Friday, November 20, 2026

ಪ್ರಾಯೋಗಿಕ ಆವೃತ್ತಿ

ಹೊಸ ಸೇರ್ಪಡೆ ಮತದಾರರಿಗೆ ಅಂಚೆ ಮೂಲಕ ಗುರುತಿನ ಚೀಟಿ : ಡಾ.ಹೆಚ್.ಎನ್ ಗೋಪಾಲಕೃಷ್ಣ

2022 ನವೆಂಬರ್ 15ರ ನಂತರ ಹೊಸದಾಗಿ ಸೇರ್ಪಡೆಯಾಗಿರುವ 66,981 ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಒದಗಿಸಿದ್ದು, ಈ ಪೈಕಿ 53,656 ಗುರುತಿನ ಚೀಟಿ ಸರಬರಾಜಾಗಿದ್ದು, ಗುರುತಿನ ಚೀಟಿಯನ್ನು ಅಂಚೆ ಮೂಲಕ ವಿತರಿಸಲು ಕ್ರಮವಹಿಸಲಾಗಿದೆ, ವಿಳಂಬವಾದ ಮತದಾರರು ತಮ್ಮ ವ್ಯಾಪ್ತಿಯ ಅಂಚೆ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 10 ರೊಳಗೆ ಅರ್ಹ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೆ ನಮೂನೆ 6 ಅಥವಾ ಆಲ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದರೆ 7 ದಿನಗಳೊಳಗೆ ಮತದಾರರ ಗುರುತಿನ ಚೀಟಿ ಅಂಚೆ ಮೂಲಕ ನಿಮ್ಮ ಮನೆಗೆ ಬರಲಿದೆ ಎಂದು ಮಾಹಿತಿ ನೀಡಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಡ್ಯ ಜಿಲ್ಲಾ ವ್ಯಾಪ್ತಿಯಾದ್ಯಾಂತ ಒಟ್ಟು 14 PINK ಮತಗಟ್ಟೆ, 7 PWD ಮತಗಟ್ಟೆ, 35 ETHNIC ಮತಗಟ್ಟೆ, 14 YOUNG EMPLOYEE MANAGED ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು.

7 ಮಂದಿ ಗಡಿಪಾರು 

ಜಿಲ್ಲೆಯಲ್ಲಿ ಇದುವರೆವಿಗೂ 7 ಮಂದಿಯನ್ನು ಗಡಿಪಾರು ಮಾಡಲಾಗಿದೆ ಹಾಗೂ 667 ಆಯುಧಗಳನ್ನು ಠಾಣಾ ಸುಪರ್ದಿಗೆ ಪಡೆಯಲಾಗಿದೆ. ಎಲ್ಲಾ ಚೆಕ್ ಪೋಸ್ಟ್ ಗಳಿಗೆ ವೆಬ್ ಕಾಸ್ಟಿಂಗ್ ಅಳವಡಿಸಲಾಗಿದ್ದು, ಅಗತ್ಯ ಇರುವ ಕಡೆ CAPF ತಂಡದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ಘೋಷಣೆಯಾದ ನಂತರ ಮಾರ್ಚ್ 29 ರಿಂದ ಏಪ್ರಿಲ್ 10 ರವರೆಗೆ ವಶಪಡಿಸಿಕೊಳ್ಳಲಾದ ನಗದು ರೂ.37,71,600, ಮದ್ಯ 19,190.02 ಲೀಟರ್, ಇವುಗಳ ಒಟ್ಟು ಮೌಲ್ಯ ರೂ. 49,68,072, ಡ್ರಗ್ಸ್ 0.555ಗ್ರಾಂ ಒಟ್ಟು ಮೌಲ್ಯ ರೂ.5,550 ಹಾಗೂ ಇತರೆ ಪದಾರ್ಥಗಳು 22,009 ಮೌಲ್ಯ ರೂ 25,08,170 ಒಟ್ಟಾರೆ ಮೇಲ್ಕಂಡ ನಗದು ಹಾಗೂ ವಸ್ತುಗಳ ಮೌಲ್ಯವು ರೂ.1,12,53,392 ಆಗಿರುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 80ವರ್ಷ ಮೇಲ್ಪಟ್ಟ 37,414 ಹಾಗೂ ವಿಶೇಷ ಚೇತನರು 23,110 ಅಂಗವಿಕಲ ಮತದಾರರಿಗೆ 80ವರ್ಷ ಮೇಲ್ಪಟ್ಟ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ 12ಡಿ ನಮೂನೆಯನ್ನು ವಿತರಣೆ ಮಾಡಲಾಗುತ್ತಿದ್ದು, ಇವರೆಗೂ 60524 ನಮೂನೆ 12 ಡಿ ಯನ್ನು ವಿತರಣೆ ಮಾಡಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿಯೂ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಮತಗಟ್ಟೆ ಹೆಸರು, ಮತಗಟ್ಟೆ ವಿಳಾಸ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಯ ವಿಳಾಸವನ್ನು ಮತದಾನ ಕೇಂದ್ರದಲ್ಲಿ ನಮೂದಿಸಲು ನಿರ್ದೇಶನ ನೀಡಲಾಗಿದ್ದು ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 1798 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಗೂ 01 ಅಧಕ್ಷ ಅಧಿಕಾರಿ ಮತ್ತು 03 ಮತದಾನ ಅಧಿಕಾರಿಗಳು ಸೇರಿದಂತೆ ಒಟ್ಟು 8648 ಅಧಿಕಾರಿ/ ಸಿಬ್ಬಂದಿಗಳನ್ನು ವಿಧಾನಸಭಾ ಕ್ಷೇತ್ರವಾರು ನೇಮಕಾತಿ ಮಾಡಲಾಗಿದೆ. ಅಧಿಕಾರಿಗಳಿಗೆ ಏಪ್ರಿಲ್ 18 ರಂದು ಪ್ರಥಮ ಹಂತದ ತರಬೇತಿಯನ್ನು (ಚುನಾವಣಾ ಪ್ರಕ್ರಿಯೆ ಹಾಗೂ ಇ.ವಿ.ಎಂ. ಮತಯಂತ್ರಗಳ ಬಳಕೆ) ವಿವಿಧ ಕಾಲೇಜುಗಳಲ್ಲಿ ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಜಿ.ಪಂ. ಉಪ ಕಾರ್ಯದರ್ಶಿ ಎಂ.ಬಾಬು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ