Tuesday, November 24, 2026

ಪ್ರಾಯೋಗಿಕ ಆವೃತ್ತಿ

ದುದ್ದ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಒತ್ತು

ದುದ್ದ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಕಾರ್ಯಪ್ರವೃತ್ತನಾಗಿದ್ದು, ಇನ್ನೊಂದು ವಾರದಲ್ಲಿ ರಸ್ತೆ ಸೇರಿದಂತೆ ಗ್ರಾಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗುವುದಾಗಿ ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಮಂಡ್ಯ ತಾಲೂಕಿನ ದುದ್ದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಈ ಶಂಭು ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಳೆರಾಯನ ಆಶೀರ್ವಾದದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಇನ್ನೊಂದು ವಾರದಲ್ಲಿ ದುದ್ದ ಹೋಬಳಿ ವ್ಯಾಪ್ತಿಯ ಎಲ್ಲಾ ಕೆರೆಗಳು ತುಂಬುವ ವಿಶ್ವಾಸವಿದೆ. ಸುಮಾರು 75 ಕಿ.ಮೀ ವ್ಯಾಪ್ತಿಯ ಪೈಪ್ ಲೈನ್ ಕಾಮಗಾರಿ ಹಗಲು-ರಾತ್ರಿ ಮಾಡಿಸಿ ಪೂರ್ಣಗೊಳಿಸಲಾಗುತ್ತಿದೆ. ಚಂದಗಿರಿ ಕೊಪ್ಪಲು ಬಳಿ ಆಗಿದ್ದ ಸಮಸ್ಯೆಯನ್ನು ಬಗೆಹರಿಸಿದ್ದು,ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದರು.

ಸಿ ಡಿ ಪಿ ಒ ಇಲಾಖೆ ವತಿಯಿಂದ ಪಾಂಡವಪುರ ತಾಲೂಕಿನ 66 ಸ್ವಸಹಾಯ ಸಂಘಗಳಲ್ಲಿ 33 ಸಂಘಗಳಿಗೆ ತಲಾ ಒಂದು ಲಕ್ಷ ರೂ ಅನುದಾನ ಕೊಡಿಸಲಾಗಿದೆ. ದೊಡ್ಡ ಪಂಚಾಯತಿಯಲ್ಲಿ ಎರಡು, ಚಿಕ್ಕ ಪಂಚಾಯತಿಯಲ್ಲಿ ಒಂದು ಮಹಿಳಾ ಸಂಘ ಆಯ್ಕೆ ಮಾಡಿ ಅನುದಾನ ನೀಡಲಾಗಿದೆ ಎಂದರು.

ಶಿಕ್ಷಣ ಬಹಳ ಅಗತ್ಯ

ಮನುಷ್ಯನಿಗೆ ಶಿಕ್ಷಣ ಬಹಳ ಅಗತ್ಯ. ಈ ರಾಷ್ಟ್ರದ ಭವಿಷ್ಯ ರೂಪಿಸುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿ. ವೈಜ್ಞಾನಿಕ ಜಗತ್ತಿನಲ್ಲಿ ಮಕ್ಕಳಲ್ಲಿ ವೈಚಾರಿಕತೆ ಬೆಳೆಸುವ ಮೂಲಕ ಬಹಳ ಶಿಸ್ತಿನಿಂದ ವಿದ್ಯಾರ್ಥಿ ಜೀವನವನ್ನು ರೂಪಿಸಬೇಕಾಗಿದೆ. ಸರ್ಕಾರ ಮಕ್ಕಳ ಭವಿಷ್ಯ ರೂಪಿಸುವ ಭಾಗವಾಗಿ ಸರ್ಕಾರಿ ಮತ್ತು ಅನುದಾನದ ಶಾಲೆಗಳಲ್ಲಿ ಮೊಟ್ಟೆ,ಬಾಳೆಹಣ್ಣು ನೀಡುವ ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದರು.

ದುದ್ದ ಗ್ರಾಮದ ಪದವಿಪೂರ್ವ ಕಾಲೇಜಿನ ವಿನೂತನ ಕಟ್ಟಡ ಇನ್ನು 20 ದಿನಗಳಲ್ಲಿ ಪೂರ್ಣಗೊಂಡು ಕಾರ್ಯಾರಂಭ ಮಾಡಲಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಮಾದರಿ ಶಾಲೆಯಾಗಿ ದುದ್ದ ಶಾಲೆಯನ್ನು ರೂಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು.

ಶ್ರೀ ಶಂಭು ಸೇವಾ ಟ್ರಸ್ಟ್ ಹಾಗೂ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮಾತನಾಡಿ, ಎಲ್ಲಾ ಮಕ್ಕಳನ್ನು ಒಂದೇ ದೃಷ್ಟಿಯಿಂದ ನೋಡುವ ಸಲುವಾಗಿ ಬ್ಯಾಗ್ ವಿತರಣೆ ಮಾಡಲಾಗಿದೆ. ಮಕ್ಕಳು ಉತ್ತಮವಾಗಿ ವಿದ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸ ಪಡೆದುಕೊಂಡು ತಮ್ಮ ತಂದೆ-ತಾಯಿಗೆ ಗೌರವ ತಂದು ಕೊಡುವ ಕೆಲಸ ಮಾಡಬೇಕು ಎಂದರು.

ಶಂಭು ಸೇವಾ ಟ್ರಸ್ಟ್ ವತಿಯಿಂದ ಶಾಸಕ ಪುಟ್ಟರಾಜರವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಧರ್ಮಯಾತ್ರೆಗೆ ಇನ್ನೊಂದು ವಾರದಲ್ಲಿ ಚಾಲನೆ ನೀಡಲಾಗುವುದು. ನಮ್ಮ ಅಕ್ಕಂದಿರು, ತಾಯಂದಿರು ಹಾಗೂ ಯಜಮಾನರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಧರ್ಮ ಯಾತ್ರೆ ಮಾಡಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದ್ದು,ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಹಾಗೆಯೇ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಸಂಚಾರಿ ಆರೋಗ್ಯ ರಥ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರ ಆರೋಗ್ಯ ತಪಾಸಣೆ ಮಾಡುವುದು ಇದರ ಉದ್ದೇಶ.ಜನರು ಇದರ ಪ್ರಯೋಜನ ಪಡೆದು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಾಳೀರಯ್ಯ, ಗುತ್ತಿಗೆದಾರ ಬಾಲರಾಜ್, ಶಂಬು ಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ.ಆರ್. ಸುರೇಶ್, ಮುದಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರೇಗೌಡ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ