ಭಾರತದ ಸಂವಿಧಾನವನ್ನು ಬದಲಿಸಿ ಮನುಸ್ಮೃತಿಯನ್ನು ಹೇರಲು ಹವಣಿಸುತ್ತಿರುವ ಸಂಘ ಪರಿವಾರದ ಅಂಗಪಕ್ಷವಾದ ಬಿಜೆಪಿ ಜೊತೆ ರಾಜಕೀಯ ಮೈತ್ರಿ ಮಾಡಿಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಮ್ಮ ಬೆಂಬಲವಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರ ವಿವಿಧ ದಲಿತ ಸಂಘಟನೆಗಳ ಮುಖಂಡರು ಶನಿವಾರ ಒಕ್ಕೊರಲ ನಿರ್ಧಾರಕ್ಕೆ ಬಂದಿದ್ದು, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
ಮಂಡ್ಯನಗರದ ಕನಕ ಭವನದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಈ ಲೋಕಸಭಾ ಚುನಾವಣೆಯು ಕೊನೆಯ ಅವಕಾಶವಾಗಿದೆ, ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವುದು ಒಂದೇ, ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಗೆಲ್ಲುವುದು ಒಂದೇ, ಏಕೆಂದರೆ ಪ್ರಧಾನಿ ಮೋದಿ ಕೋಮುವಾದಿಯಾದರೆ ಕುಮಾರಸ್ವಾಮಿ ಕೋಮುವಾದಿ ಮನಸ್ಥಿತಿ ಜೊತೆಗೆ ಜಾತಿವಾದಿಯಾಗಿದ್ದಾರೆ ಎಂದು ಕಿಡಿಕಾರಿದರು.
ಕ್ವಾಟರ್ ಬಾಟಲ್ ನೀಡಿ ಬಿಡಿ ಎಂದಿದ್ದರು
2013ರಲ್ಲಿ ಸಿದ್ದರಾಮಯ್ಯ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದಾಗ ಕುಮಾರಸ್ವಾಮಿ ಅಕ್ಕಿ ಜೊತೆಗೆ ಕ್ವಾಟರ್ ಬಾಟಲ್ ನೀಡಿಬಿಡಿ, ನೀವು ಜನರನ್ನು ಸೋಮಾರಿ ಮಾಡುತ್ತಿದ್ದೀರಿ ಎಂದಿದ್ದರು, ಶೋಷಿತರು ದುಡಿಯಲು ಹುಟ್ಟಿದ್ದಾರೆ ಎಂಬ ಮನಸ್ಥಿತಿಯನ್ನು ಅನಾವರಣ ಮಾಡಿದ್ದರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೇವೆ ಎಂದರು.
2022 ಡಿಸೆಂಬರ್ ನಲ್ಲಿ ನಡೆದ ದಲಿತ ಸಂಘಟನೆಗಳ ಐಕ್ಯತಾ ಸಭೆಯಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಅಳಿವು ಉಳಿವಿನ ಪ್ರಶ್ನೆಯಾಗಿರುವ ಕೋಮುವಾದಿ ಶಕ್ತಿಯನ್ನು ಮಣಿಸಲು ನಿರ್ಣಯಿಸಿದ್ದೇವು. ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಸಹಕಾರ ಬೆಂಬಲ ಬೇಕೊ, ಬೇಡವೊ ಎಂಬುದು ಮುಖ್ಯವಲ್ಲ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ, ನಾಗರಿಕ ಹಕ್ಕುಗಳ ರಕ್ಷಣೆ ಹಾಗೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಕನಿಷ್ಠ ಬದ್ಧತೆ ತೋರಿರುವ ಕಾಂಗ್ರೆಸ್ ಪಕ್ಷವನ್ನು ಈಗ ಬೆಂಬಲಿಸುವುದು ಅಗತ್ಯವಾಗಿದೆ ಎಂದರು.
ಹೆಚ್.ಡಿ.ಕೆ ಸೋಲಿಸಲು ಸವಾಲು
ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸುವ ಮೂಲಕ ಕೋಮುವಾದಿ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿಯನ್ನು ಸೋಲಿಸಲು ಸವಾಲು ಸ್ವೀಕರಿಸಿದ್ದೇವೆ, ಇದಕ್ಕಾಗಿ ದಸಂಸ ಮುಖಂಡರು,ಕಾರ್ಯಕರ್ತರು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಎಂದರು.
ದೇಶದ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಸಂಸದರು ಹೇಳುತ್ತಾರೆ, ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಚಪ್ಪಲಿ ಬಿಡುವ ಸ್ಥಳದಲ್ಲಿದ್ದವರು ಇದೀಗ ನಮ್ಮ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ದಲಿತರನ್ನು ಅವಮಾನಿಸುತ್ತಾರೆ. 10 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ದುರಾಡಳಿತದಿಂದ ದೇಶದ ಜನತೆಯ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಕೋಮುವಾದಿಗಳನ್ನು ಮಣಿಸುವುದು ನಮ್ಮ ಗುರಿ ಎಂದರು.
ಸಭೆಯಲ್ಲಿ ವಿವಿಧ ದಲಿತ ಹಾಗೂ ಅಹಿಂದ ಸಂಘಟನೆಗಳ ಮುಖಂಡರಾದ ಪ್ರೊ.ಹುಲ್ಕೆರೆ ಮಹದೇವ್, ಎಲ್ ಸಂದೇಶ್, ಹಾರೋಹಳ್ಳಿ ಪ್ರಕಾಶ್, ಚಂದ್ರಶೇಖರ್, ಪ್ರಕಾಶ್ ಬ್ಯಾಡರಹಳ್ಳಿ, ಹಾಲಪ್ಪ, ದೇವರಾಜ್, ಗಂಗಾಧರ್, ಕೃಷ್ಣಪ್ರಸಾದ್, ರಾಜಶೇಖರ್, ರಾಮಂದೂರು ಸಿದ್ದರಾಜು, ಮುದ್ದಯ್ಯ, ರವಿಕುಮಾರ್, ಗೋವಿಂದರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




