Friday, October 25, 2024

ಪ್ರಾಯೋಗಿಕ ಆವೃತ್ತಿ

ಯಡಿಯೂರಪ್ಪ- ಮುನಿರತ್ನ ವಿಚಾರದಲ್ಲಿ ಮೌನ ; ಬಿಜೆಪಿ ಈಗ ‘ಬಲಾತ್ಕಾರಿ ಜನತಾ ಪಾರ್ಟಿ’ ಎಂದ ದಿನೇಶ್ ಗುಂಡೂರಾವ್

ದೇಶದ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ವಿರೋಧಿಸಿ ಬೀದಿಯಲ್ಲಿ ಹೋರಾಟ ಮಾಡಿದರು. ಈ ಪ್ರಕರಣದಲ್ಲೂ ಬಿಜೆಪಿ ನಾಯಕರು ಸಹಾನುಭೂತಿ ತೋರಲಿಲ್ಲ. ಆರೋಪಿ ಬ್ರಿಜ್ ಭೂಷಣ್ ಸಿಂಗ್ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಯಡಿಯೂರಪ್ಪ ಮತ್ತು ಮುನಿರತ್ನ ವಿಚಾರದಲ್ಲಿ ಬಿಜೆಪಿಯವರು ಮೌನವಾಗಿದ್ದಾರೆ. ಈ ನಿಟ್ಟಿನಲ್ಲೇ ಬಿಜೆಪಿಯನ್ನು ಬಲತ್ಕಾರಿ ಜನತಾ ಪಕ್ಷ ಎಂದು ಕರೆಯುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಮಹಿಳೆಯರ ಬಗ್ಗೆ ಬಿಜೆಪಿಗೆ ಕಾಳಜಿ ಇದ್ದರೆ ಬಿ.ಎಸ್‌ ಯಡಿಯೂರಪ್ಪ ಅವರನ್ನು ಕೂಡಲೇ ಸಂಸದೀಯ ಮಂಡಳಿ ಸದಸ್ಯ ಸ್ಥಾನದಿಂದ ತೆಗೆದುಹಾಕಬೇಕು. ಜಾನಿ ಮಾಸ್ಟರ್ ಪ್ರಕರಣದಲ್ಲಿನ ನಿಲುವು, ಯಡಿಯೂರಪ್ಪ ಪ್ರಕರಣದಲ್ಲಿ ಯಾಕಿಲ್ಲ’ ಎಂದು ಪ್ರಶ್ನಿಸಿದರು.

“ಪೋಕೋ ಕಾಯ್ದೆಯಡಿ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೃತ್ಯ ನಿರ್ದೇಶಕರಾದ ಜಾನಿ ಮಾಸ್ಟರ್ ಅವರಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಆದರೆ ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ಯಾಕೆ ಮೌನವಾಗಿದೆ” ಎಂದು ಕೇಳಿದರು.

“>

 

“ಬಿಜೆಪಿ ಈ ವಿಚಾರದಲ್ಲಿ ಯಾಕೆ ದ್ವಂದ್ವ ನಿಲುವು ತಾಳುತ್ತಿದೆ? ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪೋಕೋ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಯಾಗಿ ಜುಲೈ ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈಗ ವಿಚಾರಣೆ ನಡೆಯಬೇಕಾಗಿದೆ. ಸಿಐಡಿಯವರು ಯಡಿಯೂರಪ್ಪ ಹಾಗೂ ಮೂವರು ಸಹಚರರ ವಿರುದ್ಧ 700 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು ಇವರು ಸಾಕ್ಷಿನಾಶ, ಪ್ರಕರಣ ಮುಚ್ಚಿಹಾಕುವ ವಿಚಾರ, ಸಂತ್ರಸ್ತ ಬಾಲಕಿ ಹೇಳಿಕೆಗಳನ್ನು ಸೇರಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದರು.

“ಸಹಾಯಕ್ಕೆಂದು ಬಂದ ಬಾಲಕಿ ಮೇಲೆ ಇಂತಹ ಕೆಟ್ಟ ಅನುಭವ ಆಗಿರುವ ಪ್ರಕರಣವನ್ನು ಬಹಳ ಹಗುರವಾಗಿ ಪರಿಗಣಿಸಲಾಗಿರುವುದು ದುರ್ದೈವ ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ. ಸಿಐಡಿ ತನಿಖೆಯಾಗಿ ಆರೋಪಪಟ್ಟಿಯಲ್ಲಿ ಅನೇಕ ಮಾಹಿತಿ ಇದ್ದರೂ ಇದನ್ನು ಪ್ರಶ್ನೆ ಮಾಡಬಾರದೇ? ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವು ತೋರುತ್ತಿಲ್ಲ ಯಾಕೆ? ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಯಾಕೆ ಉಳಿಸಿಕೊಂಡಿದ್ದಾರೆ? ಕನಿಷ್ಠಪಕ್ಷ ಬಿಜೆಪಿಯು ಈ ಪ್ರಕರಣದ ವಿಚಾರಣೆ ಮುಗಿಯುವವರೆಗಾದರೂ ಪಕ್ಷದ ಎಲ್ಲ ಹುದ್ದೆಗಳಿಂದ ಅವರನ್ನು ತೆಗೆದುಹಾಕುವ ನಿರ್ಧಾರ ಯಾಕೆ ಮಾಡುತ್ತಿಲ್ಲ? ಮಹಿಳೆಯರ ಪರವಾಗಿ ಅವರ ನಿಲುವೇನು” ಎಂದು ಪ್ರಶ್ನಿಸಿದ್ದಾರೆ.

“ಯಾವ ಒತ್ತಡಕ್ಕೆ ಅವರು ಮಣಿದಿದ್ದಾರೆ? ಬಿಜೆಪಿ ನಾಯಕರ ಹೇಳಿಕೆ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷರ ಬ್ಲಾಕ್‌ಮೇಲ್‌ನಿಂದಾಗಿ ಯಡಿಯೂರಪ್ಪ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ” ಎಂದು ಆರೋಪಿಸಿದರು.

“ಪೋಕೋ ಪ್ರಕರಣ ಹಾಗೂ ಈ ಕಾಯ್ದೆ ಮಾನದಂಡಗಳು ಬಹಳ ಗಂಭೀರವಾಗಿವೆ. ಈ ಆರೋಪ ಸಾಬೀತಾದರೆ ಗಂಭೀರವಾದ ಶಿಕ್ಷೆ ಒಳಗಾಗುವ ಸಾಧ್ಯತೆ ಇದೆ. ಬಿಜೆಪಿಯ ಅನೇಕ ನಾಯಕರ ಮೇಲೆ ಇಂತಹ ಆರೋಪಗಳಿವೆ. ಶಾಸಕ ಮುನಿರತ್ನ ಅವರ ಪ್ರಕರಣದಲ್ಲಿ ಬಿಜೆಪಿ ಸ್ಪಷ್ಟ ನಿಲುವು ತಾಳಿಲ್ಲ. ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿಚಾರದಲ್ಲೂ ಬಿಜೆಪಿ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಗಳನ್ನು ಬಿಜೆಪಿಯವರು ರಾಜಕೀಯವಾಗಿ ನೋಡುತ್ತಿದ್ದಾರೆ” ಎಂದರು.

ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ರಮೇಶ್‌ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಕೆಪಿಸಿಸಿ ವಕ್ತಾರರಾದ ನಟರಾಜ್ ಗೌಡ ಅವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!