ಪ್ರಸ್ತುತ ದಿನಗಳಲ್ಲಿ ”ರೈತರ ಬೆಳೆಗೆ ಬೆಲೆ ಸಿಕ್ತಿಲ್ಲ… ರೈತರ ಮಕ್ಕಳಿಗೆ ಹೆಣ್ಣು ಸಿಕ್ತಿಲ್ಲ” ಹಾಗಾಗಿ ರೈತರು ಸಾಮಾಜಿಕ ಸಮಸ್ಯೆಗೆ ಸಿಲುಕಿ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಎಂದು ಸಮರ್ಥನಾ ಮಹಿಳಾ ಮಂಡಳಿಯ ಮುಖಂಡರಾದ ನಾಗರೇವಕ್ಕ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಳೆದ 16 ದಿನಗಳಿಂದ ಕಬ್ಬಿಗೆ 4.500 ರೂ. ಬೆಲೆ ನಿಗದಿಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚಿಗೆ ಆದಿಚುಂಚನಗಿರಿಯಲ್ಲಿ ನಡೆದ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ 250 ಹೆಣ್ಣುಮಕ್ಕಳಿಗೆ 10,000 ಯುವಕರು ಸೇರಿದ್ದರು. ಇದರಿಂದ ರೈತರ ಮಕ್ಕಳಿಗೆ ಹೆಣ್ಣು ಮಕ್ಕಳು ಸಿಗುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡದಿರುವುದರಿಂದ ಅವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಈ ಕಾರಣದಿಂದ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ, ಎಲ್ಲರೂ ಕೃಷಿಯನ್ನು ತ್ಯಜಿಸಿ ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳು ವೃದ್ಧರಿಂದ ಕೂಡಿದ್ದು, ಕೃಷಿಯನ್ನು ಮಾಡುವವರೇ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಕಳೆದ 16 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸರ್ಕಾರದ ಪ್ರತಿನಿಧಿಯಾಗಲಿ ಧರಣಿ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಆಲಿಸಿ, ಸರ್ಕಾರಕ್ಕೆ ತಿಳಿಸಬೇಕು. ಅಲ್ಲದೆ, ಸಭೆಗೆ ದಿನಾಂಕ ನಿಗದಿಪಡಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಧರಣಿಯು ಉಗ್ರ ರೂಪ ಪಡೆದುಕೊಳ್ಳಲಿದೆ ಎಂದರು.
ಇಂದಿನ ಧರಣಿಯಲ್ಲಿ ತಾಳೆಮೆಳೆದೊಡ್ಡಿ, ಕಟ್ಟೆದೊಡ್ಡಿ, ಬೂದನೂರು ಗ್ರಾಮದ ಗ್ರಾಮಸ್ಥರು ಬೆಂಬಲ ನೀಡಿದ್ದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ನಗರಸಭೆ ಮಾಜಿ ಅಧ್ಯಕ್ಷೆ ನಿರ್ಮಲಾ ಚಿಕ್ಕೆಗೌಡ, ರೈತ ಮುಖಂಡ ಲಿಂಗಪ್ಪಾಜಿ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.




