ಸಂವಿಧಾನ ಕೇವಲ ದಲಿತರಿಗಷ್ಟೆ ಅಲ್ಲ ಸಮಾಜದ ಎಲ್ಲಾ ಶೋಷಿತರಿಗೂ ರಕ್ಷಣೆ ನೀಡಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗಣಿಗ ತಿಳಿಸಿದರು.
ಮಂಡ್ಯತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತವಾಗದೆ ಇಡೀ ವರ್ಷದ ಉತ್ಸವ ಆಗಬೇಕು. ದೇಶದ ಮೂಲೆ ಮೂಲೆಗಳಲ್ಲೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಗಳು ನಡೆಯಬೇಕು, ಆಗ ಸಂವಿಧಾನಕ್ಕೆ ಗೌರವ ಕೊಟ್ಟಂತೆ ಆಗುತ್ತದೆ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರಯೋಜನವನ್ನು ಇಡೀ ದೇಶದ ಸರ್ವ ಧರ್ಮದ ಸರ್ವ ಜನಾಂಗದ ಜನರು ಪಡೆದು ಸಂವಿಧಾನವನ್ನು ಪಾಲಿಸುತ್ತಿದ್ದೇವೆ, ಸಂವಿಧಾನವನ್ನು ತಿದ್ದಬೇಕು ಎಂದು ಮನುವಾದಿಗಳು ಹೊರಟಾಗ ದೇಶದಲ್ಲಿ ಯಾವ ರೀತಿ ಹೋರಾಟಗಳು ನಡೆದವು ಎಂದು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಕೊಮ್ಮೇರಹಳ್ಳಿ ಗ್ರಾಮದ ಅಂಬೇಡ್ಕರ್ ಭವನದ ಅಡುಗೆಮನೆ ನಿರ್ಮಾಣಕ್ಕೆ 5 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡುತ್ತೇನೆ. ಗ್ರಾಮದ ಸ್ಮಶಾನಕ್ಕೆ ಕಾನೂನು ತೊಡಕು ನಿವಾರಣೆ ಮಾಡುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.
ಕೊಮ್ಮೇರಹಳ್ಳಿ ಗ್ರಾಮದಲ್ಲಿ 4.50 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ ಮುಗಿದಿದ್ದು, ಉಳಿದ ರಸ್ತೆಗೆ ಮುಂದಿನ ದಿನಗಳಲ್ಲಿ ಒಂದು ಕೋಟಿ ರೂ.ಟೆಂಡರ್ ಕಾಮಗಾರಿ ಮುಗಿದಿದೆ. ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಐಆರ್ ಎಸ್ ಹುದ್ದೆಗೆ ಆಯ್ಕೆಯಾದ ಗ್ರಾಮದ ಸಂಪ್ರೀತ್ ಸಂತೋಷ್ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಕಲಾವತಿ, ಕೃಷ್ಣಮೂರ್ತಿ ಚಮರಂ ಅವರು ಡಾ. ಬಿ.ಆರ್.ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೀಲಾರ ರಾಧಾಕೃಷ್ಣ, ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಪ್ರಕಾಶ್, ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಹಾಗೂ ವಕೀಲ ಕೆ.ಜಿ.ಮೋಹನ್, ದ್ವಾರಕ್, ಬಸವರಾಜು, ಶ್ರೀನಿವಾಸ್, ಅಶ್ವಿನಿ, ಜ್ಯೋತಿ, ಮಲ್ಲೇಶ್, ಶಂಕರೇಗೌಡ, ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು




