ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಚಿತ್ರನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ ಕೋರಮಂಗಲದ ಎಸಿಎಂಎಂನ ಕೋರ್ಟ್ ನ್ಯಾಯಾಧೀಶ ವಿಶ್ವನಾಥ್ ಸಿ.ಗೌಡರ್ ಅವರು ಆದೇಶ ನೀಡಿದ್ದಾರೆ.
ದರ್ಶನ್ ಗೆಳತಿ ಪವಿತ್ರಗೌಡರಿಗೆ ಅಶ್ಲೀಲ ಮೆಸೇಜ್ ಮಾಡಿದ ಹಿನ್ನಲೆಯಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ದರ್ಶನ್ ಹಾಗೂ ಆತನ ಗೆಳೆಯರು ಕೊಲೆ ಮಾಡಿದ್ದ ಆರೋಪದ ಹಿನ್ನಲೆಯಲ್ಲಿ ಒಟ್ಟು 13 ಮಂದಿ ಬಂಧಿಸಲಾಗಿದೆ.
ಎಲ್ಲಾ ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಮಂಗಳವಾರ ಸಂಜೆ ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಜಡ್ಜ್ ಮುಂದೆ ದರ್ಶನ್, ಪವಿತ್ರಾ ಗೌಡ ಕಣ್ಣೀರು
ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ ನಾನು ತಪ್ಪು ಮಾಡಿಲ್ಲ, ನಾನು ಈ ಕೊಲೆ ಪ್ರಕರಣದಲ್ಲಿ ಇಲ್ಲ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ನ್ಯಾಯಾಧೀಶರೆದುರೇ ದರ್ಶನ್ ಹಾಗೂ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ಕಣ್ಣೀರು ಸುರಿಸಿದ್ದಾರೆ ಎನ್ನಲಾಗಿದೆ.
ನಟನೆ, ಸಿನಿಮಾಗಳ ಜತೆಗೆ ವಿವಾದಗಳಿಂದಲೂ ಹೆಚ್ಚು ಸುದ್ದಿಯಲ್ಲಿರುವ ಸ್ಯಾಂಡಲ್ವುಡ್ ನಟ ದರ್ಶನ್ ಅವರೀಗ ಗಂಭೀರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಎಂಬ 28 ವರ್ಷದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್ 364ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇನ್ನು ಗೋಡೌನ್ನಲ್ಲಿ ಇರಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದಾದ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಹಾಗಾಗಿ, ಐಪಿಸಿ 302 ಸೆಕ್ಷನ್ ಅಡಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ್ದರಿಂದ ರೇಣುಕಾಸ್ವಾಮಿ ಮೇಲೆ ಸಿಟ್ಟಾದ ದರ್ಶನ್ ಆತನ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಮೃತನಾಗಿದ್ದು,ನಂತರ ಆತನ ಶವವನ್ನು ಮೋರಿಗೆ ಎಸೆಯಲಾಗಿತ್ತು.




