ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ರೈತಸಂಘದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಸೋಲು ಅನುಭವಿಸಿ ವಿದೇಶಕ್ಕೆ ಮರಳಿದ್ದ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ ಪುಟ್ಟಣ್ಣಯ್ಯ ಈಗ ಮತ್ತೇ ತಾಯ್ನೆಲಕ್ಕೆ ಮರಳಿರುವುದು ರೈತಸಂಘದ ಹೋರಾಟದ ಕಿಚ್ಚನ್ನು ಇಮ್ಮಡಿಗೊಳಿದೆ.
ವಿದೇಶದಿಂದ ಮಂಡ್ಯಕ್ಕೆ ಆಗಮಿಸಿದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಮಂಡ್ಯದಲ್ಲಿ ಶುಕ್ರವಾರ ಅದ್ಧೂರಿ ಸ್ವಾಗತವೇ ದೊರೆಯಿತು. ರೈತಸಂಘದ ಮುಂಚೂಣಿಯ ನಾಯಕರು ಹಾಗೂ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಯುವ ರೈತನಾಯಕನ ‘ದರ್ಶನ’ ಪಡೆದು ಪುಳಕಿತರಾದರು.
ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ
ಮಂಡ್ಯನಗರಕ್ಕೆ ಆಗಮಿಸಿದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕುವ ಮೂಲಕ ರೈತ ಕಾರ್ಯಕರ್ತರು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ರೈತಸಂಘ ಇನ್ನು ಮುಂದೆ ರಾಜಕೀಯ ಶಕ್ತಿಯಾಗಬೇಕು ಎಂದು ಘೋಷಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ನಮ್ಮ ಸ್ವ ಕ್ಷೇತ್ರ ಮೇಲುಕೋಟೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಪರೋಕ್ಷವಾಗಿ ಕಹಳೆ ಮೊಳಗಿಸಿದರು.
ಪ್ರಮಾಣ ವಚನ ಸ್ವೀಕಾರ
ಮಂಡ್ಯ ಜಿಲ್ಲೆಯ ಸಮಸ್ತ ಜನರ ಆಶಯಗಳಿಗಾಗಿ ರೈತ, ದಲಿತ, ಕಾರ್ಮಿಕ, ಮಹಿಳೆ ಮತ್ತು ವಿದ್ಯಾರ್ಥಿ ಯುವಜನರ ಭರವಸೆಗಳಿಗಾಗಿ ಜಿಲ್ಲೆಯ ಸ್ವಾಭಿಮಾನವನ್ನು ರಾಜ್ಯ ಮತ್ತು ರಾಷ್ಟ್ರದಲ್ಲಿ ಎತ್ತಿ ಹಿಡಿಯುವುದಕ್ಕಾಗಿ ಹೊಸ ನಡೆ-ನುಡಿಯ ರಾಜಕಾರಣಕ್ಕಾಗಿ ನಾವು ರೈತ ಸಂಘದ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ಎಂದು ಇದೇ ವೇಳೆ ರೈತ ಮುಖಂಡರು ಮಂಡ್ಯದಲ್ಲಿ ಪ್ರಮಾಣ ಸ್ವೀಕರಿಸಿದರು.
ಹೊಳಲಿನಲ್ಲೂ ಅಭಿಮಾನದ ಹೊನಲು
ಮೊದಲು ಮಂಡ್ಯಕ್ಕೆ ಬಂದ ದರ್ಶನ್ ಪುಟ್ಟಣ್ಣಯ್ಯ ರೈತ ಹೋರಾಟಗಾರರನ್ನು ಉದ್ಧೇಶಿಸಿ ಮಾತನಾಡಿದರು. ನಂತರ ಅವರನ್ನು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಮೆರವಣಿಗೆಯಲ್ಲಿ ಹೊಳಲು ಗ್ರಾಮಕ್ಕೆ ಕರೆದೊಯ್ದರು.
ಅಲ್ಲಿಯೂ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತಸಂಘದ ಕಾರ್ಯಕರ್ತರು ಪಟಾಕಿ ಸಿಡಿಸಿ ಅವರನ್ನು ಬರಮಾಡಿಕೊಂಡರು.

ಹೊಳಲಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಹೆಚ್.ಡಿ.ಚೌಡಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು, ನಂತರ ಬಲಮುರಿ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಅನಂತರ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಅವರ ಹುಟ್ಟೂರು ಕ್ಯಾತನಹಳ್ಳಿಗೆ ಬೈಕ್ ರ್ಯಾಲಿಯ ಮೂಲಕ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಎಲ್ಲೆಲ್ಲೂ ಹಸಿರು ಟವಲ್ ಗಳನ್ನು ಹಾಕಿಕೊಂಡ ಜನಸ್ತೋಮವೇ ಕಾಣುತ್ತಿತ್ತು. ಎಲ್ಲಾ ರೈತ ಕಾರ್ಯಕರ್ತರು ಹಸಿರು ಟವಲ್ ಗಳನ್ನು ಬೀಸುವ ಮೂಲಕ ಯುವ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತಮುಖಂಡರಾದ ಚೇತನ್, ಶ್ಯಾಂ, ಚಂದನ್, ಬಾಬು, ಮಂಜು ಮತ್ತಿತರರು ಭಾಗವಹಿಸಿದದರು.




