Friday, October 18, 2024

ಪ್ರಾಯೋಗಿಕ ಆವೃತ್ತಿ

ನೈಸ್ ಕಂಪನಿ ಪರ ಉಪಮುಖ್ಯಮಂತ್ರಿ ವಕಾಲತ್ತು; ಕರ್ನಾಟಕ ಪ್ರಾಂತ ರೈತ ಸಂಘ ಖಂಡನೆ

ಕಾನೂನು ಬಾಹಿರ ಕ್ರಮ, ದೌರ್ಜನ್ಯ, ದಬ್ಬಾಳಿಕೆ ಭ್ರಷ್ಟಾಚಾರ ಮೂಲಕ ರೈತರ ಭೂ ಸ್ವಾಧೀನ ಮುಂತಾದ ಹತ್ತು ಹಲವು ಅಕ್ರಮಗಳಿಗಾಗಿ ಸುಪ್ರೀಂ ಕೋರ್ಟ್ ಹಾಗೂ ಸದನ ಸಮಿತಿಯಿಂದ ಛೀಮಾರಿಗೆ ಒಳಗಾಗಿರುವ ನೈಸ್ ಕಂಪನಿ ಪರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಕಾಲತ್ತು ವಹಿಸಿರುವುದು ರೈತ ದ್ರೋಹ ಹಾಗೂ ಅಕ್ರಮ ಕೂಟದ ಬಹಿರಂಗ ಪ್ರದರ್ಶನ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಬೆಂಗಳೂರು ಮೈಸೂರು ಮಧ್ಯೆ ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ನೈಸ್ ಯೋಜನೆ ಅಪ್ರಸ್ತುತವಾಗಿದೆ. ಯೋಜನೆ ಕಾರ್ಯಗತ ಆಗದೇ ಇದ್ದರೂ ಮೂವತ್ತು ವರ್ಷಗಳ ಹಿಂದಿನ ಕೆಐಎಡಿಬಿ ಭೂ ಸ್ವಾಧೀನ ವನ್ನು ಉಳಿಸಿಕೊಂಡು ಬರುತ್ತಿರುವುದು ಅನ್ಯಾಯದ ಪರಮಾವಧಿಯಾಗಿದೆ. ನೈಸ್ ಕಂಪನಿಯ ಭೂ ಸ್ವಾಧೀನ ದಿಂದ ಈ ಯೋಜನೆ ವ್ಯಾಪ್ತಿಯ ರೈತರು ಅಪಾರಯಾತನೆ ಮತ್ತು ಸಂಕಟವನ್ನು ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ  ಬಯ್ಯಾರೆಡ್ಡಿ, ಕಾರ್ಯದರ್ಶಿ ಟಿ.ಯಶವಂತ್ ಪ್ರಕಟಣೆಯಲ್ಲಿ ದೂರಿದ್ದಾರೆ.

ಅನ್ಯಾಯದ ಭೂ ಕಬಳಿಕೆ ವಿರುದ್ಧ ರಕ್ಷಣೆಗಾಗಿ ಕೋರ್ಟ್ ಕಛೇರಿಗಳಿಗೆ ಅಲೆದು ಲಕ್ಷಾಂತರ ರೂ ಗಳನ್ನು ಕಳೆದುಕೊಂಡಿದ್ದಾರೆ. ಇಂತಹ ರೈತರ ನೆರವಿಗೆ ನ್ಯಾಯಯುತವಾಗಿ ನಿಲ್ಲಬೇಕಾದ ಸರ್ಕಾರದ ಉಪ ಮುಖ್ಯಮಂತ್ರಿಗಳು ಕಪ್ಪು ಪಟ್ಟಿಯಲ್ಲಿ ಇರಬೇಕಾದ ಹಗರಣ -ಭ್ರಷ್ಟಾಚಾರದ ಕುಖ್ಯಾತಿಗೆ ಒಳಗಾದ ನೈಸ್ ಕಂಪನಿ ಪರವಾಗಿ ವಕಾಲತ್ತು ವಹಿಸುವುದು ಬೇಜವಾಬ್ದಾರಿ ಮತ್ತು ಅವರ ಹುದ್ದೆಗೆ ಯೋಗ್ಯವಲ್ಲದ್ದು ಮಾತ್ರವಲ್ಲ ಸರ್ಕಾರದ ಕಾರ್ಪೊರೇಟ್ ಲೂಟಿ ಪರ ನೀತಿಗಳಿಗಿಂತ ತಾನು ಮತ್ತಷ್ಟು ಮುಂದೆ ಇದ್ದೇನೆ ಎಂದು ತನ್ನನ್ನು ಬಿಂಬಿಸಿಕೊಳ್ಳುವ ಹೇಳಿಕೆಯೂ ಕೂಡ ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ತಮ್ಮ ಮಾತನ್ನು ಕೂಡಲೇ ವಾಪಸ್ಸು ಪಡೆದು ರೈತ ಸಮುದಾಯದ ಕ್ಷಮೆ ಕೋರಬೇಕು. ಟಿ ಬಿ ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ಶಿಪಾರಸ್ಸಗಳನ್ನು ಜಾರಿ ಮಾಡಬೇಕು, ಬಿಎಂಐಸಿ ಯೋಜನೆ ರದ್ದುಪಡಿಸಿ ನೈಸ್ ಕಂಪನಿಯ ಹಗರಣ ,ಭ್ರಷ್ಟಾಚಾರ, ಅಕ್ರಮಗಳನ್ನು ಶಿಕ್ಷೆಗೆ ಒಳಪಡಿಸಬೇಕು, ಹೆಚ್ಚುವರಿ ಭೂಮಿಯನ್ನು ನೈಸ್ ಕಂಪನಿಯಿಂದ ವಾಪಸ್ಸು ಪಡೆಯುವ ಸುಪ್ರೀಂ ಕೋರ್ಟ್ ತೀರ್ಪು ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!