ಮಂಡ್ಯ : ಭಾರತ ಸಂವಿಧಾನದ ಸದಾಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ಉಸಿರಾಗಿಸಿಕೊಂಡು ಬಹುತ್ವದ “ಪ್ರಬುದ್ಧ ಭಾರತ” ನಿರ್ಮಿಸಲು ಭಾರತೀಯರಾದ ನಾವೆಲ್ಲರೂ ಧೀಕ್ಷಾ ಬದ್ಧರಗೋಣ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ವೆಂಕಟಗಿರಿಯಯ್ಯ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕದ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯನ್ನು ಖಂಡಿಸಿ ಬಜೆಟ್ ನಲ್ಲಿ ಬೇಡಿಕೆಗಾಗಿ ಒತ್ತಾಯಿಸಿ ಹಾಗೂ ಸಾಮಾಜಿಕ ಪರಿವರ್ತನೆ ಮತ್ತು ಆರ್ಥಿಕ ವಿಮೋಚನೆಯ ಭಾರತ ಸಂವಿದಾನವನ್ನು ರಕ್ಷಿಸಲು ಸಂವಿಧಾನ ಜಾಗೃತಿ ಸಮಾವೇಶವದ ಮುಖ್ಯ ಭಾಷಣ ಕಾರರಾಗಿ ಅವರು ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲಿ ಅಸಮಾನತೆ, ಅಸ್ಪೃಶ್ಯತೆ, ತಾಂಡವವಾಡುತ್ತಿತ್ತು, ಆಸ್ತಿ, ಅಂತಸ್ತು, ಅಧಿಕಾರ ಸೇರಿದಂತೆ ಎಲ್ಲವೂ ಶೇ. 2-3 ರಷ್ಟು ಪ್ರಮಾಣದಲ್ಲಿರುವ ಜನರ ಕೈಯಲ್ಲಿ ಇತ್ತು, ಇಂತಹ ಅಸಮಾನತೆ ವಿರುದ್ದ ಹೋರಾಡಿ, ಈ ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬರಿಗೆ ಎಲ್ಲಾ ಹಕ್ಕು ಗಳು ದೊರಕಿಸಿ ಕೊಟ್ಟವರು ಅಂಬೇಡ್ಕರ್ ಎಂದ ಅವರು ಆದರೂ ಅಂಬೇಡ್ಕರ್ ಚಿಂತನೆಯ ವಿರೋಧಿಗಳಾದಂತ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಭಾರತ ಸಂವಿಧಾನವನ್ನು ಜಾರಿ ಮಾಡಲಾಗದೆ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮತ್ತು ಬ್ರಿಟೀಷರ ವಿರುದ್ಧ ಡಾ।। ಬಿ. ಆರ್. ಅಂಬೇಡ್ಕರ್ ರವರು ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಭಾರತೀಯ ಕಾಯ್ದೆ-1935ರಂತೆ ಭಾರತೀಯ 21ವರ್ಷ ತುಂಬಿದ ವಯಸ್ಕರೆಲ್ಲರಿಗೂ “ಮತದಾನದ ಹಕ್ಕನ್ನು ಕೊಡಿಸಿದ್ದಾರೆ. ಇಂತಹ ಅತ್ಯಮೂಲ್ಯ ಮತದಾನದ ಹಕ್ಕನ್ನು ಮಾರಾಟ ಮಾಡಿಕೊಳ್ಳದೆ ಸಂರಕ್ಷಿಸಿ, ಪ್ರಜಾತಂತ್ರದ ಕಗ್ಗೋಲೆಗೆ ಕಡಿವಾಣವಾಕಿ. ಮತಗಳನ್ನು ಕೊಂಡುಕೊಳ್ಳಲು ಮುಂದಾಗುವವರನ್ನು ಸೋಲಿಸೋಣ ಎಂದು ಕರೆನೀಡಿದರು.
ಭಾರತ ಸಂವಿಧಾನದ ಅನುಚ್ಚೇಧ 324ರಿಂದ 329ರವರೆಗಿನ ಆಶಯಗಳನ್ನು ಮತ್ತು ದೇಶದ ಚುನಾವಣಾ ಕಾನೂನುಗಳನ್ನು ಮೊದಲಿಗೆ ಭಾರತ ಚುನಾವಣಾ ಆಯೋಗ ಪಾಲಿಸಬೇಕು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಮುಂದಾಗಬೇಕು, ಓಟುಗಳ್ಳರು ಮತ್ತು ಅಕ್ರಮ ಚುನಾವಣೆಕೋರ ಕಾಂಗ್ರೇಸ್, ಬಿಜೆಪಿ ಮುಂತಾದ ಮನುವಾದಿ ಪಕ್ಷಗಳನ್ನು ತಿರಸ್ಕರಿಸಿ, ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತವಾದಿ “ಭಾರತ ಸಂವಿಧಾನ”ವನ್ನು ಸಂರಕ್ಷಿಸಬೇಕಿದೆ ಎಂದು ಹೇಳಿದರು.
ಬಡತನ ನಿವಾರಣೆಯ ನೆಪದಲ್ಲಿನ ಭ್ರಷ್ಟಾಚಾರಿಗಳು, ಧರ್ಮ-ದೇವರುಗಳ ಹೆಸರಿನ ಕಾಂಗ್ರೇಸ್, ಬಿಜೆಪಿ ರಾಜಕಾರಣ ಮಾಡುತ್ತಿದ್ದು, ಇಂತಹ ಪಕ್ಷಗಳನ್ನು ತಿರಸ್ಕರಿಸಿ “ಭಾರತ ಸಂವಿಧಾನ” ನಿಜ ಪಾಲಕರನ್ನು ಬೆಂಬಲಿಸುವಂತೆ ಹೇಳಿದರು.
ಭಾರತ ಸಂವಿಧಾನದ ಭಾಗ 3ರ ಸಾಮಾಜಿಕ ಪರಿವರ್ತನೆ, ಭಾಗ 4ರ ಆರ್ಥಿಕ ವಿಮೋಚನೆಯೇ ಭಾರತೀಯ ರೈತರು, ಕಾರ್ಮಿಕರು, ದಲಿತ, ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತ ಶೋಷಿತ ಬಹುಜನ ಸಮುದಾಯಗಳ ಸರ್ವ ದಾಸ್ಯವನ್ನು ಕೊನೆಗಾಣಿಸುವ ಅಸ್ತ್ರವಾಗಿದ್ದು,ಇದನ್ನು ಯತಾವತ್ತಾಗಿ ಜಾರಿಮಾಡಲು ಸ್ವತಂತ್ರ ರಾಜಕೀಯ ಅಧಿಕಾರವನ್ನು ಹಿಡಿಯುವತ್ತ ಮುಂದಾಗಬೇಕು ಎಂದು ತಿಳಿಸಿದರು.
ಭಾರತೀಯರಾದ ನಾವೆಲ್ಲರೂ ಭಾರತ ಸಂವಿಧಾನದ ಸದಾಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ಉಸಿರಾಗಿಸಿಕೊಂಡು ಬಹುತ್ವದ “ಪ್ರಬುದ್ಧ ಭಾರತ” ನಿರ್ಮಿಸಲು ಧೀಕ್ಷಾ ಬದ್ಧರಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಮಂಡ್ಯ ಜಿಲ್ಲೆಯ ಹಕ್ಕೊತ್ತಾಯಗಳು
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕೇಂದ್ರಸ್ಥಾನಕ್ಕೆ “ಸೂಪರ್ ಸ್ಪೆಸಾಲಿಟಿ ಆಸ್ಪತ್ರೆ ” ಮಂಜೂರು ಮಾಡಬೇಕು.
ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಸ್ಥಾನದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, “ಸಮುದಾಯ ಆರೋಗ್ಯ ಕೇಂದ್ರ” ಗಳನ್ನಾಗಿ ಪರಿವರ್ತಿಸುವ ಮೂಲಕ ಜಿಲ್ಲೆಯ ಜನತೆಯ ಆರೋಗ್ಯ ಸಂರಕ್ಷಣೆಗೆ ಕ್ರಮ ವಹಿಸಬೇಕು ಎಂದರು.
ಬರಗಾಲ ನಿರ್ವಹಣೆ ಮಾಡಲು ಜಿಲ್ಲೆಯ ಎಲ್ಲಾ ಕೆರೆಗಳನ್ನು ಹೂಳೆತ್ತಿಸಿ ನೀರು ತುಂಬಿಸಬೇಕು. ಕೆರೆ ಸುತ್ತಲೂ ಆರಣ್ಯ ಗಿಡಗಳನ್ನು ನಾಟಿಮಾಡಿಸಿ ಸಂರಕ್ಷಿಸಲು ಅನುದಾನ ನೀಡಬೇಕು.
ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಮೈ ಶುಗರ್ ಕಂಪನಿಯನ್ನು ಖಾಸಗಿಯವರಿಗೆ ವಹಿಸದೆ, ಒಂದೇ ಕಂತಿನಲ್ಲಿ ಆಧುನಿಕರಣಗೊಳಿಸಲು ಅನುದಾನ ಘೋಷಿಸಬೇಕು. ಈ ಮೂಲಕ ಕಬ್ಬು ಅರೆಯಲು ಸಮರ್ಪಕ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಟನ್ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ 5000ರೂಗಳನ್ನು ಸರ್ಕಾರ ಘೋಷಿಸಬೇಕು.
ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಜಿಲ್ಲೆಗಳ ನೀರಾವರಿ ಜೀವನಾಡಿಯಾಗಿರುವ “ಹೇಮಾವತಿ ನದಿ ಕೊಳ್ಳದ ಅಭಿವೃದ್ಧಿ ಪ್ರಾಧಿಕಾರ” ರಚಿಸಿ, ಅನುದಾನ ಬಿಡುಗಡೆ ಮಾಡಿ, ಸಮರ್ಪಕ ನೀರಾವರಿ ಸೌಲಭ್ಯ ನೀಡಬೇಕು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಪಾಂಡವಪುರ, ಮಂಡ್ಯ, ನಾಗಮಂಗಲ, ಮದ್ದೂರು ತಾಲ್ಲೂಕುಗಳಲ್ಲಿ ಹೇಮಾವತಿ ನಾಲಾ ನೀರಾವರಿ ಸೌಲಭ್ಯದಿಂದ ಅರೆ ಖುಷಿ ಬೆಳೆಗೆ ನೀರಾವರಿಗೆ ಆವಕಾಶವಿರುವುದನ್ನು ಸಮರ್ಪಕವಾಗಿ ನಿರ್ವಹಿಸಿ, ಈ ಭಾಗದ ಕೃಷಿ ಅಭಿವೃದ್ಧಿಗೆ ಕ್ರಮವಹಿಸಲು ಸಂಬಂಧಿಸಿದ ಇಲಾಖೆಗೆ ನಿರ್ಧೇಶನ ನೀಡಬೇಕು. ಈ ನಾಲೆಗಳ ಆಧುನೀಕರಣಕ್ಕೆ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೇ, ಕಾವೇರಿ ನೀರು ಸದ್ಬಳಕೆ ಸಂಶೋಧನೆ ಮತ್ತು ತರಬೇತಿ ಕೇಂದ್ರ” ತೆರದು ನೀರು ಬಳಕೆದಾರರಿಗೆ ಆಧುನಿಕ ತಂತ್ರಜ್ಞಾನ ಬಳಸಿ ನೀರು ಬಳಕೆ ಅರಿವು ನೀಡಬೇಕು. “ಕಾವೇರಿಯ ಜೀವ ಜಲ ಉಳಿಸಿ, ಸರ್ವರೂ ಜೀವಮಾನ ಕಾವೇರಿ ಬಳಸಿ” ಎಂಬ ಸಂಕಲ್ಪದೊಂದಿಗೆ, ಕಾವೇರಿ ನದಿಗೆ ವೈಜ್ಞಾನಿಕ ಮತ್ತು ವೈಚಾರಿಕ ಸ್ಪರ್ಶ ನೀಡಿ, ರಾಜ್ಯ ಸರ್ಕಾರದ ಮೌಡ್ಯಾಚರಣೆಯಾದ ಕಾವೇರಿ “ದೀಪಾರತಿ”ಯನ್ನು ಕೈಬಿಟ್ಟು ರಾಜ್ಯ ಸರ್ಕಾರ ಈ ಅನುದಾನವನ್ನೇ… “ಕಾವೇರಿ ನೀರು ಸದ್ಬಳಕೆ ಸಂಶೋಧನೆ ಮತ್ತು ತರಬೇತಿ ಕೇಂದ್ರ” ತೆರಯಲು ಬಳಕೆ ಮಾಡಬೇಕು.
ಮಂಡ್ಯ ವಿಶ್ವ ವಿದ್ಯಾಲಯದಲ್ಲಿ ಮೈಸೂರು ದೊರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ‘ಬಜೆಟ್’ನಲ್ಲಿ ಅನುದಾನ ಘೋಷಿಸಬೇಕು ಎಂದರು.
ಮಂಡ್ಯ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಭೌದ್ಧ ವಿಹಾರ ನಿರ್ಮಾಣಕ್ಕಾಗಿ ತಲಾ 10.00ಎಕರೆ ಭೂಮಿ ನೀಡಿ ಭೌದ್ಧ ವಿಹಾರ ನಿರ್ಮಾಣಕ್ಕೆ ಪ್ರಸ್ತುತ ಬಜೆಟ್ ನಲ್ಲಿ ತಲಾ 10ಕೋಟಿ ಅನುದಾನ ನೀಡಬೇಕು ಎಂದರು.
ವೇದಿಕೆಯಲ್ಲಿ ವಿಭಾಗೀಯ ಸಂಚಾಲಕರಾದ ಅನಿಲ್ ಕುಮಾರ್,ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶರಾವತಿ ಅಶ್ವಥ್, ಜಿಲ್ಲಾಧ್ಯಕ್ಷ ಆನಂದ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾ, ಮುತ್ತು ರಾಜ್, ಥಾಮಸ್ ಬೆಂಜಮಿನ್ ಉಪಸ್ಥಿತರಿದ್ದರು.




