ನಾಳೆ ಇಡಿ ವಿಚಾರಣೆಗೆ ಬರಲೇಬೇಕೆಂದು ಸಮನ್ಸ್ ನೀಡಿದ್ದಾರೆ. ಈ ಬಗ್ಗೆ ನಮ್ಮ ಪಕ್ಷದ ನಾಯಕರನ್ನು ಕೇಳಿ ಹೋಗುವುದೋ ಬೇಡವೋ ಎಂದು ನಿರ್ಧರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ನಾಗಮಂಗಲ ತಾಲ್ಲೂಕಿನ ಖರಡ್ಯ ಗ್ರಾಮದಲ್ಲಿ ಭಾರತ ಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಅಕ್ಟೋಬರ್ 7ರಂದು ವಿಚಾರಣೆಗೆ ಹಾಜರಾಗಬೇಕೆಂದು
ಇಡಿ ಸಮನ್ಸ್ ನೀಡಿದೆ. ನಾನು ಭಾರತ್ ಜೋಡೋ ಯಾತ್ರೆ ಮುಗಿಯಲಿ ನಂತರ ನಾನೇ ಬಂದು ಸಹಕರಿಸುವುದಾಗಿ ಮನವಿ ಮಾಡಿದ್ದೇನೆ. ಆದರೂ ನೀವು ನಾಳೆ ಬರಲೇಬೇಕೆಂದು ತಿಳಿಸಿದ್ದಾರೆ ಎಂದರು.
ಯಂಗ್ ಇಂಡಿಯಾ ಸಂಸ್ಥೆಯ ನ್ಯಾಷನಲ್ ಹೆರಾಲ್ಡ್ ಕೇಸಿನ ಸಂಬಂಧ ವಿಚಾರಣೆಗೆ ಕರೆದಿದ್ದಾರೆ. ನಾನು ಯಾತ್ರೆಯನ್ನು ಬಿಟ್ಟು ಹೋಗಬೇಕೋ, ಬೇಡವೋ ಎಂಬುದನ್ನು ನಮ್ಮ ನಾಯಕರ ಜೊತೆ ಚರ್ಚೆ ನಡೆಸಿ ನಿರ್ಧರಿಸುತ್ತೇನೆ ಎಂದು ನುಡಿದರು.
ನಾನು ಕರ್ನಾಟಕ ಬಿಟ್ಟು ಎಲ್ಲೂ ಹೋಗುವುದಿಲ್ಲ. ನನ್ನ ಪರಿಸ್ಥಿತಿಯನ್ನು ಇಡಿ ಅಧಿಕಾರಿಗಳಿಗೆ ವಿವರಿಸಿದ್ದೇನೆ. ಈಗಾಗಲೇ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಚಾರಣೆ ಮಾಡಿದ್ದಾರೆ. ಅದೇ ಕೇಸಿನಲ್ಲಿ ನನಗೂ ಸಮನ್ಸ್ ನೀಡಿದ್ದಾರೆ. ಬಾರತ್ ಜೋಡೋ ಕಾರ್ಯಕ್ರಮದ ರಾಜ್ಯದ ಹೊಣೆಯನ್ನು ರಾಜ್ಯದಲ್ಲಿ ನಾನು ಹೊತ್ತಿದ್ದೇನೆ ಎಂದು ವಿವರಿಸಿದರು.
ಯಾತ್ರೆಯ ಸಂದರ್ಭದಲ್ಲಿ ಜನರಿಗೆ ತಿಂಡಿ ,ಊಟ, ವಸತಿ,ಕುಡಿಯುವ ನೀರು ಸೇರಿದಂತೆ ಇತರ ವ್ಯವಸ್ಥೆಗಳ ಬಗ್ಗೆ ನಾನು ಹೆಚ್ಚು ಗಮನ ಹರಿಸಿದ್ದೇನೆ. ನಾನಿಲ್ಲದಿದ್ದರೂ ಇವೆಲ್ಲವೂ ಅಚ್ಚುಕಟ್ಟಾಗಿಯೇ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಿದ್ದಾರೆ. ಆದರೆ ನಾನು ಮತ್ತು ನನ್ನ ತಮ್ಮನಿಗೆ ಹೆಚ್ಚಿನ ಜವಾಬ್ದಾರಿ ಇದೆ. ನಾನು ಯಾತ್ರೆಯ ಸಂದರ್ಭದಲ್ಲಿ ಜೊತೆಗಿರಬೇಕೆಂದು ಮನವರಿಕೆ ಮಾಡಿ ಕೊಟ್ಟಿದ್ದರೂ ಕೇಳದೆ ಮಾನವೀಯತೆ ಇಲ್ಲದಂತೆ ನಾಳೆ ಬರಲೇಬೇಕೆಂದು ತಿಳಿಸಿದ್ದಾರೆ ಎಂದು ಬೇಸರದಿಂದ ನುಡಿದರು.




