ಮಂಡ್ಯದಲ್ಲಿ 2024 ಡಿಸೆಂಬರ್ 20, 21 ಮತ್ತು 22 ರಂದು ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖರ್ಚು ಕಡಿತಗೊಳಿಸಿ ಆರ್ಥಿಕ ಸಂಕಷ್ಟದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಲು ನಾಡೋಜ ಡಾ.ಮಹೇಶ ಜೋಶಿ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯವು ಕನ್ನಡದ ಅಸ್ಮಿತೆಯಾಗಿದ್ದು ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೊಳಗಾಗಿರುವ ವಿಚಾರ ಪತ್ರಿಕಾ ವರದಿಯ ಮೂಲಕ ತಿಳಿದು ಖೇದವಾಗಿದೆ ಎಂದು ಬೆಂಗಳೂರು ಕಸಾಪ ಎನ್ನುವ ಫೇಸ್ ಬುಕ್ ಪೇಜ್ ನಲ್ಲಿ ಬರೆದು ಕೊಳ್ಳಲಾಗಿದೆ.
ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರಕದ ಹಿನ್ನೆಲೆಯಲ್ಲಿ ಅವರ ಕಲಿಕೆಯಲ್ಲಿ ಹಿನ್ನಡೆಯಾಗುತ್ತಿರುವುದು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಹಲವು ತಿಂಗಳಿನಿಂದ ವೇತನ ಪಾವತಿಯಾಗದೇ ಇರುವುದು ಬಹಳ ದುಃಖದ ವಿಚಾರವಾಗಿದೆ.
ಸಂಶೋಧನೆಯನ್ನು ಉತ್ತೇಜಿಸಲು ೩೩ ವರ್ಷಗಳ ಹಿಂದೆ ಆರಂಭವಾದ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ ಇದನ್ನು ತಡೆಯಲು ಪ್ರಯತ್ನ ಮಾಡುವುದು ಪರಿಷತ್ತು ಹಾಗೂ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯಗಳಲ್ಲೊಂದಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ೨೦೨೪ ಡಿಸೆಂಬರ್ ೨೦, ೨೧ ಮತ್ತು ೨೨ ರಂದು ನಡೆಯಲಿರುವ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭೋಜನವನ್ನು ಸರಳವಾಗಿ ಏರ್ಪಡಿಸಲು, ಹಾಗೂ ಸಾಧ್ಯವಾದಷ್ಟು ಇನ್ನಿತರ ಖರ್ಚುಗಳನ್ನು ಕಡಿತಗೊಳಿಸಿ ಉಳಿತಾಯ ಮಾಡಿ ಸದರಿ ಮೊತ್ತವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡುವ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಕಷ್ಟದ ಸಮಯದಲ್ಲಿ ಬೆಂಬಲ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕೋಶಾಧಿಕಾರಿಗಳಾದ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪರಿಷತ್ತಿನ ಪರವಾಗಿ ಸಲಹೆ ನೀಡುತ್ತಿದ್ದೇನೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದ್ಧಾರೆ ಎನ್ನಲಾಗಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖರ್ಚುಗಳನ್ನು ಕಡಿತಗೊಳಿಸಿ ಹಂಪಿ ವಿಶ್ವವಿದ್ಯಾಲಯಕ್ಕೆ ಸಹಾಯ ಮಾಡಿದಲ್ಲಿ ಸಮ್ಮೇಳನದ ಆಚರಣೆಯೂ ಅರ್ಥಪೂರ್ಣವಾಗುತ್ತದೆ ಎಂಬ ಭಾವನೆಯಿಂದ ಈ ಸಲಹೆ ನೀಡಲಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಜೋಶಿ ಚಿಂತನೆಗೆ ಆಕ್ರೋಶ
ಸಾಹಿತ್ಯ ಸಮ್ಮೇಳನದ ಖರ್ಚು ಕಡಿತಗೊಳಿಸುವ ಚಿಂತನೆಗೆ ಸಾಹಿತ್ಯ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ, ಮಂಡ್ಯದಲ್ಲಿ ನಡೆಯುವ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಸಂಘಟಿಸಿ ಯಶಸ್ವಿಗೊಳಿಸಬೇಕಾಗಿದೆ. ಆದರೆ ಸಮ್ಮೇಳನಕ್ಕೆ ಬರುವ ಅನುದಾನವನ್ನು ಇನ್ನೇಲಿಗೂ ಬಳಕೆ ಮಾಡಲು ಕಸಾಪ ಅಧ್ಯಕ್ಷರು ಚಿಂತಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಸಾಹಿತ್ಯ ವಲಯದ ಪ್ರಮುಖರೊಬ್ಬರು ಕಿಡಿಕಾರಿದ್ಧಾರೆ. ಜೋಶಿಯವರು ಇಂತಹ ಆಲೋಚನೆಯನ್ನೇ ಮುಂದುವರಿಸಿದ್ದೇ ಆದರೆ ಸಾಹಿತ್ಯಾಸಕ್ತರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.




