ಮಕ್ಕಳ ಸಹಾಯವಾಣಿ ಸಂಖ್ಯೆ1098 ಉಚಿತವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸಂಕಷ್ಟದಲ್ಲಿರುವ ಅಥವಾ ತೊಂದರೆಯಲ್ಲಿರುವ 18 ವರ್ಷದೊಳಗಿನ ಮಕ್ಕಳು ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸಂಪರ್ಕಿಸುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಚೈಲ್ಡ್ ಲೈನ್-1098 ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಮಕ್ಕಳ ಅನೈತಿಕ ಸಾಗಾಣಿಕೆ ಮತ್ತು ಮಾರಾಟ ಇತ್ಯಾದಿ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ.ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ಸದಾ ಸಿದ್ಧವಿದೆ ಎಂದರು.
ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳ ಸಹಾಯವಾಣಿಯ ಬಗ್ಗೆ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದರು.
ಇದೇ ವೇಳೆ ಮಕ್ಕಳ ಸಹಾಯವಾಣಿಯ ನೋಡಲ್ ಸಂಸ್ಥೆಯ ಬರ್ಡ್ಸ್ ನ ನಿರ್ದೇಶಕ ವೆಂಕಟೇಶ್ ಮಾತನಾಡಿ ಎಲ್ಲಾ ಶಾಲೆಗಳ ಫಲಕಗಳು ಹಾಗೂ ಗೋಡೆ ಗಳಲ್ಲಿ ಮಕ್ಕಳ ಸಹಾಯವಾಣಿ-1098 ನ್ನು ಬರೆಸುವುದು. ಬೆಳಗಿನ ಶಾಲಾ ಅಸೆಂಬ್ಲಿ ಪಾರ್ಥನೆ ಸಮಯದಲ್ಲಿ ಹಾಗೂ ಶಾಲೆಗಳ ವೆಬ್‌ಸೈಟ್‌ನಲ್ಲಿ ಮಕ್ಕಳ ಸಹಾಯವಾಣಿ-1098ನ ಕುರಿತಂತೆ ಮಾಹಿತಿಯನ್ನು ಬಿತ್ತರಿಸಿ ಹೆಚ್ಚು ಪ್ರಚಾರ ಒದಗಿಸಿ ಎಂದರು.
ಬಾಲ್ಯವಿವಾಹಕ್ಕೆ ಸಂಬಂದಿಸಿದಂತೆ ಡಿಸೆಂಬರ್ 2021 ರಿಂದ 2022ರ ವರೆಗೆ ಕೆ.ಆರ್ ಪೇಟೆ 19 , ಮಂಡ್ಯ 15, ಶ್ರೀರಂಗಪಟ್ಟಣ 11, ಪಾಂಡವಪುರ 08, ನಾಗಮಂಗಲ 08, ಮದ್ದೂರು 09, ಮಳವಳ್ಳಿ 08 ಒಟ್ಟು 78 ಕರೆಗಳು ಸಹಾಯವಾಣಿಯಲ್ಲಿ ಸ್ವಿಕೃತಿಯಾಗಿದ್ದು, 49 ಬಾಲ್ಯ ವಿವಾಹವನ್ನು ತಡೆಯಲಾಗಿದೆ ಬಾಲ್ಯ ವಿವಾಹವು 29 ದಾಖಲಾಗಿದ್ದು,29 ಪ್ರಕರಣಗಳಿಗೂ ಎಫ್. ಐ.ಆರ್ ದಾಖಲಿಸಲಾಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ಕ್ಕೆ ಮಾರ್ಚ್ 2011 ರಿಂದ ಏಪ್ರಿಲ್ 2022 ರವರಿಗೆ ಒಟ್ಟು 7727 ಪ್ರಕರಣಗಳು ನೊಂದಣಿಯಾಗಿವೆ. ಜಿಲ್ಲಾ ಮಟ್ಟದಲ್ಲಿ ಮಕ್ಕಳ ಮಾರಾಟ, ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಜಾಗೃತಿಯನ್ನು ಮೂಡಿಸಲು ಅಲವಾರು ಜಾಥಾ ಮಾಡಲಾಗಿದೆ ಎಂದರು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಲಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಿಶೇಷವಾಗಿ ಬಾಲ್ಯವಿವಾಹದ ದುಷ್ಪರಿಣಾಮ ಕುರಿತು ಅರಿವು ಮೂಡಿಸುವ ಕಾರ್ಯಗಾರ ಹೆಚ್ಚು ಹೆಚ್ಚಾಗಿ ನಡೆಸಬೇಕು ಎಂದರು.
ಮಕ್ಕಳ ಭಿಕ್ಷಾಟನೆ ತಡೆಯುಲು ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ , ಸ್ಥಳೀಯ ಸಂಸ್ಥೆಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸಾರಿಗೆ ಇಲಾಖೆ, ಸಹಕಾರ ಅತ್ಯಗತ್ಯ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿಯ ವಾರ್ಷಿಕ ವರದಿ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್.ರಾಜಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೇತನ್, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್ ನಿರ್ಮಲ, ವಿಕಾಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರ ಗುರು, ಸಿ.ಡಿ.ಪಿ ಒ ಗಳಾದ ಎಂ.ಕೆ.ಕುಮಾಸ್ವಾಮಿ, ಎನ್.ಟಿ.ಯೋಗೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪ್ಥತರಿದ್ದರು.