ಪಾಂಡವಪುರ ಪಟ್ಟಣದಲ್ಲಿ ಶೀಘ್ರದಲ್ಲಿಯೇ ಕಲಾಮಂದಿರ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಸದ್ಗುರು ಶ್ರೀ ತ್ಯಾಗರಾಜರ ಆರಾಧನಾ ಸೇವಾ ಸಮಿತಿ ಪಾಂಡವಪುರ ಹಾಗೂ ಸವಿತಾ ಸಮಾಜದ ವತಿಯಿಂದ ಬಹಳ ವಿಜೃಂಭಣೆಯಿಂದ ನಡೆದ
ಸದ್ಗುರು ಶ್ರೀ ತ್ಯಾಗರಾಜರ ಮೂರನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.
ಪಾಂಡವಪುರದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಒಂದೊಂದು ಕಚೇರಿ ತೆರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಾ ಸಮುದಾಯವರಿಗೂ ಅನುಕೂಲವಾಗುವಂತೆ ಪಾಂಡವಪುರದಲ್ಲಿ ಕಲಾಮಂದಿರ ನಿರ್ಮಿಸಲಾಗುವುದು. ಇದರಲ್ಲೇ ಎಲ್ಲಾ ಸಮುದಾಯವರು ಕಚೇರಿ ಮಾಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸುಲಭ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಮುದಾಯ ಭವನದ ಅವಶ್ಯಕತೆ
ಸವಿತಾ ಸಮಾಜದ ಜಿಲ್ಲಾ ಮಾಜಿ ಅಧ್ಯಕ್ಷ ಪ್ರತಾಪ್ ಮಾತನಾಡಿ, ನಮ್ಮ ಸಮಾಜದವರು ಮದುವೆ ಹಾಗೂ ಇತರೆ ಶುಭ ಕಾರ್ಯಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. ಹೀಗಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸಮುದಾಯ ಭವನ ನಿರ್ಮಿಸಲು ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರು ಸವಿತಾ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿಕೊಡಲು ಭರವಸೆ ನೀಡಿದ್ದಾರೆ. ಜತೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಮುದಾಯ ಭವನ ಇದೆ. ಆದರೆ ಪಾಂಡವಪುರದಲ್ಲಿ ಮಾತ್ರ ಇಲ್ಲ ಎಂದರು.
ಬೆಳಗ್ಗೆ ಮಂಗಳವಾದ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಶ್ರೀ ತ್ಯಾಗರಾಜರ ಮೂರ್ತಿ ಮೆರವಣಿಗೆ ನಡೆಸಲಾಯಿತು.
ತದನಂತರ ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಮೈಸೂರಿನ ಸವಿಗಾನ ಸಂಗೀತ ಶಾಲೆಯ ವಿದುಷಿ ಗಾಯಿತ್ರಿ ಸತ್ಯನಾರಾಯಣರವರ ಶಿಷ್ಯ ವೃಂದದವರಿಂದ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಹಾಗೂ ವಿದ್ವಾನ್ ಹರೀಶ್ ಪಾಂಡವ್ ಅವರ ಸ್ಯಾಕ್ಷೋಫೋನ್, ದೂರದರ್ಶನ ಕಲಾವಿದ ವಿದ್ವಾನ್ ಪಿ.ಲೋಕೇಶ್ ಅವರ ಸಹ ಸ್ಯಾಕ್ಷೋಫೋನ್ ವಾದನ ಮತ್ತು ವಿದ್ವಾನ್ ಎಂ.ಆರ್.ಗಣೇಶ್ ಇತರರು ನುಡಿಸಿದ ಡೋಲು ಕಛೇರಿಯು ಎಲ್ಲರನ್ನೂ ತಲೆದೂಗುವಂತೆ ಮಾಡಿತು. ಈ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆರ್.ಜಯರಾಂ, ಮಾಜಿ ಅಧ್ಯಕ್ಷ ಪ್ರತಾಪ್, ಮುಖಂಡರಾದ ಮಾಣಿಕ್ಯನಹಳ್ಳಿ ತಮ್ಮಣ್ಣ, ಅರಳಕುಪ್ಪೆ ಶಿವಕುಮಾರ್, ಸುಂಕಾತೊಣ್ಣೂರು ರಘು, ಜಯರಾಂ, ಲೋಕೇಶ್, ರಾಮಚಂದ್ರ, ಬೆಳ್ಳಾಳೆ ಲೋಕೇಶ್, ಕುಷನ್ ರವೀಂದ್ರಕುಮಾರ್, ಮೈಕ್ ಸೋಮಣ್ಣ, ಕೆನ್ನಾಳು ಬಸವರಾಜು, ನಾಗೇಂದ್ರ, ಕೇಶವಮೂರ್ತಿ, ತಿಮ್ಮನಕೊಪ್ಪಲು ಕುಮಾರ್, ಪ್ರತೀಶ್, ತಿಮ್ಮರಾಜು, ಕೆರೆತೊಣ್ಣೂರು ಅಭಿ, ಟೌನ್ ಅಧ್ಯಕ್ಷ ಸ್ವಾಮಿ, ಯುವ ಮುಖಂಡ ಮೂರ್ತಿ ಸೇರಿದಂತೆ ಇತರರಿದ್ದರು.




