ್ಲೈನ್ ಕಾರ್ಯಕ್ರಮದ ಸಂಚಾಲಕರಾಗಿ ಈ ತನಕ ನೂರಕ್ಕೂ ಹೆಚ್ಚು ವಾರಾಂತ್ಯ ಕಾರ್ಯಕ್ರಮಗಳನ್ನು ಡಾ.ಸುಧಾ ಅವರೊಡನೆ ಆಯೋಜಿಸಿದ್ದಾರೆ.

ಡಾ.ಲೀಲಾ ಅಪ್ಪಾಜಿ ಅವರು 2016ರಿಂದ ಹಕ್ಕಿ ಛಾಯಾಚಿತ್ರಗ್ರಾಹಕರಾಗಿ ಅಂಡಮಾನ್ ನಿಕೋಬಾರ್ ಸೇರಿದಂತೆ ಭಾರತದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಾಗೂ ಭೂತಾನಿನಲ್ಲಿ ಹಕ್ಕಿ ಚಿತ್ರ ತೆಗೆಯಲು ಸಂಚರಿಸಿದ್ದಾರೆ. ಏಳುನೂರಕ್ಕೂ ಹೆಚ್ಚು ಹಕ್ಕಿಗಳ ಚಿತ್ರ ತೆಗೆದಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಹಕ್ಕಿಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಸಂದರ್ಶನಗಳಲ್ಲೂ ಪಾಲ್ಗೊಂಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಇವರು 2017 ರ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗಾಂಧೀ ಸ್ಮಾರಕ ನಿಧಿ, ಜಯಶ್ರೀ ದತ್ತಿ ಪುರಸ್ಕಾರ, ಮದ್ದೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಮಂಡ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗುರುದೇವ ಪುರಸ್ಕಾರ…ಹೀಗೆ ಹಲವಾರು ? ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
(ಈ ಲೇಖನದಲ್ಲಿ ಬಳಸಲಾಗಿರುವ ಎಲ್ಲಾ ಛಾಯಚಿತ್ರಗಳನ್ನು ಸ್ವತಃ ಡಾ.ಲೀಲಾ ಅಪ್ಪಾಜಿ ಅವರೇ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ)




