Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನಕಲಿ ಜನನ – ಮರಣ ಪತ್ರ ನೀಡುವವರ ವಿರುದ್ಧ ಕ್ರಮ

ಮಂಡ್ಯ ಜಿಲ್ಲೆಯಲ್ಲಿ ನಕಲಿ ಜನನ ಮತ್ತು ಮರಣ ಪತ್ರ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಆಯೋಜಿಸಲಾಗಿದೆ ಜಿಲ್ಲಾ ಮಟ್ಟದ ಜನನ ಮತ್ತು ಮರಣ ಸಮನ್ವ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಬೆಳೆ ಕಟಾವು ಪ್ರಯೋಗ ಹಾಗೂ ಕೃಷಿ ಅಂಕಿ ಅಂಶ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನನ ಮತ್ತು ಮರಣ ವನ್ನು ನೊಂದಣಿ ಮಾಡಲು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಿಗೆ ಅಧಿಕಾರಿಯನ್ನು ನೀಡಲಾಗಿದೆ. ಜನನ ಹಾಗೂ ಮರಣ ಸಂಭವಿಸಿದ 30 ದಿನಗಳೊಳಗಾಗಿ ಜನನ ಮತ್ತು ಮರಣ ಪತ್ರ ಮಾಡಿಸಿಕೊಳತಕ್ಕದ್ದು ಇಲ್ಲವಾದಲ್ಲಿ 30 ದಿನಗಳು ಮೀರಿದರೆ ತಹಶೀಲ್ದಾರ್ ಬಳಿ ತೆರಳಬೇಕು 1 ವರ್ಷ ಮೀರಿದರೆ ಕೋರ್ಟ್ ನ ಮೂಲಕ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಬೇಕಾಗಿರುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಜನರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರದ ಕುರಿತು ಅರಿವು ಇರುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಇದರ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಜನನ ಪತ್ರ ನೀಡಲು ಆಸ್ಪತ್ರೆಗಳಲ್ಲಿ ವಿಳಂಬವಾಗುತ್ತಿದೆ. ಸದರಿ ವರ್ಷ ಜಿಲ್ಲೆಯಲ್ಲಿ 1 ವರ್ಷ ಮೇಲ್ಪಟ್ಟ 30 ಮಕ್ಕಳಿಗೆ ಜನನ ಪ್ರಮಾಣ ಪತ್ರ ನೊಂದಣಿ ಆಗಿಲ್ಲ. ಯಾವುದೇ ಕಾರಣಕ್ಕೂ ಜನನ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗಬಾರದು, ಜನನ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಮಗುವಿನ ತಂದೆ ತಾಯಿ ಹೆಸರು ಹಾಗೂ ವಿಳಾಸವನ್ನು ಖಾತ್ರಿ ಪಡಿಸಿಕೊಂಡು ನೊಂದಣಿ ಮಾಡಬೇಕು ಎಂದು ಸೂಚಿಸಿದರು.

ಜನನ ಮತ್ತು ಮರಣ ಸಂಭವಿಸಿದ 30 ದಿನಗಳೊಳಗಾಗಿ ಪ್ರಮಾಣ ಪತ್ರ ಪಡೆಯುವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯ ಮೂಲಕ ಜನರಿಗೆ ಜಾಗೃತಿ ಮೂಡಿಸಿ ಎಂದರು.

ಹೆಚ್ಚು ಇಳುವರಿ ಕೊಡುವ ನೂತನ ತಳಿಗಳ ಕುರಿತು ರೈತರಿಗೆ ಅರಿವು ಮೂಡಿಸಿ
ಜಿಲ್ಲೆಯ ರೈತರು ಸಾಂಪ್ರದಾಯಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸಾಂಪ್ರದಾಯಕ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತದೆ. ರೈತರು ಮಿಶ್ರ ಬೆಳೆ ಮತ್ತು ಪರ್ಯಾಯ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಿಶ್ರಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ರೈತರಿಗೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅರಿವು ಮೂಡಿಸಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ನಡೆಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆಯ ಮಾಹಿತಿಯನ್ನು ತಪ್ಪಾಗಿ ನಮೂದಿಸಲಾಗಿದೆ. ಅಧಿಕಾರಿಗಳು ಸಭೆ ನಡೆಸಿ ತಪ್ಪಾಗಿರುವ ಮಾಹಿತಿಯನ್ನು ತತ್ರಾಂಶದಿಂದ ತೆಗೆದುಹಾಕಿ. ಹಾಗೂ ಬೆಳೆ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ಸಲ್ಲಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಬೆಳೆ ಕಟಾವಿಗೆ ಸೂಕ್ತ ದರ ನಿಗಧಿ
ಭತ್ತ ಮತ್ತು ರಾಗಿ ಬೆಳೆ ಕಟಾವಿನ ವಿಚಾರದಲ್ಲಿ ದಲ್ಲಾಳಿಗಳು ಮನಸ್ಸು ಇಚ್ಛೆ ಧರ ನಿಗದಿ ಪಡಿಸಿ ರೈತರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ, ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಿ ಭತ್ತ ಮತ್ತು ರಾಗಿ ಕಟಾವಿಗೆ ಸೂಕ್ತ ದರ ನಿಗದಿಪಡಿಸಬೇಕು. ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರ ವಿಧಿಸುವ ಬೇಳೆ ಕಟಾವು ಯಂತ್ರಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಅಪರ ಪೊಲೀಸ್ ಅಧಿಕ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಮೋಹನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ