Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಾರ್ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಆರೋಪ : ಅಬಕಾರಿ ಅಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ದೂರು

ಬಾರ್ ಅಂಡ್ ರೆಸ್ಟೋರೆಂಟ್ ಪರವಾನಗಿ ನೀಡಲು ಮಂಡ್ಯ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತ ಪುನೀತ್ ಎಂಬುವರು ಮಂಡ್ಯ ಲೋಕಾಯುಕ್ತರಿಗೆ ಹಲವು ಸಾಕ್ಷ್ಯಗಳ ಮೂಲಕ ದೂರು ನೀಡಿದ್ದಾರೆ.

ಮಂಡ್ಯ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ರವಿಶಂಕರ್ ಹಾಗೂ ಇನ್ ಸ್ಪೆಕ್ಟರ್ ಶಿವಶಂಕರ್ ವಿರುದ್ದ ದೂರು ಸಲ್ಲಿಸಿರುವ ಪುನೀತ್, ಈ ವೇಳೆ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯವನ್ನು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

“>

 

ನಡೆದಿದ್ದೇನು ? 

ಮದ್ದೂರು ತಾಲೂಕು ಚಂದೂಪುರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪುನೀತ್ ಸಿ.ಎಲ್. 7 ಪರವಾನಗಿ ಪಡೆದು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ತಮ್ಮ ತಾಯಿ ಲಕ್ಷ್ಮಮ್ಮರ ಹೆಸರಿನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಅನಂತರ ಖುದ್ದಾಗಿ ಇಲಾಖೆಗೆ ತೆರಳಿ ಅರ್ಜಿ ಸಲ್ಲಿಕೆ ಮಾಡಿದ ವೇಳೆ ನಲವತ್ತು ಲಕ್ಷ ಲಂಚ ನೀಡಲು ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು ಎಂದು ಪುನೀತ್ ಆರೋಪಿಸಿದ್ದಾರೆ. ಆನಂತರ 20 ಲಕ್ಷವನ್ನಾದರೂ ನೀಡಬೇಕು ಎಂದು ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಇದರಿಂದ ಬೇಸತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆಂದು ಪುನೀತ್ ತಿಳಿಸಿದ್ದಾರೆ.

ದೂರಿನ ಪ್ರತಿ

ದೂರುದಾರ ಪುನೀತ್ ಮಾತನಾಡಿ ಮದ್ದೂರು ತಾಲೂಕು ಚಂದೂಪುರ ಗ್ರಾಮದ ಬಳಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ತಾಯಿ ಲಕ್ಷ್ಮಮ್ಮರ ಹೆಸರಿನಲ್ಲಿ ಪರವಾನಿಗೆಗಾಗಿ ಅಬಕಾರಿ ಇಲಾಖೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದೇ. ಆದರೆ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆದು ಅರ್ಜಿ ಸಲ್ಲಿಸಿಲ್ಲ ಎಂದು ತಿರಸ್ಕೃತ ಮಾಡಿದ್ದರು, ಅನಂತರ ಖುದ್ದಾಗಿ ಅರ್ಜಿ ಸಲ್ಲಿಕೆ ಮಾಡಿದ್ದೆ ಇನ್ ಸ್ಪೆಕ್ಟರ್ ಶಿವಶಂಕರ್ ಅಧಿಕಾರಿಗಳು ಮಾಮೂಲು ನೀಡಬೇಕಾಗುತ್ತದೆ ಎಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ದೂರಿದ್ದಾರೆ.

ಅಬಕಾರಿ ಅಧಿಕಾರಿಗಳು ಮೊದಲು 40 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟರು, ಅದಕ್ಕೆ ಒಪ್ಪದಿದ್ದಾಗ 30 ಲಕ್ಷ,  ಆನಂತರ 20 ಲಕ್ಷ ನೀಡು ಎಂದು ಕೇಳಿದ್ದರು, ಇದಕ್ಕೆ ಒಪ್ಪದಿದ್ದಾಗ ನನ್ನ ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ, ಇದೀಗ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುನೀತ್ ಒತ್ತಾಯಿಸಿದ್ದಾರೆ.

ಶಾಸಕರಿಂದ ಪರ್ಸಂಟೇಜ್ ಲೆಕ್ಕದಲ್ಲಿ ಲೂಟಿ

ಭ್ರಷ್ಟ ಸಿಎಂ ರಂತೆ ಮಂಡ್ಯ ಜಿಲ್ಲೆಯ ಶಾಸಕರು ಕೂಡ ಪರ್ಸಂಟೇಜ್‌ ಲೆಕ್ಕದಲ್ಲಿ ಲೂಟಿ ಹೊಡೆಯುತ್ತಿರುವುದು ಆಡಿಯೋ ಸಂಭಾಷಣೆಯಲ್ಲಿ ಬಟ ಬಯಲಾಗಿದೆ ಎಂದು ಜೆಡಿಎಸ್ ಪಕ್ಷ ತನ್ನ ಟ್ವೀಟರ್ ನಲ್ಲಿ ಬರೆದುಕೊಂಡಿದೆ.

ಭ್ರಷ್ಟಾತೀ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಲಂಚವಿಲ್ಲದೇ ಯಾವುದೇ ಕೆಲಸ, ಕಾರ್ಯಗಳು ನಡೆಯುವುದಿಲ್ಲ ಎಂದು ಜೆಡಿಎಸ್ ಪ್ರಸ್ತಾಪ ಮಾಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ