ಮೂರನೇ ಬಾರಿಗೆ ಹಣಕಾಸು ಇಲಾಖೆಯ ಮುಂದಿರುವ ನೇರಪಾವತಿ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಸಹಿ ಹಾಕುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಗರಪಾಲಿಕೆ, ಪುರಸಭೆ,ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ಜನವರಿ ೩೦ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ ಎಂದು ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ರವರು ತಿಳಿಸಿದ್ದಾರೆ.
ಮಂಡ್ಯ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಯಾವುದೇ ಮೀನಮೇಷ ಎಣಿಸದೆ ನೇರಪಾವತಿ ಕಡತಕ್ಕೆ ಅಂಕಿತ ಹಾಕಬೇಕೆಂದು ಇಲ್ಲದಿದ್ದರೆ ಅದು ಸ್ವತಃ ಮುಖ್ಯಮಂತ್ರಿಗಳೇ ಹೊರಗುತ್ತಿಗೆ ನೌಕರರಿಗೆ ಎಸಗಿದ ದ್ರೋಹವಾಗುತ್ತದೆ, ಆದ್ದರಿಂದ ಮುಖ್ಯಮಂತ್ರಿಗಳು ನೇರಪಾವತಿ ಕಡತಕ್ಕೆ ಸಹಿ ಹಾಕಬೇಕು ಆ ಮೂಲಕ ಹೊರಗುತ್ತಿಗೆ ನೌಕರರ ಬಹು ವರ್ಷಗಳ ಬೇಡಿಕೆ ಈಡೇರಿಸಬೇಕು. ಮುಂದಿನ ಬಜೆಟ್ ನಲ್ಲಿ ಈ ಸಂಬಂದ ಘೋಷಣೆ ಹೊರಡಬೇಕಿದೆ.ಈ ಸಂಬಂದ ರಾಜ್ಯ ಕಾಂಗ್ರೆಸ್ ಸರಕಾರ ಸಕಾರಾತ್ಮಕ ನಿರ್ಧಾರ ಪ್ರಕಟಿಸುವ ವಿಶ್ವಾಸ ನಮಗಿದೆ.ಒಂದು ವೇಳೆ ರಾಜ್ಯ ಸರ್ಕಾರ ವ್ಯತಿರಿಕ್ತ ತೀರ್ಮಾನ ಕೈಗೊಂಡಲ್ಲಿ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಕುರಿತು ಪರಾಮರ್ಶೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್ ನಾಗರಾಜು ಮಾತನಾಡಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಲ್ಲಿ ಕೆಲವರನ್ನು ಈಗಾಗಲೇ ನೇರಪಾವತಿಗೆ ತರಲಾಗಿದೆ, ಆದರೆ ಪೌರಕಾರ್ಮಿಕರೊಟ್ಟಿಗೆ ಸ್ವಚ್ಛತೆಯಲ್ಲಿ ಭಾಗಿಯಾಗಿರುವ ಕಸದ ವಾಹನದ ಚಾಲಕರು ಹಾಗೂ ಲೋಡರ್ಸ್, ಕ್ಲೀನರ್ಸ್,ನೀರು ಸರಬರಾಜು ಸಹಾಯಕರು ಸೇರಿದಂತೆ ರಾಜ್ಯಾದ್ಯಂತ ಇರುವ ಎಲ್ಲಾ ಹೊರಗುತ್ತಿಗೆ ನೌಕರರಿಗೂ ನೇರ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು ಈಗಾಗಲೇ ನೇರಪಾವತಿಯಡಿ ಇರುವವರನ್ನು ಖಾಯಂಗೊಳಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ನೌಕರರು ಮತ್ತು ವಾಹನಗಳ ಸಂಖ್ಯೆಗೆ ಅನುಗುಣವಾಗಿ ಚಾಲಕರ ನೇಮಕಾತಿಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ ಅವರು ಈ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ಹೊರಗುತ್ತಿಗೆ ನೌಕರರು ಭಾಗವಹಿಸುವಂತೆ ಕೋರಿದರು.
ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದಎಸ್ ಕೆ ರಾಜೂಗೌಡ ರವರು ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳು ನೇರಪಾವತಿ ಕಡತಕ್ಕೆ ಸಹಿ ಮಾಡುವ ಮೂಲಕ ಹೊರಗುತ್ತಿಗೆ ನೌಕರರ ಬಹು ವರ್ಷಗಳ ಬೇಡಿಕೆ ಈಡೇರಿಸಬೇಕು ಮತ್ತು ನೇರ ಪಾವತಿ ಮಾದರಿಯನ್ನು ರಾಜ್ಯಾದ್ಯಂತ ಇರುವ ಎಲ್ಲಾ ಇಲಾಖೆಗಳು ಮತ್ತು ನಿಗಮ , ಮಂಡಳಿಯ ನೌಕರರಿಗೂ ಜಾರಿ ಮಾಡಿ ಆ ಮೂಲಕ ರಾಜ್ಯಾದ್ಯಂತ ಹೊರಗುತ್ತಿಗೆ ಪದ್ಧತಿಗೆ ಅಂತ್ಯ ಹಾಡಬೇಕಿದೆ.ಇದರಿಂದ ಸರಕಾರಕ್ಕೆ ನೂರಾರು ಕೋಟಿ ಜಿಎಸ್ ಟಿ ಹಾಗೂ ಏಜೆನ್ಸಿಗಳಿಗೆ ನೀಡುವ ಸೇವಾಶುಲ್ಕ ಸರಕಾರಕ್ಕೆ ಉಳಿತಾಯವಾಗುವ ಜತೆಗೆ ಹೊರಗುತ್ತಿಗೆ ನೌಕರರ ದಕ್ಷತೆಯು ಹೆಚ್ಚಲಿದೆ.ಈ ಹಿನ್ನೆಲೆಯಲ್ಲಿ ಜನವರಿ ೩೦ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನಾ ಧರಣಿಗೆ ರಾಜ್ಯಾದ್ಯಂತ ಇರುವ ಹೊರಗುತ್ತಿಗೆ ನೌಕರರು ಭಾಗವಹಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಬೇಕು ಆ ಮೂಲಕ ನೇರ ಪಾವತಿ ವ್ಯವಸ್ಥೆಯ ಜಾರಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮಿಮ್ಸ್ ಹೊರಗುತ್ತಿಗೆ ನೌಕರರ ಸಂಘದ ಮಹಿಳಾ ಘಟಕದ ರಾಜ್ಯ ಸಂಚಾಲಕಿ ವೆಂಕಟಲಕ್ಷ್ಮಮ್ಮ, ಖಜಾಂಚಿ ಚಿನ್ನರಾಜು, ಪುನೀತ್ ಹಾಜರಿದ್ದರು.




