ವೈದಿಕ ಧರ್ಮಶಾಸ್ತ್ರ ಹೋಮಗಳೆಂಬ ಮೂಢನಂಬಿಕೆಗಳಿಂದ ಜನತೆ ದೂರವಿರಬೇಕು, ದೇವರು ಮತ್ತು ಭಕ್ತರ ನಡುವೆ ದಲ್ಲಾಳಿ ಇರಬಾರದು, ಬಲಗೈ ಶ್ರೇಷ್ಠ, ಎಡಗೈ ಕನಿಷ್ಠ ಎಂಬ ದೇಹದ ಅಂಗಾಂಗಗಳಲ್ಲೇ ತಾರತಮ್ಯ ಹುಟ್ಟಿಸುತ್ತಿರುವ ಮೂಢ ನಂಬಿಕೆಯ ವೈದಿಕ ಧರ್ಮದಿಂದ ಬಸವ ಭಕ್ತರು ದೂರ ಇರಬೇಕೆಂದು ಕುಂಬಳಗೂಡು ಮಠ ಪೀಠಾಧ್ಯಕ್ಷ ಡಾ.ಶ್ರೀಚೆನ್ನಬಸವಾನಂದ ಸ್ವಾಮೀಜಿ ಸಲಹೆ ನೀಡಿದರು,
ಶ್ರೀರಂಗಪಟ್ಟಣದ ಸಂಗಮೇಶ್ವರ ದೇವಾಲಯದ ಅವರಣದಲ್ಲಿ ಬಸವ ತತ್ವದ ಜನಜಾಗೃತಿ ಸಂಘಟನೆಗಳು ಆಯೋಜಿಸಿದ್ದ ಬಸವ ತತ್ವಗಳ ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಬಸವಣ್ಣನವರು ಗಂಡು ಹೆಣ್ಣು ಎಂಬ ಭೇದವಿಲ್ಲದೆ ಸಮಾನತೆಯನ್ನು ಜಾತಿ ಧರ್ಮ ವರ್ಗ ರಹಿತವಾದ ಸಮಾಜವನ್ನು ನಿರ್ಮಿಸಿದವರು, ತುಳಿತಕ್ಕೆ ಒಳಗಾದ ಜನರನ್ನ ಮೇಲೆತ್ತುವ ಕೆಲಸವನ್ನು 12ನೇ ಶತಮಾನದಲ್ಲಿ ಮಾಡಿದರು ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು ಎಂದು ಸ್ಮರಿಸಿದರು.

ಬಸವಣ್ಣ ಬಸವಾದಿ ಶರಣರ, ಆದರ್ಶಗಳನ್ನ ಎಲ್ಲರೂ ಪಾಲನೆ ಮಾಡಬೇಕು, ದೇವನೊಬ್ಬ ನಾಮ ಹಲವು ಎಂಬ ಮಾತಿನಂತೆ 330 ಕೋಟಿ ದೇವರನ್ನ ಪೂಜಿಸುವ ಬದಲು ವಿಶ್ವ ಆಕಾರವಾಗಿರುವ ಸೃಷ್ಟಿಕರ್ತ, ಲಿಂಗ ದೇವನನ್ನ ಪೂಜಿಸಬೇಕು. ಲಿಂಗ ಯೋಗವನ್ನ ಮಾಡುವುದರಿಂದ, ಸರ್ವ ಶಕ್ತಿಯು ದೊರೆಯುತ್ತದೆ, ಲಿಂಗಮಧ್ಯ ಜಗತ್ತು ಸರ್ವಂ ಎಂಬಂತೆ ಇಷ್ಟಲಿಂಗ ಪೂಜೆಯಿಂದ ವಿಶ್ವದ ಎಲ್ಲಾ ಚರಾ ಸ್ಥಿರ ವಸ್ತುಗಳನ್ನ ಬ್ರಹ್ಮಾಂಡವನ್ನೇ ಪೂಜೆ ಮಾಡಿದ ಫಲ ನಿಮ್ಮದಾಗುತ್ತದೆ ಎಂದು ಇಷ್ಟಲಿಂಗ ಪೂಜೆಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದರು.
ಕಾಗೆಯನ್ನು ಏಕೆ ಮನೆಯೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ ?
ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದಾಗ 11 ದಿನದ ಪಿಂಡ ಇಟ್ಟಾಗ ಕಾಗೆ ಬಂದು ತಿನ್ನಬೇಕು ಎನ್ನುವ ಸಂಪ್ರದಾಯದವರು, ಪಿಂಡ ತಿನ್ನುವ ಕಾಗೆ ಅಜ್ಜ ಅಜ್ಜಿ, ತಂದೆಯಾದರೆ ಕಾಗೆಯನ್ನ ಮನೆ ಒಳಗೆ ಏಕೆ ಬಿಟ್ಟು ಕೊಳ್ಳುವುದಿಲ್ಲ? ಮನೆ ಒಳಗೆ ಬಂದರೆ ದೋಷವೆಂದು ವೈದಿಕರು ನಂಬಿಸಿದ್ದಾರೆ, ಮೂಢನಂಬಿಕೆಯಿಂದ ಜನರು ಹೊರ ಬರಬೇಕೆಂದು ತಿಳಿಸಿದರು.

ಈಗಿನ ಅನೇಕ ಸ್ವಾಮೀಜಿಗಳು ಪುರೋಹಿತರ, ರೀತಿ ವೈದಿಕ ಧರ್ಮವನ್ನು ಹಿಡಿದುಕೊಂಡು ಶಾಸ್ತ್ರ ಹೋಮ ಹವನ ಮಾಡಿಕೊಂಡು ಧರ್ಮದ ಮಹತ್ವವನ್ನ ಮರೆತಿದ್ದಾರೆ, ಬಸವಾದಿ ಶರಣರ ವಿಚಾರಗಳನ್ನ ಜನತೆಗೆ ಮುಟ್ಟಿಸುವಲ್ಲಿ ವಿಫಲರಾಗುತ್ತಿದ್ದಾರೆ ಇದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು. ಇವನ್ಯಾರವ ಇವನ್ಯಾರವ ಇವ ನಮ್ಮವನಿಂದೆನಿಸಿಯ… ಎಂಬ ಅಣ್ಣನವರ ವಚನದಂತೆ ಎಲ್ಲಾ ಧರ್ಮಿಯರ ಜೊತೆ ಸ್ನೇಹ ಬಾಳ್ವೆಯಿಂದ ಬದುಕು ಕಟ್ಟಿಕೊಳ್ಳಬೇಕು ಎಂಬುದನ್ನು ಸಾರಿ ಹೇಳುತ್ತದೆ ಎಂದರು.
ಶರಣ ಕ್ಷೇತ್ರ ಯಡಿಯೂರು ಸಿದ್ದಲಿಂಗೇಶ್ವರ ಶ್ರೀಕ್ಷೇತ್ರದಿಂದ ಬಸವ ಜ್ಯೋತಿಯು ಶ್ರೀರಂಗಪಟ್ಟಣಕ್ಕೆ ಬಂದಾಗ ಲಿಂಗಾಯಿತ ಮಹಾಸಭಾ ಬಸವ ಜನ ಜಾಗೃತಿ ಸಂಘಟನೆ ಹಾಗೂ ಬಸವ ಫೌಂಡೇಶನ್ ಜಗಜ್ಯೋತಿ ಬಸವೇಶ್ವರ ಸಂಘಟನೆ ಪದಾಧಿಕಾರಿಗಳು ಬಸವ ಭಕ್ತರು ಸ್ವಾಗತ ಮಾಡಿದರು.
ಈ ಸಂದರ್ಭದಲ್ಲಿ ಕಾಯಕಯೋಗಿ ಬಸವ ಫೌಂಡೇಶನ್ ಅಧ್ಯಕ್ಷ ಎಂ ಶಿವಕುಮಾರ್, ಲಿಂಗಾಯತ ಮಹಾಸಭಾ ಟೆಸ್ಟ್ ಅಧ್ಯಕ್ಷ ಎಂ ಬೆಟ್ಟಹಳ್ಳಿ ಎಂ ಎಸ್ ಮಂಜುನಾಥ್, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ವಿ ಎಂ.ಜಗದೀಶ್, ಅರ್ಪಣ, ಮರಿಬಸವಯ್ಯ, ಸೋಮಶೇಖರ್, ಪ್ರದೀಪ್ ಕುಮಾರ್, ಮಲ್ಲುಸ್ವಾಮಿ, ಪರಶಿವಮೂರ್ತಿ, ವೀಣಾ ಕಾಶೀನಾಥ್, ಪೂರ್ಣಿಮಾ ಮತ್ತಿತರರು ಭಾಗವಹಿಸಿದ್ದರು.




