Thursday, November 19, 2026

ಪ್ರಾಯೋಗಿಕ ಆವೃತ್ತಿ

ನೀನಿನ್ನೂ ಗಂಡೇ ಆಗಿಲ್ಲ: ಡಿಕೆಶಿ ಹೇಳಿಕೆ ಹಿಂದಿನ ಮರ್ಮವೇನು…?


  • ಗುರುಚರಣ್ ಮತ್ತು ಅವರ ಬೆಂಬಲಿಗರ ಮನಸ್ಸಿನಲ್ಲಿ ಡಿಕೆಶಿ ಆಡಿದ ಮಾತುಗಳು ರಾಡಿಯೆಬ್ಬಿಸಿದೆ

  • ಅಂತಿಮವಾಗಿ ಟಿಕೆಟ್ ಕದಲೂರು ಉದಯ್ ಅವರ ಹೋಗುತ್ತದೆ ಎಂಬ ಮಾತು ಕ್ಷೇತ್ರದಾದ್ಯಂತ ಪ್ರಬಲವಾಗಿ ಕೇಳಿ ಬರುತ್ತಿದೆ‌

ಮದ್ದೂರಿನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ‌.ಶಿವಕುಮಾರ್ ಭಾಷಣ ಮಾಡುವ ಸಂದರ್ಭದಲ್ಲಿ ಅವರ ಹಿಂಬದಿ ನಿಲ್ಲಲು ಬಂದ ಗುರುಚರಣ್ ಗೆ ನೀನಿನ್ನೂ ಗಂಡೇ ಆಗಿಲ್ಲ, ಆಗಲೇ ನಿಲ್ಲಲು ಬಂದ್ಯಾ ಎಂದು ಕಾಲೆಳೆಯುವ ಮೂಲಕ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿದ್ದಾರೆ.

ಅದರಲ್ಲೂ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಗುರುಚರಣ್ ಮತ್ತು ಅವರ ಬೆಂಬಲಿಗರ ಮನಸ್ಸಿನಲ್ಲಿ ಡಿಕೆಶಿ ಆಡಿದ ಮಾತುಗಳು ರಾಡಿಯೆಬ್ಬಿಸಿದೆ.

ಮದ್ದೂರು ಕ್ಷೇತ್ರದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುಟುಂಬದ ಗುರುಚರಣ್ ಹೆಸರು ಫೈನಲ್ ಎಂದು ಅವರ ಬೆಂಬಲಿಗರು ಅದೆಷ್ಟೇ ಹೇಳಿದರೂ, ಡಿಕೆಶಿ ಅವರಾಡಿದ ಮಾತು ಕೇಳಿದ ಜನರು ಮಾತ್ರ ಮದ್ದೂರಿನ ಕಾಂಗ್ರೆಸ್ ಟಿಕೆಟ್ ಗೆ ಇನ್ನೊಬ್ಬ ಪ್ರಬಲ ವ್ಯಕ್ತಿ ಕದಲೂರು ಉದಯ್ ಕೂಡ ಆಕಾಂಕ್ಷಿ ಎಂಬುದನ್ನು ತಿಳಿದುಕೊಂಡರು. ಡಿಕೆಶಿ ಅವರ ಮಾತಿನಿಂದ ಅಂತಿಮ ಗಳಿಗೆಯಲ್ಲಿ ಮದ್ದೂರು ಅಭ್ಯರ್ಥಿ ಬದಲಾವಣೆ ಆಗುವ ಬಗ್ಗೆ ಕೂಡ ಕ್ಷೇತ್ರದಲ್ಲಿ ಚರ್ಚೆ ಬಹಳ ಜೋರಾಗಿದೆ.

ಹಾಗೆ ಹೇಳುವುದಾದರೆ ಮದ್ದೂರಿನಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದು ಭಾರೀ ಯಶಸ್ವಿಯಾಯಿತು.ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗುರುಚರಣ್ ಹಾಗೂ ಅವರ ಟೀಂ ಐದಾರು ದಿನಗಳಲ್ಲಿ ಜನರ ಬಳಿ ಹೋಗಿ ದೊಡ್ಡ ಪ್ರಮಾಣದಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರನ್ನು, ಪ್ರಜೆಗಳನ್ನು ಪ್ರಜಾಧ್ವನಿ ಸಮಾವೇಶಕ್ಕೆ ಕರೆತಂದು ಯಶಸ್ವಿಯಾಗುವಂತೆ ಮಾಡಿದರು. ಇದರ ಹಿಂದೆ ಇನ್ನೊಂದು ತರ್ಕವೂ ಇತ್ತು.ಅದೇನೆಂದರೆ, ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಅಂತಿಮವಾಗಿ ಕದಲೂರು ಉದಯ್ ಅವರ ತೆಕ್ಕೆಗೆ ಹೋಗುತ್ತದೆ ಎಂಬ ಮಾತು ಕ್ಷೇತ್ರದಾದ್ಯಂತ ಪ್ರಬಲವಾಗಿ ಕೇಳಿಬರುತ್ತಿದೆ‌.

ಈ ಕಾರಣದಿಂದಲೇ ಗುರುಚರಣ್ ಮತ್ತವರ ಬೆಂಬಲಿಗರು ಕ್ಷೇತ್ರದಾದ್ಯಂತ ಸಂಚರಿಸಿ ಜನರನ್ನು ಸೇರಿಸಿ ಪ್ರಜಾಧ್ವನಿಯ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ಗುರುಚರಣ್ ಹಿಂದೆಯೂ ಜನಶಕ್ತಿ ಇದೆ ಎಂಬುದನ್ನು ತೋರಿಸಿದ್ದಾರೆ.

ಗುರುಚರಣ್ ಈ ಹಿಂದಿನ ಚುನಾವಣೆಗಳಲ್ಲಿ ತೆಗೆದುಕೊಂಡ ರಾಜಕೀಯ ತೀರ್ಮಾನಗಳು,ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಗಂಭೀರವಾಗಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳದ ಕಾರಣ ಜನರು ಕೂಡ ಅವರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಆದರೆ ಈ ಬಾರಿ ಅವರೇ ಅಧಿಕೃತ ಅಭ್ಯರ್ಥಿ ಎಂದು ವರ್ಷದ ಹಿಂದೆಯೇ ಡಿಕೆಶಿ ಘೋಷಣೆ ಮಾಡಿದ ನಂತರ ಕ್ಷೇತ್ರದಲ್ಲಿ ಗುರುಚರಣ್ ಓಡಾಡುತ್ತಿರುವುದನ್ನು ಕಂಡು ಮದ್ದೂರಿನ ಜನರು ಕೂಡ ಈತನಿಗಲ್ಲದೆ ಕಾಂಗ್ರೆಸ್ ಬಿ.ಫಾರಂ ಇನ್ಯಾರಿಗೆ ತಾನೇ ಕೊಡಲು ಸಾಧ್ಯ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಇನ್ನೂ ಇಬ್ಬರ ಹೆಸರಿದ್ದರೂ ಗುರುಚರಣ್ ಹೆಸರೇ ಸಖತ್ ಸದ್ದು ಮಾಡುತ್ತಿದೆ.

ಹಾಗೆ ಮಾತನಾಡಬಾರದಿತ್ತು

ಮದ್ದೂರು ಕ್ಷೇತ್ರ ಜೆಡಿಎಸ್ ಭದ್ರಕೋಟೆ.ಅಂತಹ ಕ್ಷೇತ್ರದಲ್ಲಿ ಗುರುಚರಣ್ ಬಂಡವಾಳ ಹಾಕಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿದ್ದಾರೆ.ಐದಾರು ದಿನದಲ್ಲಿ ಪ್ರಜಾಧ್ವನಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಯಶಸ್ವಿಯಾಗುವಂತೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಗುರುಚರಣ್ ಅವರಿಗೆ ನೀನು ಗಂಡೇ ಅಲ್ಲ ಎಂದು ಅವಹೇಳನ ಮಾಡುವ ಮೂಲಕ ಅಭ್ಯರ್ಥಿ ಇನ್ನೂ ಫೈನಲ್ ಆಗಿಲ್ಲ ಎಂಬ ಸಂದೇಶ ನೀಡಿದ್ದಾರೆ. ಗುರುಚರಣ್ ಬದಲು ಅಂತಿಮ ಹಂತದಲ್ಲಿ ಕದಲೂರು ಉದಯ್ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆಂಬ ಜನರ ಗುಸು ಗುಸು ಮಾತಿಗೆ ಪುಷ್ಟಿ ನೀಡಿದ್ದಾರೆ. ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಗುರುಚರಣ್ ಅವರಿಗೆ ಮಾಡಿದ ಅವಮಾನ ಎಂದು ಅವರ ಹಿಂಬಾಲಕರು ನೋವಿನಿಂದ ಮಾತನಾಡುತ್ತಿದ್ದಾರೆ.ಡಿ.ಕೆ.ಶಿವಕುಮಾರ್ ಅವರು ತುಂಬಿದ ಸಭೆಯಲ್ಲಿ ಹಿಂಗೆಲ್ಲ ಮಾತನಾಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದು ಕೂಡ ಡಿಕೆಶಿ ಅವರಿಗೆ ಇನ್ನೂ ಪ್ರಬುದ್ಧ ರಾಜಕಾರಣಿ ಆಗಿಲ್ಲ ಎಂಬುದನ್ನು ತೋರಿಸುತ್ತದೆ.

ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಪ್ರಬಲ ಮುಖಂಡ,ಕೆಪಿಸಿಸಿ ಅಧ್ಯಕ್ಷರೇ ಆಗಿದ್ದರೂ ದೇವೇಗೌಡರಂತೆ,ಕುಮಾರಸ್ವಾಮಿ ಜೊತೆ ಒಕ್ಕಲಿಗ ಮತದಾರರು ನಿಂತಿದ್ದಾರೆ.ಡಿ.ಕೆ‌.ಶಿವಕುಮಾರ್ ಅವರು ನಾನು ನಿಮ್ಮ ಸಮುದಾಯದ ಮಗ.ನನಗೂ ಸಿಎಂ ಆಗಲು ಶಕ್ತಿ ನೀಡಿ ಎಂದರೂ ದೊಡ್ಡ ಪ್ರಮಾಣದಲ್ಲಿ ಒಕ್ಕಲಿಗ ಸಮುದಾಯ ಇವರ ಜೊತೆ ನಿಲ್ಲೋದಿಲ್ಲ.ಇಂತಹ ಸಂದರ್ಭದಲ್ಲಿ ತಾಳ್ಮೆಯಿಂದ,ಪ್ರೀತಿ, ವಿಶ್ವಾಸದಿಂದ ಒಕ್ಕಲಿಗ ಸಮುದಾಯದ ಮನ ಗೆಲ್ಲಬೇಕು.ಅದು ಬಿಟ್ಟು ಈ ರೀತಿ ಹುಂಬತನದಿಂದ ಮಾತನಾಡಿದರೆ ಜನರು ಇನ್ನೂ ದೂರ ಹೋಗುತ್ತಾರಷ್ಟೆ ಎಂಬುದು ಹೆಸರು ಹೇಳಲಿಚ್ಚಿಸದ ಮದ್ದೂರಿನ ಕಾಂಗ್ರೆಸ್ ಮುಖಂಡನ ಮಾತು.

ಒಟ್ಟಾರೆ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಡಿಕೆಶಿ ಅವರ ಮಾತುಗಳು ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ