ಇ–ಸ್ವತ್ತು ವಿತರಣೆಯಿಂದ ಪಾರದರ್ಶಕತೆ ಜೊತೆಗೆ ತೆರಿಗೆ ಸೋರಿಕೆಗೆ ಕಡಿವಾಣ ಹಾಕುವ ಮೂಲಕ ಗ್ರಾಮ ಪಂಚಾಯಿತಿಗಳ ವರಮಾನವೂ ಹೆಚ್ಚಲಿದೆ ಎಂದು ಮಂಡ್ಯ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.
ಮಂಡ್ಯ ನಗರದ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಇ-ಸ್ವತ್ತು ತಂತ್ರಾಂಶದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಇ–ಸ್ವತ್ತು ದಾಖಲೆ ವಿತರಣೆಯಲ್ಲಿನ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ, ಪರಿಹಾರ ಸೂಚಿಸಲು ಮತ್ತು ಸಾರ್ವಜನಿಕರಿಂದ ಅಹವಾಲುಗಳು ಸ್ವೀಕರಿಸಿ ಇ-ಸ್ವತ್ತು ತಂತ್ರಾಂಶದಡಿ ಪರಿಷ್ಕೃತ ಸುತ್ತೋಲೆಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಇ-ಸ್ವತ್ತು ಮಾಡಿ ಸಾರ್ವಜನಿಕರಿಗೆ ನಮೂನೆ 9, 11 ಮತ್ತು 11ಎ ಗಳನ್ನು ವಿತರಿಸಲು ಮತ್ತು ಇ-ಸ್ವತ್ತು ತಂತ್ರಾಂಶದಡಿ ದಾಖಲಾತಿಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಕ್ರಮವಹಿಸಲು ಸೂಚಿಸಿದರು.
ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಾರ್ವಜನಿಕರಿಂದ ಅಹವಾಲುಗಳು ಸ್ವೀಕರಿಸಿ ಇ-ಸ್ವತ್ತು ತಂತ್ರಾಂಶದಡಿ ಪರಿಷ್ಕೃತ ಸುತ್ತೋಲೆಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಇ-ಸ್ವತ್ತು ಮಾಡಿ ಅಲ್ಲದೆ ನಿಯಮ ಬಾಹಿರವಾಗಿ ಇ-ಸ್ವತ್ತು ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಇ -ಸ್ವತ್ತು ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಇನ್ನೂ ಹೆಚ್ಚಿನ ತರಬೇತಿ ಬೇಕು ಎಂದರೆ ಮತ್ತೆ ತರಬೇತಿಯನ್ನು ನೀಡಲಾಗುವುದು ಎಂದರು.
ಯಾವುದೇ ಇ- ಸ್ವತ್ತು ಅಧಿಕೃತವಾಗಿ ಗ್ರಾಮ ಪಂಚಾಯತಿಯಲ್ಲಿಯೇ ಮಾಡಬೇಕು ಅದನ್ನು ಹೊರತುಪಡಿಸಿ ಖಾಸಗಿ ಸೈಬರ್ ಸೆಂಟರ್ ಗಳಲ್ಲಿ ಇ-ಸ್ವತ್ತು ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುತ್ತದೆ ಹಾಗೂ ಎಲ್ಲಾ ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಇರಬೇಕು, ಕಡ್ಡಾಯವಾಗಿ ಇ-ಹಾಜರಾತಿ ಇರಬೇಕು ಮತ್ತು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸಲು ಸೂಚಿಸಿದರು.
ಪಂಚಾಯತ್ ರಾಜ್ ಇಲಾಖೆಯ ಉಪ ನಿರ್ದೇಶಕರಾದ ಗೀತಾ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ ಸ್ವತ್ತಿಗೆ ಕಂದಾಯ ವಿಧಿಸುವ ಬಗ್ಗೆ ಮತ್ತು ಭೂ ಪರಿವರ್ತನೆಯಾದ ಆಯಾ ಗ್ರಾಮ ಠಾಣ ವ್ಯಾಪ್ತಿಯಲ್ಲಿ ಇರುವ ಆಸ್ತಿಯನ್ನು ಇ-ಸ್ವತ್ತನ್ನು ನೀಡುವ ಬಗ್ಗೆ ಹಾಗೂ ಕ್ರಮಬದ್ದ ಮತ್ತು ಕ್ರಮಬದ್ದವಲ್ಲದ ಆಸ್ತಿಯ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು.
ತರಬೇತಿ ಕಾರ್ಯಾಗಾರದ ಸಂಶೋಧನಾ ಅಧಿಕಾರಿ ಶಶಿಧರ್ ಮಾತನಾಡಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಬಗ್ಗೆ, ಸರ್ಕಾರವು ಹಂತ ಹಂತವಾಗಿ ಜಾರಿಗೆ ತರುವ ಸುತ್ತೋಲೆಗಳಿಗೆ ಅನುಗುಣವಾಗಿ ಇ-ಸ್ವತ್ತುಗಳನ್ನು ಮಾಡಬೇಕು ಮತ್ತು ಪಂಚತಂತ್ರ ತಂತ್ರಾಂಶದ ನಿರ್ವಹಣೆ, ವಾಣಿಜ್ಯ ಮತ್ತು ಕೈಗಾರಿಕೆ, ವಸತಿ ಮತ್ತು ವಾಣಿಜ್ಯ ಹಾಗೂ ಅಪಾರ್ಟ್ಮೆಂಟ್ ಆಸ್ತಿಗಳ ವಿಧಗಳ ಆಧಾರವಾಗಿ ಕಂದಾಯ ನಿರ್ಧಾರ ಮಾಡುವ ಬಗ್ಗೆ, ದಾಖಲೆಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಕಾರ್ಯಾಗಾರದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅವರ ಕಾರ್ಯಕ್ಷೇತ್ರದಲ್ಲಿ ಎದರುಸುತ್ತಿರುವ ಸವಾಲುಗಳನ್ನು ಮತ್ತು ಸಮಸ್ಯೆಗಳ ಬಗ್ಗೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಜೊತೆಗೆ ತರಬೇತಿಯ ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತರಬೇತಿ ಸಂಬಂಧವಾಗಿ ಚರ್ಚೆ ಮಾಡಿದರು.
ಇದೇ ವೇಳೆ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ಚಂದ್ರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಯ ನರೇಗಾ ಸಿಬ್ಬಂದಿಗಳು ಹಾಜರಿದ್ದರು.




