Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಬೆಂಗಳೂರು- ಜಲಸೂರು ಹೆದ್ದಾರಿ ಕಾಮಗಾರಿಗೆ ರೈತರ ಅಡ್ಡಿ- ಪ್ರತಿಭಟನೆ

 ಬೆಂಗಳೂರು- ಜಲಸೂರು ರಾಜ್ಯ ಹೆದ್ದಾರಿ ಕಾಮಗಾರಿಯ ಕೆ ಆರ್ ಪೇಟೆ ಬೈಪಾಸ್ ರಸ್ತೆಯ ಕೆಲಸವನ್ನು ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕೆ.ಎನ್.ಆರ್.ಸಿ.ಎಲ್ ಕಂಪನಿಯ ಇಂಜಿನಿಯರುಗಳು ಹಾಗೂ ಕೇಶಿಫ್  ಅಧಿಕಾರಿಗಳು ಮುಂಜಾನೆ ಸಮಯದಲ್ಲಿ ಅಗ್ರಹಾರಬಾಚಹಳ್ಳಿ ಸಮೀಪ ಆರಂಭಿಸಿದಾಗ ರೈತರು ಕಾಮಗಾರಿಯನ್ನು ತಡೆದು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ನಿರ್ಮಾಣಕ್ಕೆ ಭೂಮಿಯನ್ನು ಕಳೆದು ಕೊಂಡಿರುವ ರೈತರಿಗೆ ತಾರತಮ್ಯ ಮಾಡಲಾಗಿದೆ. ರೈತರು ಕಳೆದುಕೊಂಡಿರುವ ಭೂಮಿಗೆ ವೈಜ್ಞಾನಿಕವಾಗಿ ದರವನ್ನು ನೀಡಿಲ್ಲ. ಒಂದು ಗುಂಟೆ ಜಮೀನಿಗೆ 25 ಸಾವಿರ ರೂ ಹಣವನ್ನು ಒಬ್ಬ ರೈತರಿಗೆ ನೀಡಿದರೆ, ಮತ್ತೊಬ್ಬ ರೈತನಿಗೆ ಒಂದು ಗುಂಟೆ ಜಮೀನಿಗೆ ಒಂದು ಲಕ್ಷ ರೂ ಪರಿಹಾರ ನೀಡಲಾಗಿದೆ. ಅಧಿಕಾರಿಗಳು ಮುಗ್ಧ ರೈತರಿಗೆ ಮೋಸ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಕಳೆದುಕೊಂಡಿರುವ ಭೂಮಿಗೆ ನೀಡಿರುವ ಪರಿಹಾರದ ಹಣದಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಿ ನಂತರ ಕಾಮಗಾರಿ ಆರಂಭಿಸಬೇಕು ಎಂದು ರೈತರು ಪಟ್ಟು ಹಿಡಿದು ರಸ್ತೆ ಕಾಮಗಾರಿಯನ್ನು ತಡೆದು ಪ್ರತಿಭಟನೆಗೆ ಇಳಿದಾಗ ನಾಗಮಂಗಲ ಡಿವೈಎಸ್ ಪಿ ಲಕ್ಷ್ಮೀನಾರಾಯಣ ಪ್ರಸಾದ್ ಅವರ ನೇತೃತ್ವದಲ್ಲಿ ಪ್ರತಿಭಟನಾ ನಿರತ ರೈತರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು.
ಕೆಶಿಪ್ ಆರಂಭಿಸಿರುವ ಕೆ.ಆರ್.ಪೇಟೆ ಬೈಪಾಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಅಗ್ರಹಾರಬಾಚಹಳ್ಳಿ ಗೇಟ್ ಗೆ ಆಗಮಿಸಿದ ಶಾಸಕ ಎಚ್.ಟಿ. ಮಂಜು, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್ ಹಾಗೂ ಕೆಶೀಫ್ ಕಾರ್ಯಪಾಲಕ ಅಭಯಂತರ ಶಿವನಂಜೇಗೌಡ ಅವರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯ ಹೆದ್ದಾರಿ ಕಾಮಗಾರಿಗೆ ರೈತರು ತಮ್ಮ ಬೆಲೆಬಾಳುವ ಭೂಮಿಯನ್ನು ಕಳೆದುಕೊಂಡಿದ್ದಾರೆ. ರೈತರು ಕಳೆದುಕೊಂಡಿರುವ ಭೂಮಿಗೆ ನ್ಯಾಯಯುತವಾದ ವೈಜ್ಞಾನಿಕ ಪರಿಹಾರವನ್ನು ನೀಡಿ, ಅನ್ಯಾಯಕ್ಕೆ  ಒಳಗಾಗಿರುವ ರೈತರಿಗೆ ನ್ಯಾಯ ದೊರಕಿಸಿಕೊಡಿ ನಂತರ ರಸ್ತೆ ಕಾಮಗಾರಿ ಆರಂಭಿಸಿ ಎಂದು ತಿಳಿಸಿದರು, ಇದಕ್ಕೆ ಒಪ್ಪದ ಅಧಿಕಾರಿಗಳು ಭೂಮಿ ಕಳೆದುಕೊಂಡಿರುವ ರೈತರು ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯಕ್ಕೆ ಹೋಗಿ ಆದೇಶ ಮಾಡಿಸಿಕೊಂಡು ಬರಲಿ, ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು. ನಂತರ ಪ್ರತಿಭಟನಾ ನಿರತ ರೈತರನ್ನು ಬಂಧಿಸಿ, ಕೆ.ಆರ್.ಪೇಟೆ ಪ್ರವಾಸಿ ಮಂದಿರದ ಬಳಿ ಕರೆತಂದು ಬಿಡುಗಡೆ ಮಾಡಿ ಕಳಿಸಲಾಯಿತು.
ಕೆ.ಆರ್.ಪೇಟೆ ತಾಲೂಕಿನಲ್ಲಿ ಹಾದು ಹೋಗುವ ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ಕೆ.ಆರ್.ಪೇಟೆ ಬೈಪಾಸ್ ಕಾಮಗಾರಿಯ  ಸುಮಾರು ಎಂಟು ಕಿಲೋಮೀಟರ್ ನಷ್ಟು ರಸ್ತೆ ಕೆಲಸವು  ಬಾಕಿ ಉಳಿದಿದ್ದು ಕಾಮಗಾರಿಯನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಭದ್ರತೆಯನ್ನು ಪಡೆದು ರಸ್ತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಕೆ.ಎನ್.ಆರ್.ಸಿ.ಎಲ್ ಕಂಪನಿಯು ಭರದಿಂದ ಕಾಮಗಾರಿಯನ್ನು ನಡೆಸುತ್ತಿದೆ.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪದವೀಧರ ಘಟಕದ ಅಧ್ಯಕ್ಷ ಚೇತನ್ ಕುಮಾರ್, ತಾಲ್ಲೂಕು ಕಾರ್ಯ ದರ್ಶಿ ಟೆಂಪೋ ಶ್ರೀನಿವಾಸ್, ಗ್ರಾ.ಪಂ.ಮಾಜಿ ಸದಸ್ಯ ಎ.ಸಿ.ಮುರುಳಿ, ಚಿಕ್ಕೋನಹಳ್ಳಿ ಜಯಣ್ಣ ಮತ್ತಿತರರು ನೇತೃತ್ವ ವಹಿಸಿದ್ದರು.
ಪ್ರತಿಭಟನಾ ನಿರತ ರೈತರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಿಸರ್ಗಪ್ರಿಯ, ನಾಗಮಂಗಲ ಡಿ.ವೈ.ಎಸ್.ಪಿ ಲಕ್ಷ್ಮೀನಾರಾಯಣ ಪ್ರಸಾದ್, ಕೆ. ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಕೆ. ದೀಪಕ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಜಗದೀಶ್, ಮೇಲುಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಮಾರಾಣಿ, ಸಬ್ ಇನ್ಸ್ಪೆಕ್ಟರ್ ಸುನಿಲ್  ಸೇರಿದಂತೆ ನೂರಾರು ಪೊಲೀಸರು ಭದ್ರತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ