ಜೀವರಾಶಿಗಳ ಪೈಕಿ ಎತ್ತರದ ಸ್ಥಾನದಲ್ಲಿರುವ ಮನುಷ್ಯ ಜಗತ್ತಿನ ಸುಖದ ಮೋಹಕ್ಕೆ ಸಿಲುಕಿದ್ದಾನೆ, ಮನುಷ್ಯ ಜೀವಿಯೊಳಗೆ ಇರುವ ಸತ್ಯವನ್ನು ಅರಿಯಲು ಮೋಹವನ್ನು ತ್ಯಜಿಸಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಎಂದರು.
ಮಂಡ್ಯನಗರದ ಕಲ್ಲಹಳ್ಳಿ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಶ್ರೀಮಂಚಮ್ಮ ದೇವರ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ಜರುಗಿದ ಧರ್ಮ ಪ್ರವಚನದ ಸಾನಿಧ್ಯ ವಹಿಸಿ ಅವರು ಆಶೀರ್ವದಿಸಿದರು.
ಜಗತ್ತಿನ ಹಲವು ಜೀವರಾಶಿಗಳ ಪೈಕಿ ಮನುಷ್ಯನನ್ನು ಹೊರತುಪಡಿಸಿ ಉಳಿದ ಜೀವಿಗಳ ದೇಹಗಳು ಭೋಗಕ್ಕೋಸ್ಕರ ಜೀವನ ನಡೆಸುತ್ತದೆ. ಅದು ಅಜ್ಞಾನದ ಫಲ, ಹಲವು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯನ ಜೀವ ಸೃಷ್ಠಿ ವಿಕಾಸದ ಪ್ರಕ್ರಿಯೆ ಹಾಗೂ ವಿಜ್ಞಾನದ ವಿಕಾಸದ ಪ್ರಕ್ರಿಯೆಯಲ್ಲಿ ಉನ್ನತ ಹಂತ ತಲುಪಿದೆ. ಇದು ಹಲವು ಜನ್ಮಗಳ ಪುಣ್ಯವನ್ನು ಅಡವಿಟ್ಟು ಪಡೆದಿರುವ ಫಲವಾಗಿದೆ ಎಂದು ವಿವರಿಸಿದರು.
ಮನುಷ್ಯ ಅಲ್ಪ ಗುರಿ ಮತ್ತು ಸಾಧನೆಗೆ ತೃಪ್ತಿ ಹೊಂದದೇ ಉನ್ನತ ಗುರಿ ಮತ್ತು ಸಾಧನೆಯ ಹಂಬಲ ಹೊಂದಬೇಕು. ಚಿನ್ನಕ್ಕಿಂತ ವಜ್ರ ಶ್ರೇಷ್ಠವೆಂಬ ಅರಿವಿನಂತೆ ನಮ್ಮ ಶ್ರದ್ಧೆ ಮತ್ತು ಗುರು ಉನ್ನತವಾಗಿರಬೇಕೆಂದರು.
ನಮ್ಮ ಬದುಕು ಚೆನ್ನಾಗಿರಲು ಗಾಳಿ, ನೀರು, ಬೆಳಕು, ಆಹಾರ ನೀಡಿರುವ ದೇವರಿಗೆ ಧನ್ಯವಾದ ಹೇಳಿದರೆ ಮತ್ತಷ್ಟನ್ನು ಕರುಣಿಸುತ್ತಾನೆ ಎಂಬ ಭಾವನೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಸಂಪತ್ತು ಮತ್ತು ಜ್ಞಾನ ಬಂದ ವೇಳೆ ಅಹಂಕಾರ ಬಂದರೆ ಕೃತಜ್ಞರಾದರೆ, ಜ್ಞಾನಿಯಾಗದಿದ್ದರೆ ಭಗವಂತ ಮನಸ್ಸು ಹಾಗೂ ಬುದ್ದಿಯನ್ನು ಕೆಡಿಸುತ್ತಾನೆಂಬ ಅರಿವು ನಮ್ಮೆಲ್ಲರಿಗಿರಬೇಕೆಂದರು.
ಕಲ್ಲಹಳ್ಳಿ ಗ್ರಾಮಸ್ಥರು ನೂತನವಾಗಿ ಶ್ರೀ ಮಂಚಮ್ಮ ದೇವಿ ದೇವಾಲಯ ನಿರ್ಮಾಣ ಮಾಡಿ ಲೋಕಾರ್ಪಣೆಗೊಂಡ ನಂತರ 48 ದಿನಗಳ ಕಾಲ ಮಂಡಲ ಪೂಜೆ ನೆರವೇರಿಸಿದ್ದೀರಿ, ಅದೇ ರೀತಿ ದೇವಿಯ ಮುಂದೆ ಮನಸ್ಸನ್ನು ಶುದ್ದಗೊಳಿಸುವ ರೀತಿಯಲ್ಲಿ ಜೀವನ ನಡೆಸಬೇಕು. ನಮ್ಮ ಮನಸ್ಸಿನಲ್ಲಿರುವ ಹಲವು ಆಲೋಚನೆಗಳನ್ನು ನಿಯಂತ್ರಿಸಿ ಮನಸ್ಸನ್ನು ಶುದ್ದವಾಗಿಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಶ್ರೀ ಮಠದ ಸಾಯಿ ಕೀರ್ತಿಜೀ ಮತ್ತು ಶಿವಾರ ಉಮೇಶ್ ತಂಡದವರಿಂದ ಭಕ್ತಿಗೀತೆಗಳನ್ನು ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ ಗೌಡ, ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ರವಿ, ಶಿವಲಿಂಗು, ಪತ್ರಕರ್ತರಾದ ಕೆ.ಸಿ.ಮಂಜುನಾಥ್, ಸಿ.ಎನ್.ಮಂಜುನಾಥ್, ಗ್ರಾಮದ ಮುಖಂಡ ಕೆ.ಗುರುಸ್ವಾಮಿ, ಶ್ರೀಮಂಚಮ್ಮ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ರಾಮಲಿಂಗಯ್ಯ, ಗೌರವಾಧ್ಯಕ್ಷ ಕೆ.ಎಲ್.ಶಿವರುದ್ದು, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ, ಕಾರ್ಯದರ್ಶಿ ಕೆ.ಸಿ.ರವೀಂದ್ರ, ಟ್ರಸ್ಟಿಗಳಾದ ಕೆ.ಎಂ.ಉಮೇಶ್, ಕಿರಣ್ ಉಪಸ್ಥಿತರಿದ್ದರು.




