ಮಂಡ್ಯ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಮತ್ತು ಜಿಲ್ಲೆಯು ಏಳು ತಾಲ್ಲೂಕುಗಳ ತಹಶೀಲ್ದಾರ್ ನ್ಯಾಯಲಯಗಳಲ್ಲಿ 2023 ಜೂನ್ ರಿಂದ ನವೆಂಬರ್ ವರೆಗೆ ಒಟ್ಟು 6 ತಿಂಗಳ ಕಾಲಾವಧಿಯಲ್ಲಿ 4269 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಹಳಷ್ಟು ವರ್ಷಗಳಿಂದ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ನ್ಯಾಯಲಯದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ಬಾಕಿ ಇತ್ತು. ಮಾನ್ಯ ಕಂದಾಯ ಸಚಿವರ ನಿರ್ದೇಶನದ ಮೇರೆಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಾರದಲ್ಲಿ ಮೂರು ದಿನ ಹಾಗೂ ತಹಶೀಲ್ದಾರ್ ಅವರ ನ್ಯಾಯಾಲಯದಲ್ಲಿ ಎರಡು ದಿನ ಕಡ್ಡಾಯವಾಗಿ ನ್ಯಾಯಾಲಯ ಪ್ರಕರಣಗಳ ವಿಲೇವಾರಿ ಕೆಲಸ ನಡೆಸಲಾಗುತ್ತಿದೆ.
ಆರ್ ಟಿಸಿ ತಿದ್ದುಪಡಿ
ಮೋಜಿಣಿ, ಆರ್ ಟಿಸಿ ತಿದ್ದುಪಡಿಗೆ ಸಂಬಂಧಿಸಿದಂತೆ ಮೇ ಅಂತ್ಯದವರೆಗೆ 12,787 ಅರ್ಜಿಗಳು ಹಾಗೂ ಜೂನ್ ನಿಂದ ನವೆಂಬರ್ ವರೆಗೆ 5,392 ಒಟ್ಟು 18,179 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳನ್ನು ಪರಿಶೀಲಿಸಿ ಜೂನ್ ನಿಂದ ನವೆಂಬರ್ ವರೆಗೆ 9,821 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 8,358 ಅರ್ಜಿ ಬಾಕಿ ಇದ್ದು, ಇವುಗಳನ್ನು ಸಹ ಶೀಘ್ರದಲ್ಲೇ ವಿಲೇವಾರಿ ಮಾಡುವ ಕೆಲಸ ನಡೆಯುತ್ತಿದೆ ಎಂದರು.
ಈ-ಆಫೀಸ್
ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ ಕಛೇರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಆಗಸ್ಟ್ 15 ರಿಂದ ಈ-ಆಫೀಸ್ ನಲ್ಲಿ ಕಾರ್ಯನಿರ್ವಹಣೆ ಕಡ್ಡಾಯಗೊಳಿಸಲಾಗಿದೆ. ಮಂಡ್ಯ ಹಾಗೂ ಪಾಂಡವಪುರ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಈ-ಆಫೀಸ್ ಮೂಲಕ 1786 ಅರ್ಜಿ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಒಟ್ಟಾರೆ 1680 ಅರ್ಜಿ ವಿಲೇವಾರಿ ಮಾಡಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಕಛೇರಿಯಲ್ಲಿ 2,78,322 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.
ಕಂದಾಯ ಗ್ರಾಮ
ಜಿಲ್ಲೆಯಲ್ಲಿ ಕಂದಾಯ ಗ್ರಾಮವಾಗಿ ಪರಿವರ್ತಿಸಲು 149 ಗ್ರಾಮಗಳಿದ್ದು, 141 ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗಿದೆ. ಉಳಿದ 8 ಗ್ರಾಮಗಳನ್ನು ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ.
ಅಕ್ರಮ ಖಾತೆ ಮಾಡಿ ಜಮೀನು ಮಾರಾಟವನ್ನು ತಡೆಗಟ್ಟಲು ಭೂಮಿ ತಂತ್ರಾಂಶದಲ್ಲಿ ಜಮೀನಿನ ವಿವರವನ್ನು ಪ್ಲಾಗ್ ಮಾಡಲಾಗುತ್ತಿದ್ದು, 3876 ಪಿಟಿಸಿಎಲ್ ಮಾಲೀಕರ ಭೂಮಿ ವಿವರವನ್ನು ಹಾಗೂ 3385 (ಸರ್ಕಾರಿ ಜಾಗ) ನಾನ್ ಪಿಟಿಸಿಎಲ್ ಜಮೀನಿನ ವಿವರವನ್ನು ಭೂಮಿ ತಂತ್ರಾಂಶದಲ್ಲಿ ಫ್ಲಾಗ್ ಮಾಡಲಾಗಿದೆ.
ಹೃದಯ ವೈಶಾಲ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿ ಮಾಡಿದ ನಂತರ ಅಕ್ಟೋಬರ್ ಹಾಗೂ ನವೆಂಬರ್ ಮಾಹೆಯಲ್ಲಿ 1128 ಜನರ ಹೃದಯ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 168 ಜನರಿಗೆ ಹೆಚ್ಚಿನ ತಪಾಸಣೆಗೆ ಒಳಪಡಲು ತಿಳಿಸಲಾಗಿದೆ ಎಂದರು.
ಸಾಮಾಜಿಕ ಭದ್ರತಾ ಯೋಜನೆ ಈ ಯೋಜನೆಯಡಿ ವಿವಿಧ ಸಮಾಜಿಕ ಪಿಂಚಣಿಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಿರುತ್ತದೆ.
ಕಳೆದ ಆರು ತಿಂಗಳಲ್ಲಿ ಸಾಮಾಜಿಕ ಪಿಂಚಣಿ ಯೋಜನೆಯಡಿ 16669 ಫಲಾನುಭವಿಗಳು ಆಧಾರ್ ಸೀಡಿಂಗ್ ಮಾಡದೇ ಇರುವುದು, 5,918 ನೀಷ್ಕಿರ್ಯ ಖಾತೆ, 193 ಆಧಾರ್ ತೊಂದರೆ ಸೇರಿದಂತೆ ಒಟ್ಟು 22780 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ನೇರವಾಗಿ ಫಲಾನುಭವಿಗಳ ಖಾತೆಗೆ ಪಿಂಚಣಿ ಹಣವನ್ನು ಜಮೆ ಮಾಡಲಾಗುತ್ತಿದೆ.
ಜಿಲ್ಲೆಯ ರೈತರು ಬರ ಪರಿಹಾರದ ಹಣವನ್ನು ಪಡೆಯಬೇಕಾದರೆ ತಮ್ಮ ಎಲ್ಲಾ ತಾಕುಗಳನ್ನು ಫ್ರೂಟ್ಸ್ ತಂತ್ರಾಂಶಕ್ಕೆ ಕಡ್ಡಾಯವಾಗಿ ಸೇರ್ಪಡಿಸಿಕೊಳ್ಳಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 17 ಲಕ್ಷ ತಾಕುಗಳು ಲಭ್ಯವಿದ್ದು, ಅದರಲ್ಲಿ 10 ಲಕ್ಷ ತಾಕುಗಳು ಸೇರ್ಪಡೆಯಾಗಿದೆ. ಇನ್ನೂ 7 ಲಕ್ಷ ತಾಕುಗಳು ತಂತ್ರಾಂಶದಲ್ಲಿ ಸೇರ್ಪಡೆಗೊಳಿ ಆಂದೋಲನದ ರೀತಿಯಲ್ಲಿ ಯೋಜನ ರೂಪಿಸಿ ಎಲ್ಲಾ ತಾಕುಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರೈತರು ತಮ್ಮ ತಾಕುಗಳನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸಲು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ , ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆಗಳನ್ನು ಸಂಪರ್ಕಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಉಪಸ್ಥಿತರಿದ್ದರು.




