Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ದಿವ್ಯಶ್ರೀ ಸಾವು ಪ್ರಕರಣ ; ವೈದ್ಯರ ವಿರುದ್ದ ಕ್ರಮಕ್ಕೆ ಆಗ್ರಹ

ಹೆರಿಗೆ ಮಾಡಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದ 27 ವರ್ಷದ ದಿವ್ಯಶ್ರೀ ಕೆ.ಬಿ ಅವರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದು, ಇದಕ್ಕೆ ಕಾರಣರಾದವರ ಮೇಲೆ ಮಂಡ್ಯ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಮೃತಳ ಪತಿ ಹೆಚ್.ಕೆ.ಕುಮಾರ್ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ಮೇ 18ರಂದು ತನ್ನ ಪತ್ನಿ ದಿವ್ಯಶ್ರೀ ಅವರನ್ನು ಕೀಲಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗಾಗಿ ದಾಖಲಿಸಿದ್ದು, ಹೆಚ್ಚುವರಿ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ, ಜಿಲ್ಲಾಸ್ಪತ್ರೆಯಿಂದ ನಾರಾಯಣ ಹೃದಯಾಲಕ್ಕೆ ವರ್ಗಾಯಿಸಿ ಸರಿಯಾದ ಚಿಕಿತ್ಸೆ ನೀಡದೆ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಪ್ರಕೃತಿ ಅವರು ಹೆರಿಗೆಯ ವೇಳೆ ಸಿ.ಸೆಕ್ಷನ್(ಸಿಝರಿನ್) ಮೂಲಕ ಹೆರಿಗೆ ಮಾಡಬೇಕಾಗುವುದು ಎಂದು ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡು, ತಮಗೆ ಸಿ.ಸೆಕ್ಷನ್(ಸಿಝರಿನ್) ಹೆರಿಯ ಅನುಭವ ಇಲ್ಲದಿದ್ದರೂ, ಅರ್ಜುನ್ ಎಂಬ ವೈದ್ಯರ ಸಹಾಯದ ಮೇರೆಗೆ ಶಸ್ತ್ರ ಚಿಕಿತ್ಸೆ ಮಾಡಿ, ಹೆರಿಗೆ ಮಾಡಿದ್ದಾರೆ ಎಂದು ದೂರಿದರು.

ಪತ್ನಿ ದಿವ್ಯಶ್ರೀ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದಾಗ ಸಿ.ಸೆಕ್ಷನ್(ಸಿಝರಿನ್) ಹೆರಿಗೆ ನಂತರದ ಚಿಕಿತ್ಸೆಗೆ ವ್ಯವಸ್ಥೆಯಿಲ್ಲವೆಂದು ಹೇಳಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಅಲ್ಲಿಯೂ ತುರ್ತು ಚಿಕಿತ್ಸೆ ವಿಭಾಗದಲ್ಲಿ ಹಾಸಿಗೆ ಲಭ್ಯವಿಲ್ಲವೆಂದು ಹೇಳಿ, ಚಿಕಿತ್ಸೆ ವಿಳಂಬ ಮಾಡಿರುವುದಲ್ಲದೇ, ನಾರಾಯಣ ಹೃದಯಾಲಯಕ್ಕೆ ರವಾನಿಸಿದ್ದಾರೆ ಎಂದು ವಿವರಿಸಿದರು.

ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ವೇಳೆಯಲ್ಲಿ ಹಲವು ಪರೀಕ್ಷೆಗಳನ್ನು ಮಾಡಿದ ವೈದ್ಯರು, ಈಗಾಗಲೇ ಹೃದಯ ಎರಡು ಬಾರಿ ನಿಂತಿದ್ದು, ಮೆದುಳು ಶೇ.೮೫ರಷ್ಟು ಕೆಲಸ ಮಾಡುತ್ತಿಲ್ಲ ಎಂದು ಹೇಳಿ ಒಮ್ಮೆ ೫೦ ಸಾವಿರ ರೂ., ಮತ್ತೊಮ್ಮೆ ೪೦ ಸಾವಿರ ಹಣ ಕಟ್ಟಿಸಿಕೊಂಡು, ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿದ್ದಾರೆ ಎಂದು ಶವ ನೀಡಿದ್ದು, ಈ ಎಲ್ಲ ಪ್ರಕ್ರಿಯೆಯ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಪ್ರಕೃತಿ ಹಾಗೂ ಅವರ ಪತಿ ಸತೀಶ್ ಆಗಾಗ ಭೇಟಿ ನೀಡಿರುವುದು ಪತ್ನಿಯ ಸಾವಿನ ಸಂಬಂಧ  ಹಲವು ಅನುಮಾನ ಮೂಡಿಸಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಸಿ.ಸೆಕ್ಷನ್(ಸಿಝರಿನ್) ವೇಳೆ ಅಗತ್ಯಕ್ಕಿಂತ ಹೆಚ್ಚಿನ ಅರವಳಿಕೆ ಮದ್ದನ್ನು ನೀಡಿರುವುದು ಪತ್ನಿ ಸಾವಿಗೆ ಕಾರಣ ಎಂಬುದಾಗಿ ತಿಳಿದು ಬಂದಿರುತ್ತದೆ. ಈ ಸಂಬಂಧ ಮಂಡ್ಯ ಪೂರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಂಡ್ಯ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಡಾ.ಪ್ರಕೃತಿ ವಜಾಗೊಳಿಸಿ, ಡಾ.ಸತೀಶ್ ಪರವಾನಗಿ ರದ್ದುಗೊಳಿಸುವುದರ ಜೊತೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಮೇಲೆಯೂ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ವೇಣು ಮಾತನಾಡಿ, ಜಿಲ್ಲಾಡಳಿತ ಕೂಡಲೇ ಪಾರದರ್ಶಕ ತನಿಖೆ ನಡಿಸಿ, ದಿವ್ಯಶ್ರೀ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಮೃತಳ ತಂದೆ ಬೋರೇಗೌಡ, ಕರವೇ (ನಾರಾಯಣಗೌಡ ಬಣ) ರಾಜ್ಯ ಸಂಚಾಲಕ ಮಾ.ಸೋ.ಚಿದಂಬರ್, ಮಹಿಳಾ ಅಧ್ಯಕ್ಷ ಸುಜಾತಕೃಷ್ಣ, ಕಾರ್ಯದರ್ಶಿ ರಾಮಚಂದ್ರ, ತೇಜಕುಮಾರ್, ಶ್ರೀನಿವಾಸ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ