ಪ್ರಸ್ತುತ ಸಂದರ್ಭದಲ್ಲಿ ದೇಶದ ಜಿಡಿಪಿಗೆ ಹೆಚ್ಚು ಕೊಡುಗೆಯನ್ನು ನೀಡುವ ಸೇವಾ ವಲಯ ಹಾಗೂ ಉತ್ಪಾದನಾ ವಲಯಗಳಲ್ಲಿ ಅತೀ ಹೆಚ್ಚಿನ ಮಹಿಳೆಯರು ದುಡಿಯುತ್ತಿದ್ದು, ಅವರ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ, ಇಂತಹ ಸಂದರ್ಭದಲ್ಲಿ ಮಹಿಳೆಯರು ಒಗ್ಗೂಡಿ ಹೋರಾಟ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಗಳಿಸಿಕೊಳ್ಳಬೇಕೆಂದು ಸಮಾಜಮುಖಿ ಚಿಂತಕಿ ದು.ಸರಸ್ವತಿ ಹೇಳಿದರು.
17ನೇಅಖಿಲ ಭಾರತ ಸಿಐಟಿಯು ಸಮ್ಮೇಳನದ ಅಂಗವಾಗಿ ಮಂಗಳವಾರ ಮಂಡ್ಯನಗರದ ಗಾಂಧಿಭವನದಲ್ಲಿ ನಡೆದ ”ದುಡಿಯುವ ಮಹಿಳೆಯರ ತಲ್ಲಣಗಳು” ಕುರಿತ ವಿಚಾರ ಸಂಕಿರಣದಲ್ಲಿ ಅವರು, ” ಸೇವಾ ಮತ್ತು ಉತ್ಪಾದನಾ ವಲಯದ ಹೆಣ್ಣುಮಕ್ಕಳ ಪರಿಸ್ಥಿತಿ” ಕುರಿತು ಮಾತನಾಡಿದರು.
ಉತ್ಪಾದನಾ ವಲಯದಲ್ಲಿ ಆಟೋಮೊಬೈಲ್, ಎಲೆಕ್ಟ್ರಾನಿಕ್, ಗಾರ್ಮೆಂಟ್ಸ್-ಟೆಕ್ಸ್ ಟೈಲ್ಸ್ ಸೇರಿದಂತೆ ಹಲವು ಉದ್ದಿಮೆಗಳು ಬರುತ್ತದೆ, ಇಲ್ಲೆಲ್ಲ ಮಹಿಳೆಯರು ಅತಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ, ಅಲ್ಲದೇ ಸೇವಾ ವಲಯಗಳಾದ ಸಾರಿಗೆ, ಇನ್ಸೂರೆನ್ಸ್, ಬ್ಯಾಂಕಿಂಗ್, ಹೊಟೇಲ್ ಉದ್ಯಮ, ಸಮಾಜ ಕಲ್ಯಾಣ ಸೇವಾ ಕಾರ್ಯಗಳಲ್ಲಿ ಮಹಿಳೆಯರು ದುಡಿಯುತ್ತಿದ್ದರೂ ಅವರಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ ಎಂದು ಹೇಳಿದರು.
ಸೇವಾವಲಯವು ದೇಶದ ಜಿಡಿಪಿ ಶೇ.66ರಷ್ಟು ಕೊಡುಗೆಯನ್ನು ನೀಡುತ್ತಿದೆ. ಈ ಕ್ಷೇತ್ರದಲ್ಲಿ ಒಟ್ಟಾರೆ 28ರಷ್ಟು ಜನರು ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಮಹಿಳೆಯ ಸಂಖ್ಯೆ ಅಪಾರವಾಗಿದೆ. ಇಲ್ಲಿಯೂ ಮಹಿಳೆಯರಿಗೆ ಲೈಗಿಂಕ ದೌರ್ಜನ್ಯಗಳು ನಡೆಯುತ್ತಿಲ್ಲ, ಇಂತಹ ಕಡೆಗಳಿಗೆ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಅಲ್ಲದೇ ಪುರುಷ ಮತ್ತು ಮಹಿಳೆಯರಿಬ್ಬರು ಕೆಲಸ ಮಾಡುವ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವಿಚಾರಣೆ ಸಮನ್ವಯ ಸಮಿತಿಗಳನ್ನು ರಚನೆ ಮಾಡಬೇಕಿದೆ, ಆದರೆ ಇವು ಕೆಲವು ಕಡೆ ಇದ್ದರೂ ಕೇವಲ ನಾಮಕಾವಸ್ಥೆಗೆ ಇವೆ. ಯಾವುದೇ ಮಹಿಳಾ ಪರವಾದ ಕೆಲಸಗಳನ್ನು ಮಾಡುತಿಲ್ಲ ಎಂದು ದೂರಿದರು.
ಇನ್ನೂ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಇಡೀ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸರ್ಕಾರ ಸಿದ್ದವಿಲ್ಲ, ಆದರೆ ಅವರಿಂದ ಅವಿರತ ದುಡಿಮೆಯನ್ನು ನೀರಿಕ್ಷೆ ಮಾಡುತ್ತಿದೆ. ಇಂತಹ ಅನ್ಯಾಯ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಸಮಾರಂಭವನ್ನು ಸಮಾಜ ಶಾಸ್ತ್ರಜ್ಞೆ, ಬರಹಗಾರ್ತಿ ಡಾ.ಆರ್.ಇಂದಿರಾ ಉದ್ಘಾಟಿಸಿದರು. ಮುಖ್ಯಅತಿಥಿಯಾಗಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಎ.ಎಂ.ಅರುಣ ಕುಮಾರಿ ಭಾಗವಹಿಸಿದ್ದರು. ಜನವಾದಿ ಮಹಿಳಾ ಸಂಘಟನಾ ರಾಜ್ಯಾಧ್ಯಕ್ಷ ದೇವಿ ಅಧ್ಯಕ್ಷತೆ ವಹಿಸಿದ್ದರು.




