ವಿದ್ಯೆ ಮತ್ತು ಜ್ಞಾನ ಕೇವಲ ಒಬ್ಬರಿಗೆ ಮಾತ್ರ ಸೀಮಿತವಾದ ಆಸ್ತಿಯಲ್ಲ, ಪರಿಶ್ರಮವಿರುವ ಪ್ರತಿಯೊಬ್ಬರಿಗೂ ದೊರೆಯುವ ಆಸ್ತಿ. ವಿದ್ಯೆ ಮತ್ತು ಜ್ಞಾನದ ಮೂಲಕ ಪ್ರತಿಯೊಬ್ಬರೂ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎ.ಡಿ.ಆರ್. ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳು
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದ ಫಲಾನುಭವಿಗಳಿಗೆ ಹಲವಾರು ಸೌಲಭ್ಯಗಳು ಸಿಗಲಿವೆ. ಪಿಂಚಿಣಿ ಸೌಲಭ್ಯದಡಿಯಲ್ಲಿ ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ರೂ 3,000 ನೀಡಲಾಗುವುದು.
ಕುಟುಂಬ ಪಿಂಚಣಿ ಸೌಲಭ್ಯದಡಿ ಮೃತ ಪಿಂಚಣಿದಾರರ ಪತಿ,ಪತ್ನಿಗೆ ಮಾಸಿಕ ರೂ.1000, ಟ್ರೈನಿಂಗ್ ಕಮ್ ಟೂಲ್ ಕಿಟ್ ಸೌಲಭ್ಯದಡಿ ರೂ.20,000ವರೆಗೆ ಸಹಾಯಧನ, ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್)ದಡಿ ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ರೂ.50,000
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಯೋಜನೆಯಡಿ ನೋಂದಾಯಿತ ಫಲಾನುಭವಿಯ ಮಕ್ಕಳಿಗೆ ಯುಪಿಎಸ್ ಸಿ, ಕೆಪಿಎಸ್ ಸಿ ಪರೀಕ್ಷಾ ತರಬೇತಿ ಸೌಲಭ್ಯ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಮದುವೆ ಸಹಾಯಧನ, ತಾಯಿ ಮಗು ಸಹಾಯ ಹಸ್ತ, ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುರ್ಚಿ, ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾಲಯ ಯೋಜನೆಗಳು ಲಭ್ಯವಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯಿಂದ 19 ಕ್ಕೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಾರ್ಮಿಕರು ಮೊದಲು ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮನೆಯಲ್ಲಿ ಬಡತನವಿದೆ ಎಂದು ತಾವು ಮಾಡುತ್ತಿರುವ ವೃತ್ತಿಯಲ್ಲೇ ಮಕ್ಕಳನ್ನು ತೊಡಗಿಸಿಕೊಳ್ಳುವ ಪ್ರವೃತ್ತಿ ಬಹಳಷ್ಟು ಕಾರ್ಮಿಕರಲ್ಲಿ ಇರುತ್ತದೆ. ಈ ಪ್ರವೃತ್ತಿಯಿಂದ ದೂರವಿರಿ, ಕಾರ್ಮಿಕ ಇಲಾಖೆಯಲ್ಲಿ ಅನುದಾನ ಹಾಗೂ ಸೌಲಭ್ಯಗಳ ಕೊರತೆ ಇಲ್ಲ. ಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ, ಅವರನ್ನು ಉನ್ನತ ಅಧಿಕಾರಿಗಳನ್ನಾಗಿ ಮಾಡಲು ಶ್ರಮಿಸಬೇಕು. ಇಂದಿನ ದಿನಗಳಲ್ಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಬಡತನದಲ್ಲಿರುವ ಮಕ್ಕಳು ಸಹ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿರುವ ಉದಾಹರಣೆಗಳು ತಮ್ಮ ಮುಂದೆ ಇದೆ. ಇವರುಗಳು ನಿಮಗೆ ಮಾದರಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್ ಅವರು ಮಾತನಾಡಿ ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಗೊಳಿಸಿ ಘನತೆಯುಕ್ತ ಬದುಕು ನಡೆಸಬೇಕು, ದುಡಿಯುವ ವ್ಯಕ್ತಿಗಳನ್ನು ಗೌರವಿಸಬೇಕು ಎಂದು ಬಾಬು ಜಗಜೀವನ್ ರಾಂ, ಡಾ.ಬಾಬಾ ಸಹೇಬ್ ಅಂಬೇಡ್ಕರ್ ಅವರು ಕಾರ್ಮಿಕ ಸಂಘಟನೆಗಳನ್ನು ರಚಿಸಿದರು. ದುಡಿಯುವ ವರ್ಗವೇ ದೇಶಕ್ಕೆ ಸಂಪನ್ಮೂಲ ಎಂದು ಕಾರ್ಮಿಕ ವರ್ಗಕ್ಕೆ ವಿಶೇಷ ಪ್ರಾತಿನಿದ್ಯ ನೀಡಲಾಯಿತು ಎಂದರು.
ಇಂದು ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಬಹಳಷ್ಟು ಅಧಿಕಾರಿಗಳು ಕಾರ್ಮಿಕ ಹಾಗೂ ಬಡ ಕುಟುಂಬದಿಂದ ಬಂದವರು. ವಿದ್ಯೆ ಪ್ರತಿಯೊಬ್ಬರ ಬಳಿ ಬರುತ್ತದೆ, ಶ್ರಮದಿಂದ ಅಭ್ಯಾಸ ಮಾಡುವವರ ಬಳಿ ಉಳಿದು ಬೆಳೆಯುತ್ತದೆ. ಬಾಬಾ ಸಹೇಬ್ ಅಂಬೇಡ್ಕರ್ ಅವರು ಸಹ ಬಡತನದಿಂದ ಬಂದವರು. ಅವರು ಮಾಡಿರುವ ಸಾಧನೆಗಳು ವಿಶ್ವಕ್ಕೇ ಮಾದರಿ. ಬಡತನದಿಂದ ನಾನೂ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ ಎಂದು ಯಾರೂ ಸಹ ಹೇಳಬಾರದು. ಇಂದು ಸರ್ಕಾರ ನೀಡಿರುವ ಯೋಜನೆಗಳನ್ನು ಉಪಯೋಗಿಸಿಕೊಳ್ಳಿ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಎ.ಎಂ ನಳಿನಿ ಕುಮಾರಿ ಮಾತನಾಡಿ, ಬಡತನದಲ್ಲಿ ವಿದ್ಯಾಭ್ಯಾಸ ನಡೆಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಇತರರಿಗೆ ಸದಾ ಮಾದರಿಯಾಗಿರುತ್ತಾರೆ. ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ನಡೆಸಿ ಉನ್ನತ ಸ್ಥಾನವನ್ನು ಅಲಂಕರಿಸಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಂ ಮಂಜುಳಾದೇವಿ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಎಸೆಸ್ಸೆಲ್ಸಿಯಲ್ಲಿ ಬಾಲ ಕಾರ್ಮಿಕನ ಉತ್ತಮ ಸಾಧನೆ
ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಎಂ (15) ಬಾಲ ಕಾರ್ಮಿಕನನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಶ್ರೀರಂಗಪಟ್ಟಣ ಸರ್ಕಾರಿ ಬಾಲಕರ ಶಾಲೆಗೆ ದಾಖಲಿಸಿದ್ದರು, ಆತನ 10 ನೇ ತರಗತಿ ವಿದ್ಯಾಭ್ಯಾಸಕ್ಕಾಗಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ74 ಅಂಕಗಳನ್ನು ಗಳಿಸಿ ಸಂತೋಷ್ ಉತ್ತೀರ್ಣನಾಗಿದ್ದು, ಆತನನ್ನು ಇಂದು ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಗೌರವಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಸಂತೋಷ್ ತನಗೆ ನೀಡಿರುವ ಸೌಲಭ್ಯದಿಂದ ಮುಂದಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸ ನಡೆಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದನು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಟಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಾರ್ತಾಧಿಕಾರಿ ಎಸ್.ಹೆಚ್ ನಿರ್ಮಲ ಹಾಜರಿದ್ದರು.




