Friday, November 20, 2026

ಪ್ರಾಯೋಗಿಕ ಆವೃತ್ತಿ

ಜಿಲ್ಲಾ ಮಟ್ಟದ ಗಾಳಿಪಟ ಹಾರಾಟ ಸ್ಪರ್ಧೆ

ಗಾಳಿಪಟ ಸ್ಪರ್ಧೆಯು ಬಾಲ್ಯವನ್ನು ನೆನಪಿಸುತ್ತಿದ್ದು, ಬಾಲ್ಯದ ತುಂಟಾಟಗಳು ಮನರಂಜನೆ ನೀಡುತ್ತದೆ ಎಂದು ಜಿ.ಪಂ.ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೇಳಿದರು.

ಮಂಡ್ಯ ನಗರದಲ್ಲಿರುವ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಭಾರತ ಸೇವಾದಳ ಜಿಲ್ಲಾ ಶಾಖೆ, ಸೇಂಟ್ ಜಾನ್ ಆಂಬುಲೆನ್ಸ್ ಇಂಡಿಯಾ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಕ್ರೀಡಾ ಇಲಾಖೆ ಆಯೋಜಿಸಿದ್ದ 26ನೇ ವರ್ಷದ ಜಿಲ್ಲಾ ಮಟ್ಟದ ಗಾಳಿಪಟ ಹಾರಾಟ ಸ್ಪರ್ಧೆ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಾಲ್ಯ ಜೀವನದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಡಿದ ಸುಮಧುರ ಕ್ಷಣಗಳೇ ಚಂದ.ಗಾಳಿಪಟ ಹಾರಿಸಲು ತಯಾರಿ ಮಾಡಿಕೊಳ್ಳುವ ಹಠ, ಆಸಕ್ತಿ, ಅದರ ಸಂಭ್ರಮವೇ ಬೇರೆ, ಬೇರೆಯವರು ಗಾಳಿಪಟ ಹಾರಿಸುವಾಗ ದಾರ ಕಿತ್ತು ಒಂದು ಕಿಲೋಮೀಟರ್ ದೂರ ಬಿದ್ದಿದ್ದರೂ ಅದನ್ನು ಹುಡುಕಿ ಮತ್ತೆ ಹಾರಿಸುವ ಸಂಭ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಸ್ಮರಿಸಿದರು.

ಚಲನಚಿತ್ರ ಹಿರಿಯ ನಟ ಶಂಕರ್ ಅಶ್ವತ್ಥ್ ಅವರು ಮಾತನಾಡಿ, ನಮ್ಮ ದೇಶ ಇಂದಿನ ದಿನಗಳಲ್ಲಿ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚಾರಗಳ ಬಿಟ್ಟು, ದೂರ ಸಾಗುತ್ತಿರುವವಂಹ ಸಂದರ್ಭದಲ್ಲಿ ಮತ್ತೆ ನಮ್ಮ ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರವನ್ನು ಬೆಳಸಿಕೊಳ್ಳಬಹುದು. ಮನರಂಜನೆಯ ಹಿತದೃಷ್ಠಿಯಿಂದ ಇವತ್ತಿನ ದಿವಸ ಗಾಳಿಪಟ ಅವಶ್ಯವಿದೆ ಎಂದರು.

ಗಾಳಿಪಟಕ್ಕೆ ಸೂತ್ರ ಮತ್ತು ಬಾಲಂಗೋಚಿ ಬಹಳ ಮುಖ್ಯ, ಸೂತ್ರ ಗುರಿ ಮುಟ್ಟಿಸಲಿಕ್ಕೆ ಮತ್ತು ಬಾಲಂಗೋಚಿ ಜವಾಬ್ದಾರಿ ಹೊರಲಿಕ್ಕೆ ಅಗತ್ಯ ಎಂದರು.

ನಮ್ಮ ಜೀವನದಲ್ಲಿ ನಮ್ಮ ಗುರಿಗಳನ್ನು ಮುಟ್ಟಲಿಕ್ಕೆ ಸರಿಯಾದ ಸೂತ್ರವನ್ನು ತಮ್ಮ ಶಿಕ್ಷಕರ ಮೂಲಕ ಹಾಗೂ ಹಿರಿಯರ ಮೂಲಕ ಅಳವಡಿಸಿಕೊಂಡು, ತಮ್ಮ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, 26 ವರ್ಷಗಳಿಂದ ಗಾಳಿಪಟ ಸ್ಪರ್ಧೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ, ನಾಡಿನ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಕ್ರೀಡೆಗಳನ್ನು ಆಯೋಜಿಸಲು ಒತ್ತುಕೊಡಬೇಕಿದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಹಾರಿಸುವ ಸ್ಪರ್ಧೆಗಳು ಮಂಡ್ಯ ನೆಲದಲ್ಲಿ ನಡೆಯಲಿ, ನಾವು ಸಹಕಾರ ನೀಡುತ್ತೇವೆ ಎಂದರು.

ವಿವಿಧ ತಾಲ್ಲೂಕುಗಳಿಂದ ಮತ್ತು ನಗರ ವ್ಯಾಪ್ತಿಯಿಂದ ೧೦೦ಕ್ಕೂ ಹೆಚ್ಚು ಗಾಳಿಪಟ ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.ಕಿರಿಯ ವಿಭಾಗ, ಹಿರಿಯ ವಿಭಾಗ ಮುಕ್ತ ವಿಭಾಗ ಎಂದು 3 ವಿಭಾಗಗಳಲ್ಲಿ ಗಾಳಿಪಟ ಸ್ಪರ್ಧಾರ್ಥಿಗಳು ಪಾಲ್ಗೊಂಡು ವಿವಿಧ ಬಗೆಯ ಗಾಳಿಪಟ ಹಾರಿಸಿದರು.

ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ವಿ. ನಾಗರಾಜು, ಭಾರತ ಸೇವಾದಳ ಜಿಲ್ಲಾಧ್ಯಕ್ಷ ಬಿ.ಸಿ. ಶಿವಾನಂದ, ಸಮೃದ್ಧಿಯ ಲಯನ್ಸ್ ಸಂಸ್ಥೆ ಅಧ್ಯಕ್ಷೆ ನೀನಾ ಪಟೇಲ್, ಸೇಂಟ್ ಜಾನ್ ಆಂಬುಲೆನ್ಸ್ ಖಜಾಂಚಿ ಸಜ್ಜನ್ ಕೊಠಾರಿ, ಚಲನಚಿತ್ರ ನಟ ಮಂಡ್ಯ ಸತ್ಯನ್, ಭಾರತ ಸೇವಾದಳದ ಸಂಘಟಕ ಗಣೇಶ್, ಉಪನ್ಯಾಸಕ ಜನಾರ್ದನ ಕೊಂಡ್ಲಿ, ಶಿಕ್ಷಕಿ ಉಷಾ ರಾಣಿ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ