ಜಾ.ದಳದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ. ಸುರೇಶ್ ಬಾಬು ಅವರನ್ನು ಆಯ್ಕೆ ಮಾಡಿದ ನಡೆಯಿಂದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಆಕ್ರೋಶ ಸ್ಪೋಟವಾಗಿದೆ.
ಜಾ.ದಳ ಶಾಸಕಾಂಗ ಪಕ್ಷದ ನಾಯಕನಾಗಿ ಸಿ.ಬಿ.ಸುರೇಶ್ ಬಾಬು ಆಯ್ಕೆ ಮಾಡುತ್ತಿದ್ದಂತೆ, ಜಾ.ದಳ ಪಕ್ಷದ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರು ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದು, ತಮ್ಮ ಆಪ್ತರ ಬಳಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಅವರನ್ನು ಮುಂಚೂಣಿಗೆ ತರಲು ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಜಿ.ಟಿ.ದೇವೇಗೌಡ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿದ್ದರು. ನನಗೆ ವೈದ್ಯಕೀಯ ಖಾತೆ ಬೇಡ, ಸಹಕಾರ ಖಾತೆ ಕೊಡುವಂತೆ ಮನವಿ ಮಾಡಿದ್ದರೂ ಕುಮಾರಸ್ವಾಮಿ ಸಹಕಾರ ಖಾತೆ ನೀಡಿರಲಿಲ್ಲ. ಸಮ್ಮಿಶ್ರ ಸರ್ಕಾರ ಪತನದ ನಂತರ ಜಿ.ಟಿ.ದೇವೇಗೌಡ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡು ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಹತ್ತಿರವಾಗಿದ್ದರು.
2023 ರ ವಿಧಾನಸಭಾ ಚುನಾವಣೆ ವೇಳೆಗೆ ಜಿಟಿಡಿ ಕಾಂಗ್ರೆಸ್ ಸೇರಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದಂತೆ ಕಣಕ್ಕಿಳಿದ ಹೆಚ್.ಡಿ.ದೇವೇಗೌಡರು ಮೈಸೂರಿನ ಜಿ.ಟಿ.ದೇವೇಗೌಡರ ಮನೆಗೆ ತೆರಳಿ ಪಕ್ಷ ತೊರೆಯದಂತೆ ಭಾವನಾತ್ಮಕ ಮಾತುಗಳಿಂದ ಜಿಟಿಡಿ ಜೆಡಿಎಸ್ ನಲ್ಲೇ ಉಳಿಯುವಂತೆ ಮಾಡಿದ್ದಲ್ಲದೆ, ಅವರಿಗೆ ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಮಗ ಹರೀಶ್ ಗೌಡನಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಕೊಟ್ಟರು. ಜಿಟಿಡಿ ಹಾಗೂ ಹರೀಶ್ ಗೌಡ ಗೆಲ್ಲುವ ಮೂಲಕ ಜೆಡಿಎಸ್ ಮರ್ಯಾದೆ ಉಳಿಸಿದ್ದರು.
ಜೆಡಿಎಸ್ ಪಕ್ಷದಲ್ಲಿ ಗೆದ್ದಿರುವವರಲ್ಲಿ ಜಿಟಿಡಿ ಹಿರಿಯರು. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಜಿಟಿಡಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಕುಮಾರಸ್ವಾಮಿ ಆಯ್ಕೆ ಮಾಡಬೇಕಿತ್ತು. ಆದರೆ ಒಕ್ಕಲಿಗ ಸಮುದಾಯದ ಜಿಟಿಡಿ ಬಿಟ್ಟು ಕುರುಬ ಸಮುದಾಯದ ಸಿ.ಬಿ.ಸುರೇಶ್ ಬಾಬು ಅವರನ್ನು ಕುಮಾರಸ್ವಾಮಿ ಆಯ್ಕೆ ಮಾಡಿದ್ದರಿಂದ ಜಿಟಿಡಿ ಒಳಗೊಳಗೆ ಮುನಿಸಿಕೊಂಡಿದ್ದಾರೆ. ಜಿಟಿಡಿ ಶಾಸಕಾಂಗ ಪಕ್ಷದ ನಾಯಕನಾಗಿ ಉತ್ತಮ ಹೆಸರು ಪಡೆದರೆ ತನ್ನ ಮಗ ನಿಖಿಲ್ ಕುಮಾರಸ್ವಾಮಿಯನ್ನು ಮುಂಚೂಣಿಗೆ ತರಲು ಅಡ್ಡಿಯಾಗುತ್ತದೆ ಎಂಬ ದುರಾಲೋಚನೆ ಇದರ ಹಿಂದಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.




