Thursday, September 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಶೀಘ್ರದಲ್ಲೇ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ: ರವಿಕುಮಾರ್

ಪೌರ ಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಸದಾ ಸಿದ್ದವಿದ್ದು, ಶೀಘ್ರದಲ್ಲೇ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಮಂಡ್ಯ ಶಾಸಕ ಪಿ ರವಿಕುಮಾರ್ ತಿಳಿಸಿದರು.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಹಾಗೂ ಶ್ರಮಜೀವಿ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹಲವು ದಿನಗಳ ಬೇಡಿಕೆಯಾದ ಪೌರಕಾರ್ಮಿಕರ ನೇರ ವೇತನ ಪಾವತಿ ಸಂಬಂಧ ಕಡತ ಈಗಾಗಲೇ ಸರ್ಕಾರದ ಮುಂದಿದ್ದು, ಶೀಘ್ರದಲ್ಲೆ ಈ ಸಮಸ್ಯೆಗೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರಿಲ್ಲದೇ ಹೋದರೆ ನಗರವನ್ನು ಸ್ವಚ್ಛತೆಯಿಂದಿಡಲು ಸಾಧ್ಯವಿಲ್ಲ. ಕೊರೊನಾ ಸಂದರ್ಭದಲ್ಲಿ ಪೌರ ಕಾರ್ಮಿಕರು ಮಾಡಿದ ಸೇವೆಯನ್ನು ಇಡೀ ದೇಶ ನೋಡಿದೆ. ಪೌರ ಕಾರ್ಮಿಕರ ಸೇವೆ ಶ್ಲಾಘನೀಯವಾದುದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸರ್ಕಾರಗಳು ನಿಮ್ಮ ಸೇವೆ ಗುರುತಿಸಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

5000 ಮನೆಗಳ ನಿರ್ಮಾಣಕ್ಕೆ ಗುರಿ: ಸೂರು ಇಲ್ಲದೆ ಇರುವವರಿಗೆ ಮಂಡ್ಯದಲ್ಲಿ 5000 ಮನೆಗಳ ನಿರ್ಮಾಣ ಮಾಡಲು ಗುರಿ ಹೊಂದಲಾಗಿದ್ದು, ಈಗಾಗಲೇ 600 ಮನೆಗಳನ್ನು ನಿರ್ಮಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಮಂಡ್ಯ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಅಥವಾ ಖಾಸಗಿ ಜಾಗ ಖರೀದಿಸಿ ಉಳಿದ ೪೪೦೦ ಮನೆಗಳನ್ನು ಹಂತ ಹಂತವಾಗಿ ನಿರ್ಮಿಸಿ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಹಕ್ಕುಪತ್ರ ವಿತರಣೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು. ಈಗಾಗಲೇ ಹಾಲಹಳ್ಳಿ ಸ್ಲಂ ನಿವಾಸಿಗಳಿಗೆ 700 ಮಂದಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. 15 ದಿನದೊಳಗೆ ನಗರದ ಆರ್.ಟಿ.ಒ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು.

ಮೂರುವರೇ ವರ್ಷದಲ್ಲಿ ಯಾರೊಬ್ಬರೂ ಹಕ್ಕುಪತ್ರದಿಂದ ವಂಚಿತರಾಗಬಾರದು ಆ ನಿಟ್ಟಿನಲ್ಲಿ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಲಂ ನಿವಾಸಿಗಳಿಗೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ 203:ಮನೆಗಳ ಕಾಮಗಾರಿ ಶೇ.10 ರಷ್ಟು ಮುಗಿದಿದ್ದು, ಉಳಿದ ಶೇ.10 ರಷ್ಟು ಕಾಮಗಾರಿ ಪೂರ್ಣಗೊಳ್ಳಲು ಫಲಾನುಭವಿಗಳು ಸ್ಲಂ ಬೋರ್ಡ್ಗೆ 47,000 ಹಣ ಪಾವತಿ ಮಾಡಬೇಕು ಎಂದರು.

ಒಂದು ದಿನದ ಪ್ರವಾಸ ಭಾಗ್ಯ ನಗರ ಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ 250 ಮಂದಿಗೆ ನನ್ನ ಸ್ವಂತ ಖರ್ಚಿನಲ್ಲಿ ಮೂರು ಹಂತಗಳಲ್ಲಿ ಒಂದು ದಿನದ ಪ್ರವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿರುವ ಗಣ್ಯರನ್ನು ಗೌರವಿಸಲಾಯಿತು. ತದನಂತರ ಶ್ರಮಜೀವಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜೊತೆಗೆ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಜಾಗೃತಿ ಜಾಥಾ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆಯಿಂದ ವಿವಿ ರಸ್ತೆ, ಆರ್.ಪಿ. ರಸ್ತೆ ಮೂಲಕ ಅಂಬೇಡ್ಕರ್ ಭವನದವರೆಗೂ ಪೂಜಾ ಕುಣಿತ, ನಗಾರಿ, ಡೊಳ್ಳುಕುಣಿತದೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ನಗರಸಭೆ ಅಧ್ಯಕ್ಷ ಪ್ರಕಾಶ್ (ನಾಗೇಶ್) ಜಾಥಾಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಡ್ಯ ನಗರಸಭೆಯ ಉಪಾಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ ಎಂ ಎಸ್ ಮಂಜು, ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ ಬಿ ನಾಗಣ್ಣಗೌಡ, ನಗರಸಭೆ ಆಯುಕ್ತ ಕೃಷ್ಣಕುಮಾರ್, ನಗರಸಭೆ ಎಂಜಿನಿಯರ್‌ಗಳಾದ ರುದ್ರೇಗೌಡ, ನಗರಸಭೆ ಸದಸ್ಯರಾದ ಮಂಜುಳಾ, ಮೀನಾಕ್ಷಿ, ಶ್ರೀಧರ್, ರವಿಕುಮಾರ್, ಪುಟ್ಟಸ್ವಾಮಿ, ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!