ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶ್ರಮ ವಹಿಸಿ ಕೆಲಸ ಮಾಡಿದ್ದರೂ ನಮ್ಮ ಪಕ್ಷದ ಅಭ್ಯರ್ಥಿ ರವಿಶಂಕರ್ ಸೋತಿದ್ದಾರೆ.
ಸೋಲಿನಿಂದ ನಾವು ಧೃತಿಗೆಡಲ್ಲ.ಈ ಫಲಿತಾಂಶದಿಂದ ಪಾಠ ಕಲಿತು ಮುಂದಿನ ಚುನಾವಣೆ ವೇಳೆಗೆ ಪಕ್ಷವನ್ನು ಸದೃಢವಾಗಿ ಕಟ್ಟುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದ್ದಾರೆ.
ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಿದ್ದರೂ, ಹಳೇ ಮೈಸೂರು ಭಾಗದಲ್ಲಿ ಪಕ್ಷದ ವರ್ಚಸ್ಸು ಹಾಗೂ ಮತ ಗಳಿಕೆ ಪ್ರಮಾಣ ಹೆಚ್ಚಿರುವುದು ಸಾಬೀತಾಗಿದೆ.
ಇದರಿಂದ ಪಕ್ಷ ಸಂಘಟನೆಯ ಉತ್ಸಾಹ ಹೆಚ್ಚಾಗಿದೆ.ಅಲ್ಲದೆ ಬಿಜೆಪಿ ಸಾಮರ್ಥ್ಯ ಏನೆಂಬುದು ವಿಪಕ್ಷಗಳಿಗೆ ಗೊತ್ತಾಗಿದೆ.ಚುನಾವಣೆಯಲ್ಲಿ ಬೆಂಬಲಿಸಿದ ಎಲ್ಲಾ ಪದವೀಧರ ಮತದಾರರಿಗೂ ಹಾಗೂ ಪಕ್ಷದ ನಾಯಕರು, ಮುಖಂಡರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.