Friday, October 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜನತೆ ನೆನೆಯುವ ರೀತಿಯಲ್ಲಿ ಕಾರ್ಯನಿರ್ವಹಿಸಿ : ಡಾ.ಹೆಚ್. ಕೃಷ್ಣ

ಸರ್ಕಾರಿ ಇಲಾಖೆಯಲ್ಲಿ ಸೇವೆ ಮಾಡಲು ಅವಕಾಶ ಸಿಗುವುದು ಕೆಲವರಿಗೆ ಮಾತ್ರ‌. ಅಧಿಕಾರಿಗಳು ಶ್ರಮವಹಿಸಿ ಮಂಡ್ಯದ ಜನರು ನೆನೆಯುವ ರೀತಿಯಲ್ಲಿ ಕೆಲಸ ನಿರ್ವಹಿಸಿ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್ ಕೃಷ್ಣ ಅಧಿಕಾರಿಗಳಿಗೆ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗೊಂಡಿದ್ದ ಪ್ರವಾಸದ ಬಗ್ಗೆ ಸಭೆ ನಡೆಸಿ ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ಹಣವು ಅಗತ್ಯವಾಗಿದೆ. ಹಣವನ್ನು ನ್ಯಾಯಯುತವಾಗಿ ದುಡಿದು ಸಂಪಾದಿಸಬೇಕು. ಯಾವುದೇ ಅಧಿಕಾರಿಗಳು ಹಣದ ದೃಷ್ಟಿಯಿಂದ ಕೆಲಸ ಮಾಡದೆ, ಸಾರ್ವಜನಿಕರ ಹಿತದೃಷ್ಠಿಯಿಂದ ಕೆಲಸ ಮಾಡಿ. . ಸತತ ಪ್ರಯತ್ನ ಹಾಗೂ ಪ್ರಾಮಾಣಿಕ ಕೆಲಸಗಳಿಂದ ಯಶಸ್ಸು ದೊರೆಯುವುದರಿಂದ ಎಲ್ಲರೂ ಪ್ರಾಮಾಣಿಕ ದೃಷ್ಟಿಯಿಂದ ಕೆಲಸ ನಿರ್ವಹಿಸಿ. ಮುಂದಿನ ದಿನಗಳಲ್ಲಿ ಭೇಟಿ ನೀಡಿದಾಗ ಸಣ್ಣ ಪುಟ್ಟ ತೊಂದರೆಗಳನ್ನು ಸರಿಪಡಿಸಿಕೊಳ್ಳಿ ಎಂದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ- 2013 ದೇಶದ ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗಿದೆ. ಜಾರ್ಖಂಡ್, ಪಂಜಾಬ್, ಆಂಧ್ರಪ್ರದೇಶ ರಾಜ್ಯಗಳಲ್ಲಿ ಶೇಕಡ 100% ರಷ್ಟು ಜಾರಿಯಾಗಿದ್ದು, ನಮ್ಮ ಕರ್ನಾಟಕ ರಾಜ್ಯದಲ್ಲಿ ಶೇಕಡಾ 90% ರಷ್ಟು ಜಾರಿಯಲ್ಲಿದೆ. ನಮ್ಮ ರಾಜ್ಯದಲ್ಲೂ ಕೂಡ 100% ಶೇಕಡಾ ರಷ್ಟು ಜಾರಿಯಾಗಲು ಪ್ರತಿಯೊಬ್ಬರ ಸಹಕಾರವು ಮುಖ್ಯವಾಗಿದೆ ಎಂದರು.

ವಿಸ್ತೃತ ವರದಿ

ಅಕ್ಟೋಬರ್ 22 ರಿಂದ 24 ರವರೆಗೆ ವಿವಿಧ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡು ಆಸ್ಪತ್ರೆ, ಚಿನ್ನದ ಅಂಗಡಿ, ವಸತಿ ಶಾಲೆಗಳು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಂಡುಬಂದ ನ್ಯೂನತೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿಸ್ತೃತ ವರದಿ ಸಲ್ಲಿಸಲಾಗಿದೆ ಎಂದರು‌‌

ಅನುಪಾಲನಾ ವರದಿ ಸಲ್ಲಿಸಿ

ಜಿಲ್ಲಾಧಿಕಾರಿ ಡಾ ಕುಮಾರ ಮಾತನಾಡಿ, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್ ಕೃಷ್ಣ ಅವರು ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು ವಿವಿಧ ಕಚೇರಿ, ಆಸ್ಪತ್ರೆ, ಪೆಟ್ರೋಲ್ ಬಂಕ್, ವಿದ್ಯಾರ್ಥಿ ನಿಲಯ, ಚಿನ್ನದ ಅಂಗಡಿ, ಅಕ್ಕಿ ಗಿರಣಿ, ಅಂಗನವಾಡಿ ಕೇಂದ್ರ, ಶಾಲಾ ಹಾಗೂ ಇನ್ನಿತರೆ ಭೇಟಿ ನೀಡಿ ಸಂಬಂಧಿಸಿದ ಅಧಿಕೃತ ವರದಿಯನ್ನು ನೀಡಿಲಾಗಿದೆ. ವರದಿಯ ಮೇರೆಗೆ ಎಲ್ಲಾ ಅಧಿಕಾರಿಗಳು ಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಆಯೋಗಕ್ಕೆ ನೀಡಬೇಕು ಎಂದರು.

ಎಲ್ಲಾ ಅಧಿಕಾರಿಗಳು ನಿಮ್ಮ ವ್ಯಾಪ್ತಿಗೆ ಸಂಬಂಧಿಸಿದ ಕೆಳಹಂತದ ಅಧಿಕಾರಿ ನೌಕರರುಗಳಿಗೆ ಸರಿಯಾದ ನಿರ್ದೇಶನ ನೀಡಿ ಉತ್ತಮ ಕೆಲಸವಾಗಬೇಕು ಎಂದರು.

ಪ್ರತಿಯೊಂದು ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಆಹಾರ ನೀಡುವುದು ಎಷ್ಟು ಮುಖ್ಯವೋ ಮೂಲಭೂತ ಸೌಕರ್ಯ ನೀಡಿ ಉತ್ತಮ ವಾತಾವರಣ ಕಲ್ಪಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.

ಮಿಮ್ಸ್ ನಲ್ಲಿ ಬಹಳ ತೊಂದರೆಗಳು ಇರುವುದು ಕಂಡುಬಂದಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಉತ್ತಮ ಗುಣಮಟ್ಟದ ಆಹಾರ ನೀಡುವುದು ಅದಕ್ಕಿಂತ ಮುಖ್ಯ. ರೋಗಿಗಳಿಗೆ ಸರಿಯಾದ ಆಹಾರ ವಿತರಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರುಗಳು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಭೇಟಿ ನೀಡಿ ಜಿಲ್ಲೆಯಲ್ಲಿರುವ ನ್ಯೂನ್ಯತೆಗಳನ್ನು ಕಂಡುಹಿಡಿದು ಪರಿಶೀಲನೆ ನಡೆಸಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ಬಿ ವಿ ನಂದೀಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!