ಇಂದು ಪತ್ರಿಕೋದ್ಯಮಕ್ಕೆ ರಾಜಕಾರಣಿಗಳು, ಉದ್ಯಮಿಗಳು ಪ್ರವೇಶಿಸಿದ್ದು, ಪ್ರಸ್ತುತ ಮಾಧ್ಯಮಗಳು ಜನರ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದು ಹಿರಿಯ ಪತ್ರಕರ್ತ, ಅಂಕಣಕಾರ ದಿನೇಶ್ ಅಮೀನ್ ಮಟ್ಟು ವಿಷಾದ ವ್ಯಕ್ತಪಡಿಸಿದರು.
ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಕೌಡ್ಲೆ ಚನ್ನಪ್ಪ ಸಂಪಾದಕತ್ವದ ದೇಶಹಿತ ಪತ್ರಿಕೆಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ನಡೆದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೆ ಪತ್ರಿಕೋದ್ಯಮಕ್ಕೆ ಮೌಲ್ಯವಿತ್ತು. ಗಾಂಧಿ, ಅಂಬೇಡ್ಕರ್ ಪತ್ರಿಕೆಗೆ ಬರೆದರೆ ಅದನ್ನು ಜನರು ನಿಜವೆಂದು ನಂಬುತ್ತಿದ್ದರು ಕರ್ನಾಟಕದಲ್ಲಿ ಖಾದ್ರಿ ಶಾಮಣ್ಣ, ಟಿಎಸ್ಆರ್, ವಡ್ಡರ್ಸೆ ರಘುರಾಮ ಶೆಟ್ಟಿ ಯವರು ಬರೆದರೆ ಜನರು ನಿಜವೆಂದು ನಂಬುತ್ತಿದ್ದರು. ಆದರೆ ಇಂದು ಮಾಧ್ಯಮಗಳಲ್ಲಿ ಬರುವ ವಿಚಾರವನ್ನು ಜನರು ನಂಬುತ್ತಿಲ್ಲ. ಇಂದಿನ ಮಾಧ್ಯಮಗಳು ಜನರ ವಿಶ್ವಾಸಾರ್ಹತೆ ಕಳೆದುಕೊಂಡಿವೆ ಎಂದರು.
ಇಂದು ಬಹಳಷ್ಟು ಮಾಧ್ಯಮಗಳು ರಾಜಕಾರಣಿಗಳು ಹಾಗೂ ದೊಡ್ಡ ಉದ್ಯಮಿಗಳ ಕೈಯಲ್ಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಧ್ಯಮಗಳು ಜನರಿಗೆ ಸುಳ್ಳು ಹರಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ. ಆರ್ಥಿಕ ಹಿನ್ನೆಲೆಯಲ್ಲಿ ಈ ಗ್ಯಾರಂಟಿ ಯೋಜನೆಗಳು ಸರಿಯೇ? ತಪ್ಪೇ? ಇದಕ್ಕೆ ಖರದಚಾಗುವ 52 ಸಾವಿರ ಕೋಟಿ ಹಣ ಎಲ್ಲಿಂದ ತರುತ್ತಾರೆ ಎಂದೆಲ್ಲಾ ಮಾಧ್ಯಮಗಳು ಚರ್ಚೆ ಮಾಡಬೇಕಿತ್ತು. ಆದರೆ ಬಹುತೇಕ ಮಾಧ್ಯಮಗಳು ಈ ಯೋಜನೆಯಿಂದ ಅತ್ತೆ- ಸೊಸೆಯರ ಮಧ್ಯೆ ಜಗಳವಾಗುತ್ತಿದೆ, ನಾಳೆಯಿಂದ ಉಚಿತ ಬಸ್ ಸೌಲಭ್ಯವಿಲ್ಲ, ಉಚಿತ ಬಸ್ ಪ್ರಯಾಣದಿಂದ ಬಸ್ ಬಾಗಿಲು ಕಿತ್ತು ಬಂತು ಎಂದೆಲ್ಲ ಸುಳ್ಳು ಸುದ್ದಿ ಹರಡುತ್ತಿವೆ. ಇದು ನಿಜವಾದ ಪತ್ರಿಕೋದ್ಯಮ ಅಲ್ಲ ಎಂದರು.
ಇಂದು ರಾಜ್ಯಮಟ್ಟದ ಪತ್ರಿಕೆಗಳನ್ನು ಆರು-ಏಳು ರುಪಾಯಿಗಳಿಗೆ ಕೊಡುತ್ತಿದ್ದಾರೆ. ಆದರೆ ಇಷ್ಟು ಹಣದಲ್ಲಿ ಒಂದು ಪತ್ರಿಕೆಯನ್ನು ಪ್ರಿಂಟ್ ಹಾಕಿಸಲು ಸಾಧ್ಯವಿಲ್ಲ.25 ರಿಂದ 30 ರೂ. ಬೇಕು. ಇದಕ್ಕಾಗಿ ಪತ್ರಿಕೆಗಳು ಜಾಹೀರಾತು ಮೊರೆ ಹೋಗಿವೆ.ಇಂದು ಪತ್ರಿಕೆಗಳಿಗೆ ಸುದ್ದಿಗಿಂತ ಜಾಹಿರಾತುಗಳ ಮುಖ್ಯ. ಐಶ್ವರ್ಯ ರೈ ಮಗು ಹೆತ್ತರೆ ಮೊದಲ ಪುಟದಲ್ಲಿ ಸುದ್ದಿ ಹಾಕುತ್ತಾರೆ. ಆದರೆ ಪೋಷಕಾಂಶದ ಕೊರತೆಯಿಂದ ಮಗುವೊಂದು ಸತ್ತರೆ ಆ ಸುದ್ದಿಯನ್ನು ಒಳಗಿನ ಪುಟದಲ್ಲಿ ಒಂದು ಪ್ಯಾರಾ ಹಾಕುತ್ತಾರೆ. ಇದು ಇಂದಿನ ಮಾಧ್ಯಮಗಳ ದುಸ್ಥಿತಿ ಎಂದರು.

ಪಾಕಿಸ್ತಾನ, ಶ್ರೀಲಂಕಾ ದಂತಹ ರಾಷ್ಟ್ರಗಳಲ್ಲಿ 10 ರೂ. ಗಳಿಗಿಂತ ಕಡಿಮೆಗೆ ಪತ್ರಿಕೆ ಸಿಗೋದಿಲ್ಲ. ಆದರೆ ನಮ್ಮ ದೇಶದಲ್ಲಿ ಪತ್ರಿಕೆ ಮಧ್ಯೆ ದರ ಸಮರ ಶುರುವಾಗಿತ್ತು.ಈ ದರ ಸಮರದಿಂದ ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳು ಮುಚ್ಚುವ ಪರಿಸ್ಥಿತಿ ಉಂಟಾಗುತ್ತದೆ. ಪ್ರಾಮಾಣಿಕತೆ, ವೃತ್ತಿ ಬಗ್ಗೆ ನಿಷ್ಠೆ, ಬರೆಯುವ ಸಾಮರ್ಥ್ಯ ಇದ್ದರೆ ಪತ್ರಿಕೋದ್ಯಮಕ್ಕೆ ಬರಬಹುದಿತ್ತು. ಆದರೆ ಇಂದು ಪತ್ರಿಕೆಗೆ ಎಷ್ಟು ಜಾಹಿರಾತು ತರಲು ಈತನಿಂದ ಸಾಧ್ಯ, ಎಷ್ಟು ರಾಜಕಾರಣಿಗಳು ಈತನಿಗೆ ಪರಿಚಯವಿದ್ದಾರೆ ಎಂಬ ಹಿನ್ನಲೆ ನೋಡಿ ಪತ್ರಿಕೋದ್ಯಮದಲ್ಲಿ ಅವಕಾಶ ನೀಡಲಾಗುತ್ತಿದೆ. ಬಹಳಷ್ಟು ಸಂಪಾದಕರಿಗೆ ಬರೆಯುವುದೇ ಗೊತ್ತಿಲ್ಲ. ಇದರಿಂದಾಗಿ ಇಂದು ಮಾಧ್ಯಮಗಳ ಮೇಲೆ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತಾಗಿದೆ ಎಂದರು.
ಒಂದು ಕಾಲದಲ್ಲಿ ಸರ್ಕಾರ ಯಾವ ವಿಷಯವನ್ನು ಬಚ್ಚಿಟ್ಟುಕೊಳ್ಳುತ್ತದೋ ಅದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿತ್ತು. ಆದರೆ ಇಂದು ಆ ರೀತಿ ಆಗುತ್ತಿಲ್ಲ ಸರ್ಕಾರ ಬಚ್ಚಿಟ್ಟುಕೊಳ್ಳುವುದನ್ನು ತೆಗೆದು ಸುದ್ದಿ ಮಾಡುವುದು ನಿಜವಾದ ಪತ್ರಿಕೋದ್ಯಮ. ಇಂದು ಒಂದು ಸುದ್ದಿಯನ್ನು ಓದಿದಾಗ ಇದು ಜಾಹೀರಾತೋ ಇಲ್ಲಾ, ಸುದ್ದಿಯೋ ಎಂಬುದು ಗೊತ್ತಾಗುತ್ತದೆ. ಇಂದು ಕಾಸಿಗಾಗಿ ಸುದ್ದಿಗಳು ಮಾಡುವುದು ನಡೆಯುತ್ತಿದೆ. ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಮಾತುಗಳಿವೆ. ಅದರಂತೆ ಪತ್ರಿಕಾ ರಂಗದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಇಂದು ಶ್ರೀಲಂಕಾ, ಪಾಕಿಸ್ತಾನಕ್ಕಿಂತ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ಸ್ವತಂತ್ರವಾಗಿ ಮಾತನಾಡಿದರೆ ಇಡಿ,ಐಟಿ ದಾಳಿ ಖಚಿತವಾಗಿದ್ದು, ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರು.
ಕೃಷಿ ಸಚಿವ ಎಮ್. ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಗಣಿಗ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ,
ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ದೇಶ ಹಿತ ಪತ್ರಿಕೆಯ ಸಂಪಾದಕ ಕೌಡ್ಲೆ ಚನ್ನಪ್ಪ, ಪತ್ರಕರ್ತರಾದ ದ.ಕೋ.ಹಳ್ಳಿ ಚಂದ್ರಶೇಖರ್,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್,ವಾಗೀಶ್ ಚಂದ್ರ ಗುರು ಮತ್ತಿತರರಿದ್ದರು.




