ಮಂಡ್ಯ ಜಿಲ್ಲೆಯ ಎಂಡಿಸಿಸಿ ಬ್ಯಾಂಕ್ನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ ಎಂಬ ನನ್ನ ಹೇಳಿಕೆ ವಿರುದ್ದ ದೂರು ದಾಖಲಿಸಲು ಕಾಂಗ್ರೆಸ್ ಪಕ್ಷದ ಅಮಾಯಕರನ್ನು ಬಳಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಡಾ.ಹೆಚ್.ಎನ್.ರವೀಂದ್ರ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಬೆಳವಣಿಗೆಗಳು ನಡೆದರೂ ಅದಕ್ಕೆ ಪತ್ಯಕ್ಷ ಅಥವಾ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆಯಾಗಲಿದ್ದು, ಅದನ್ನು ಎಚ್ಚರಿಸಿದ್ದಕ್ಕೆ ಸಚಿವರಿಗೆ ಮಾನಹಾನಿಯಾಗಿದೆ, ತೇಜೋವಧೆಯಾಗಿದೆ ಎಂದು ನನ್ನ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದರು.
ಮಂಡ್ಯ ಜಿಲ್ಲೆಯ ಎಂಡಿಸಿಸಿ ಬ್ಯಾಂಕ್ನ 61 ಶಾಖೆಗಳಲ್ಲಿ 417 ಜನ ನೌಕರರಿದ್ದು, ಅವರಿಗೆ ದೊರೆಯಬೇಕಿದ್ದ 13 ತಿಂಗಳ ವೇತನದ ಅರಿಯರ್ಸ್ ಹಣ ಪಡೆಯಲು 9 ತಿಂಗಳ ಅರಿಯರ್ಸ್ ಹಣ ಲಂಚವಾಗಿ ನೀಡಬೇಕೆಂಬ ವಿಷಯ ಬೆಳಕಿಗೆ ಬಂದಿದ್ದು, ಲಂಚದ ಮೊತ್ತ 2.73 ಕೋಟಿ ರೂ.ಗೆ ಆಗಲಿದೆ ಎಂದರು.
ಎಂಡಿಸಿಸಿ ಬ್ಯಾಂಕ್ನಲ್ಲಿ ಇದೂ ಸಾಲದು ಎಂಬಂತೆ ತಾಂತ್ರಿಕತೆಯನ್ನು ಹೆಚಿಸಿದ್ದು, ಈ ಸನ್ನಿವೇಶದಲ್ಲಿ ನೌಕರರನ್ನು ಕಡಿಮೆ ಮಾಡುವ ಅಥವಾ ಇರುವ ನೌಕರರಿಂದಲೇ ಸಂಸ್ಥೆ ನಡೆಸುವ ಸನ್ನಿವೇಶ ಎದುರಲಾಗಲಿರುವ ಸಂದರ್ಭದಲ್ಲಿ ಮತ್ತೇ 93 ಮಂದಿಯ ನೇಮಕಾತಿಗೆ ಕರೆ ನೀಡಿದ್ದು, ಇದಕ್ಕೂ ಲಕ್ಷ ಲಕ್ಷ ಹಣ ಲಪಟಾಯಿಸುವ ಹುನ್ನಾರ ನಡೆಸಲಾಗಿದೆ ಎಂದು ದೂರಿದರು.
ಲಂಚ ವಸೂಲಾತಿಗೆ ಪಟ್ಟಿಯನ್ನು ಮಾಡಲಾಗಿದ್ದು, ಲಂಚ ನೀಡಿದವರನ್ನು ಗುರುತಿಸಿಕೊಂಡಿದ್ದು, ಕೊಡದಿದ್ದವರನ್ನು ವರ್ಗ ಮಾಡಿದ ಉದಾಹರಣೆಗಳು ಇವೆ. ಈ ಎಲ್ಲ ವಿಷಯಗಳ ಸಂಬಂಧ ವಿಚಾರಣೆ ಮಾಡುವಂತೆ ಸಹಕಾರಿ ಸಚಿವ ರಾಜಣ್ಣ ಅವರಿಗೆ ನೌಕರರ ಸಂಘವು ಮೌಕಿಕವಾಗಿ ಮನವಿ ಮಾಡಿದ್ದು, ಕ್ರಮ ಕೈಗೊಳ್ಳುವ ನೆಪದಲ್ಲಿ ಇಬ್ಬರನ್ನು ಸೇವೆಯಿಂದ ವಜಾ ಮಾಡಿದ್ದಾರೆ ಎಂದು ಹೇಳಿದರು.
ಈ ಎಲ್ಲ ಬೆಳವಣಿಗೆಗಳ ಮಧ್ಯ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದು, ದಾಖಲೆಗಳ ಮೂಲಕ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ. ದೂರುದಾರನಾಗಿ ನನ್ನ ದೂರು ಸುಳ್ಳಾಗಿದ್ದರೆ ನಾನು ಶಿಕ್ಷೆ ಅನುಭವಿಸಲು ಸಿದ್ದನಿದ್ದೇನೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಜಿಲ್ಲಾ ಉಸ್ತುವಾರಿ ಮಂತ್ರಿ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ, ವಿಚಾರಣೆಗೆ ಒಳಪಡಿಸಬೇಕು. ವಿಚಾರಣೆಯಲ್ಲಿ ಸಾಬೀತಾದರೆ ಸಂಬಂಧಿತರನ್ನು ಜೈಲಿಗೆ ಹಾಕಿ, ತಪ್ಪಿನ ಜವಾಬ್ದಾರಿ ಹೊತ್ತು ಸಚಿವ ಸ್ಥಾನಕ್ಕೆ ಉಸ್ತುವಾರಿ ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಅನಾಹುತಗಳು ಜಿಲ್ಲಾ ಉಸುವಾರಿ ಸಚಿವರ ಮೂಗಿನಡಿಯಲ್ಲಿಯೇ ನಡೆದಿದೆ. ನೀವು ಪಾಲುದಾರರೇ ಎಂಬುದು ತಿಳಿದಿಲ್ಲ, ನಿಮ್ಮ ಶಿಷ್ಯಗಣವೇ ಭಾಗಿಯಾಗಿದ್ದರೆ ಅವರನ್ನು ಬೆಂಬಲಿಸುವುದೇ ಆದರೆ ಜಿಲ್ಲೆಗೆ ಒಳ್ಳೆಯದು ಮಾಡುವಿರೇ ಎಂದು ಪ್ರಶ್ನಿಸಿದರು.
ಎಂಡಿಸಿಸಿ ಬ್ಯಾಂಕ್ನ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸಂಬಂಧಿಸದಂತೆ ಯಾವ ದಿನ, ಯಾವ ಸಮಯದಲ್ಲಿ ಲಂಚದ ಹಣ ಸಂಗ್ರಹಿಸಲಾಗಿದೆ ಎಂಬುದರ ಸಂಬಂಧ ರವೀಂದ್ರ ಅವರೇ ಹೇಳಿಕೆ ನೀಡಿದ ವೀಡಿಯೋ ಹಾಕಿ. ಆಯಾ ದಿನಗಳ ಸಮಯದ ಸಿಸಿಟಿವಿ ಪರಿಶೀಲಿಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂದಿನ ಬುಧವಾರದೊಳಗೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಇದೇ ವೇಳೆ ತಿಳಿಸಿದರು.




