ಮಂಡ್ಯ ಜಿಲ್ಲೆ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೆಳೆ ರಕ್ಷಣೆ, ಜನ ಜಾನುವಾರುಗಳ ರಕ್ಷಣೆಗಾಗಿ ಕೂಡಲೇ ಒಂದು ಕಟ್ಟು ನೀರನ್ನು ನಾಲೆಗಳಿಗೆ ಹರಿಸಬೇಕೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಆಗ್ರಹಿಸಿದರು.
ಮಂಡ್ಯನಗರದಲ್ಲಿ ಕಾವೇರಿ ಗಾಗಿ ಏಳನೇ ಸೋಮವಾರದ ಚಳವಳಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರೈತರ ಹಿತ ಕಾಪಾಡುವುದು ನಮ್ಮ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಹೋದರು ಆದರೆ ಈಗ ಪರಿಸ್ಥಿತಿ ಏನಾಗಿದೆ ? ನಾಲೆ ಮತ್ತು ಕೆರೆಕಟ್ಟೆಗಳಲ್ಲಿ ನೀರಿಲ್ಲದಂತಾಗಿದೆ, ಬೆಳೆ ರಣ ಬಿಸಿಲಿನಲ್ಲಿ ಒಣಗುತ್ತಿದೆ, ಜನ – ಜಾನುವಾರಗಳು ನೀರು ಇಲ್ಲದೆ ದಾಹ ಇಂಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ತಕ್ಷಣ ಕೆ ಆರ್ ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿಲ್ಲ, ಹೋರಾಟಗಾರರು ಪ್ರಚಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಕಾವೇರಿ ಚಳವಳಿ ಬಗ್ಗೆ ಹಗುರವಾಗಿ ಮಾತನಾಡಿರುವ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಿಜವಾಗಲೂ ಜನ ಪ್ರತಿನಿಧಿಯಾಗಿದ್ದರೆ ಬಿಳಿಗುಂಡ್ಲು ಜಲ ಮಾಪನದ ಅಂಕಿ ಅಂಶದ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೂಲಕ ನೀರು ಬಿಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್,ಮುದ್ದೇಗೌಡ, ಜವರಯ್ಯ, ಸುಜಾತ ಸಿದ್ದಯ್ಯ, ಮಲ್ಲೇಶ್, ಪಣಕನಹಳ್ಳಿ ನಾಗೇಂದ್ರ, ತಮ್ಮಣ್ಣ ಗೌಡ, ಈ.ಬಸವರಾಜ್ ಇತರರಿದ್ದರು.




